Advertisement

ಡಿಸ್ಕಸ್‌ ತಾರೆ ವಿಕಾಸ್‌ ಗೌಡ ನಿವೃತ್ತಿ

06:00 AM May 31, 2018 | Team Udayavani |

ಬೆಂಗಳೂರು: ಏಶ್ಯನ್‌ ಗೇಮ್ಸ್‌ ಆರಂಭಕ್ಕೆ ಇನ್ನೇನು ಕೆಲವೇ ತಿಂಗಳು ಬಾಕಿ ಇವೆ. ಈ ಬೆನ್ನಲ್ಲೇ ಖ್ಯಾತ ಆ್ಯತ್ಲೀಟ್‌, ಡಿಸ್ಕಸ್‌ ತ್ರೋವರ್‌, ಕನ್ನಡಿಗ ವಿಕಾಸ್‌ ಗೌಡ 20 ವರ್ಷಗಳ ಸುದೀರ್ಘ‌ ಕ್ರೀಡಾ ಜೀವನಕ್ಕೆ ಬುಧವಾರ ವಿದಾಯ ಘೋಷಿಸಿದ್ದಾರೆ. ಕಳೆದ ಒಂದು ವರ್ಷದಿಂದ ಡಿಸ್ಕಸ್‌ ತ್ರೋನಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಒಡಿಶಾದ ಭುವನೇಶ್ವರದಲ್ಲಿ 2017ರಲ್ಲಿ ನಡೆದ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ವಿಕಾಸ್‌ ಕಂಚಿನ ಪದಕ ಗೆದ್ದಿದ್ದರು. ಬಳಿಕ ಇವರಿಂದ ಪದಕ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಇದೆಲ್ಲದರಿಂದಾಗಿ ನಿವೃತ್ತಿಗೆ ನಿರ್ಧರಿಸಿದ್ದಾರೆ. ಮುಂದೆ ವಿಕಾಸ್‌ ಉನ್ನತ ಶಿಕ್ಷಣ ಮಾಡಿ ಉದ್ಯಮಿಯಾಗುವ ಕನಸು ಕಾಣುತ್ತಿದ್ದಾರೆ. ಸ್ವತಃ ಈ ವಿಷಯವನ್ನು ವಿಕಾಸ್‌ ಅವರು ಅಮೆರಿಕದ ಫ್ರೆಡ್ರಿಕ್‌ನಿಂದ “ಉದಯವಾಣಿ’ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

Advertisement

ಶೇ. 100ರಷ್ಟು ಪ್ರಯತ್ನದ ಖುಷಿ
ನನ್ನ ವೃತ್ತಿ ಬದುಕಿನಲ್ಲಿ ಮಾಡಿದ ಸಾಧನೆ ಶೇ.100ರಷ್ಟು ಖುಷಿ ಕೊಟ್ಟಿಲ್ಲ. ಕಠಿನ ತರಬೇತಿ, ಹಲವಾರು ಕೂಟಗಳಲ್ಲಿ ಶೇ. 100ರಷ್ಟು ಪ್ರಯತ್ನ ಹಾಕಿದ್ದೇನೆ. ಈ ಸಂತೋಷವಷ್ಟೇ ಸಾಕು ಎಂದಿದ್ದಾರೆ.

ಒಲಿಂಪಿಕ್ಸ್‌  ಪದಕ ಗೆಲ್ಲದ ಬೇಸರ
ಏಶ್ಯನ್‌ ಗೇಮ್ಸ್‌, ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದಿರುವ ನನಗೆ 4 ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರೂ ಪದಕ ಗೆಲ್ಲಲು ಸಾಧ್ಯವಾಗಿಲ್ಲ ಎನ್ನುವ ನೋವಿದೆ. ನನ್ನ ಸ್ಥಾನದಲ್ಲಿ ಯಾವುದೇ ಅಥ್ಲೀಟ್‌ ಇದ್ದರೂ ಮೊದಲು ಇಂತಹ ನೋವು ಕಾಡುವುದು ಸಹಜ. ಆದರೆ ಸೋಲು-ಗೆಲುವು ಇದೆರೆಡನ್ನು ಬದುಕಿನುದ್ದಕ್ಕೂ ಸಮಾನವಾಗಿ ಸ್ವೀಕರಿಸಿಕೊಂಡು ಬಂದಿದ್ದೇನೆ. ಪದಕ ಸಿಗದಿರುವುದರ ಬಗ್ಗೆ ಯೋಚಿಸುವುದಿಲ್ಲ ಎಂದರು.

ಎಂಬಿಎ ಮಾಡಿ ಉದ್ಯೋಗ
 ಮುಂದೆ ಎಂಬಿಎ ಉನ್ನತ ಶಿಕ್ಷಣ ಮಾಡುವ ಗುರಿ ಇದೆ. ಕುಟುಂಬದವರ ಸಮ್ಮತಿಯೂ ಸಿಕ್ಕಿದೆ. ನಾರ್ಥ್ ಕ್ಯಾರೋಲಿನಾ ವಿಶ್ವ ವಿದ್ಯಾಲಯದಲ್ಲಿ ಎಂಬಿಎ ಮಾಡುತ್ತೇನೆ. ಬಳಿಕ ಉದ್ಯಮಿಯಾಗುತ್ತೇನೆ ಎಂದಿದ್ದಾರೆ. ಶಿಕ್ಷಣ, ಉದ್ಯೋಗದ ಕನಸಿನಲ್ಲಿರುವ ವಿಕಾಸ್‌ ಗೌಡ ಸದ್ಯಕ್ಕೆ ಮದುವೆಯಾಗುವುದಿಲ್ಲ? ಈ ಕುರಿತಂತೆ ಕೇಳಿದ ಪ್ರಶ್ನೆಗೆ ಅವರು ಮೌನವನ್ನೇ ಉತ್ತರವಾಗಿ ನೀಡಿದ್ದಾರೆ. ಈ ಮೂಲಕ ಸದ್ಯಕ್ಕೆ ಮದುವೆ ಇಲ್ಲ ಎನ್ನುವುದನ್ನು ಸಾರಿದ್ದಾರೆ.

ಮೈಸೂರು ಮೂಲದ ವಿಕಾಸ್‌
ವಿಕಾಸ್‌ ಮೂಲತಃ ಮೈಸೂರಿನವರು. ಪ್ರಸ್ತುತ ವಿಕಾಸ್‌ಗೆ 34 ವರ್ಷ. ತಂದೆ ಶಿವೇ ಗೌಡ. ಭಾರತ ಆ್ಯತ್ಲೆಟಿಕ್ಸ್‌ ತಂಡದ ಒಲಿಂಪಿಕ್ಸ್‌ ಕೋಚ್‌ ಆಗಿದ್ದವರು. ವಿಕಾಸ್‌ಗೆ 6 ವರ್ಷವಾಗಿದ್ದಾಗ ಇವರ ಕುಟುಂಬ ಅಮೆರಿಕಕ್ಕೆ ತೆರಳಿ ನೆಲೆಸಿದರು. ಬಳಿಕ ವಿಕಾಸ್‌ ಅಮೆರಿಕದ ಫ್ರೆಡಿಕ್‌ನಲ್ಲಿ ತರಬೇತಿ ಪಡೆದರು. ಹೀಗಿದ್ದರೂ ಇವರ ಕುಟುಂಬ ಭಾರತವನ್ನು ಮರೆಯಲಿಲ್ಲ. ಒಲಿಂಪಿಕ್ಸ್‌ ಸಹಿತ ವಿಶ್ವದ ಪ್ರಮುಖ ಕ್ರೀಡಾಕೂಟಗಳಲ್ಲಿ  ಅಮೆರಿಕವನ್ನು ಪ್ರತಿನಿಧಿಸುವ ಅವಕಾಶ ಇದ್ದರೂ ಭಾರತವನ್ನೇ ಪ್ರತಿನಿಧಿಸಿ ದೇಶಪ್ರೇಮ ಮೆರೆದಿದ್ದಾರೆ ವಿಕಾಸ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next