ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Actor Darshan) ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಸೋಮವಾರ(ಅ.14ರಂದು) 57ನೇ ಸಿಸಿಎಚ್ ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದೆ. ಎ2 ಆರೋಪಿ ದರ್ಶನ್, ಎ1 ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಜಾ ಮಾಡಲಾಗಿದ್ದು ಜೈಲೇ ಗತಿ ಎನ್ನುವಂತಾಗಿದೆ. ಎ 11 ನಾಗರಾಜು, ಎ 12 ಲಕ್ಷ್ಮಣ್ ಅವರ ಜಾಮೀನು ಅರ್ಜಿಯನ್ನೂ ವಜಾ ಮಾಡಿದೆ. ಇದೆ ವೇಳೆ ಎ 8 ರವಿಶಂಕರ್, ಎ 13 ದೀಪಕ್ ಗೆ ಜಾಮೀನು ಮಂಜೂರು ಮಾಡಿದೆ.
ದರ್ಶನ್ ಪರ ವಕೀಲ ನಾಗೇಶ್ , ಪೊಲೀಸರ ಪರ ಎಸ್‌ಪಿಸಿ ಪ್ರಸನ್ನ ಕುಮಾರ್ ಅವರ ವಾದ – ಪ್ರತಿವಾದವನ್ನು ಆಲಿಸಿರುವ ನ್ಯಾಯಧೀಶ ಜೈಶಂಕರ್ ಅವರು ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿದ್ದಾರೆ.
ಎ2 ದರ್ಶನ್ , ಎ1 ಪವಿತ್ರಾ ಗೌಡ (Pavithra Gowda) , ರವಿಶಂಕರ್, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಅವರು ಪ್ರಕಟಿಸಿದ್ದಾರೆ.
ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ , ಪವಿತ್ರಾ ಪರ ವಾದ ಮಂಡಿಸಿದ್ದು ಯಾರು?
ಕೊಲೆ ಪ್ರಕರಣದಲ್ಲಿ ದರ್ಶನ್ ಆರಂಭದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದರು. ಅಲ್ಲಿ ರಾಜ್ಯಾತಿಥ್ಯವನ್ನು ನೀಡಿದ ಆರೋಪ ಕೇಳಿಬಂದ ಹಿನ್ನೆಲೆ ಅವರನ್ನು ಬಳ್ಳಾರಿ ಜೈಲಿಗೆ ಶಿಪ್ಟ್ ಮಾಡಲಾಗಿತ್ತು. ದರ್ಶನ್ ಪರ ಸಿ.ವಿ ನಾಗೇಶ್ ವಾದ ಮಂಡಿಸಿದ್ದರು. ಪೊಲೀಸರ ಪರ ಎಸ್ ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಇತ್ತ ಪವಿತ್ರಾ ಗೌಡ ಪರ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು.
ಆರೋಪ ಪಟ್ಟಿಯಲ್ಲಿ ಏನಿತ್ತು?:
ತನಿಖಾಧಿಕಾರಿ ಎಸಿಪಿ ಚಂದನ್(ACP Chandan) ಅವರ ನೇತೃತ್ವದಲ್ಲಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಸೆ.4 ರಂದು 3ʼ991 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಇದಾದ ಬಳಿಕ ಸೆ.21ರಂದು ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಕೋರ್ಟ್‌ಗೆ ಸಲ್ಲಿಕೆ ಮಾಡಿರುವ ದೋಷಾರೋಪಪಟ್ಟಿಯಲ್ಲಿ ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಗಳನ್ನು ಉಲ್ಲೇಖ ಮಾಡಲಾಗಿದೆ. 3 ಪ್ರತ್ಯಕ್ಷ ಸಾಕ್ಷಿಗಳಿದ್ದು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳಿವೆ. 164ರ ಅಡಿಯಲ್ಲಿ 27 ಜನರ ಹೇಳಿಕೆ, 161ರ ಅಡಿಯಲ್ಲಿ 70 ಜನರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ 59 ಜನರ ಸಮಕ್ಷಮದಲ್ಲಿ ಮಹಜರು ಮಾಡಲಾಗಿದೆ. 8 ವೈದ್ಯರು, ತಹಶೀಲ್ದಾರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ ಕೂಡ ಉಲ್ಲೇಖ ಮಾಡಲಾಗಿದೆ.
ಪ್ರಬಲ ವಾದ – ಪ್ರತಿವಾದ: ಜಾಮೀನು ಅರ್ಜಿ ಸಲ್ಲಿಸಿದ್ದ ದರ್ಶನ್ ಪರ ಸಿವಿ ನಾಗೇಶ್ ಅವರು ಆರೋಪ ಪಟ್ಟಿಯಲ್ಲಿನ ಕೆಲ ದೋಷಗಳು ಸೇರಿದಂತೆ, ಪೊಲೀಸರ ತನಿಖೆಯಲ್ಲಿನ ಕೆಲ ಅಂಶಗಳನ್ನು ಕೋರ್ಟ್ ಮುಂದೆ ಉಲ್ಲೇಖಿಸಿ ಜಾಮೀನು ನೀಡುವಂತೆ ವಾದಿಸಿದ್ದರು. ಇದಲ್ಲದೆ ಪೋಸ್ಟ್ ಮಾರ್ಟಂ ವರದಿ, ಟವರ್ ಲೊಕೇಷನ್ ಸೇರಿದಂತೆ ತಾಂತ್ರಿಕ ಸಾಕ್ಷಿ ತಿರುಚುವಿಕೆಯ ಬಗ್ಗೆಯೂ ನಾಗೇಶ್ ಉಲ್ಲೇಖಿಸಿದ್ದರು.
ಇನ್ನೊಂದೆಡೆ ಎಸ್ ಪಿಪಿ, “ಆರೋಪಿಗಳ, ಸಾಕ್ಷಿಗಳ ಸಿಡಿಆರ್ ದತ್ತಾಂಶವನ್ನು ವಿಶ್ಲೇಷಣೆ , ದರ್ಶನ್ ಮೊಬೈಲ್, ಪವಿತ್ರಾ ಗೌಡ ಜತೆಗಿನ ಚಾಟ್, ಸಾಕ್ಷಿಗಳ ಹೇಳಿಕೆ , ರಕ್ತದ ಕಲೆ, ಹಣದ ಮೂಲ ಸೇರಿದಂತೆ ಇತರೆ ಅಂಶಗಳನ್ನು ಉಲ್ಲೇಖಿಸಿ ವಾದ ಮಂಡಿಸಿದ್ದರು.
ದರ್ಶನ್ ಬಂಧನ ಆದದ್ದು ಯಾವಾಗ? :
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೂ.11 ರಂದು ದರ್ಶನ್ ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ತನಿಖೆ ಮುಂದುವರೆದಂತೆ ಪ್ರಕರಣದಲ್ಲಿ ಒಟ್ಟು 18 ಮಂದಿಯನ್ನು ಬಂಧಿಸಲಾಗಿತ್ತು.
ಮೂವರಿಗೆ ಜಾಮೀನು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಎ15 ಕಾರ್ತಿಕ್, ಎ17 ನಿಖಿಲ್ ಹಾಗೂ ಎ16 ಕೇಶವಮೂರ್ತಿಗೆ ಸೆ.23 ರಂದು ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಕೊಲೆ ನಂತರದ ಸಾಕ್ಷ್ಯ ನಾಶ ಆರೋಪ ಮಾತ್ರ ಇವರ ಮೇಲಿತ್ತು. ಈ ಜಾಮೀನು ಇತರೆ ಆರೋಪಿಗಳ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ಕೋರ್ಟ್ ಗೆ ಹೇಳಿತ್ತು.
ಏನಿದು ಪ್ರಕರಣ?: ನಟ ದರ್ಶನ್ ಅವರಿಗೆ ಆತ್ಮೀಯವಾಗಿರುವ ನಟಿ ಪವಿತ್ರ ಗೌಡ ಅವರ ಫೋಟೋಗಳಿಗೆ ರೇಣುಕಾ ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದ. ಇದಲ್ಲದೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ ಕಾರಣಕ್ಕೆ ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಲಾಗಿತ್ತು. ಜೂ. 8ರಂದು ರಾತ್ರಿ ವಿನಯ್ ಎನ್ನುವವರ ಶೆಡ್ ಗೆ ಕರೆತಂದು ಬಲವಾಧ ಆಯುಧದಿಂದ ರೇಣುಕಾ ಅವರಿಗೆ ಹೊಡೆದು ಕೊಲೆಗೈದು, ಮೃತದೇಹನ್ನು ಮೋರಿಗೆ ಎಸೆಯಲಾಗಿತ್ತು. ಜೂ. 9ರಂದು ಮೋರಿಯಲ್ಲಿ ಬೀದಿ ನಾಯಿಗಳು ಮೃತದೇಹವನ್ನು ಎಳೆಯುತ್ತಿದ್ದನ್ನು ನೋಡಿ, ಪಕ್ಕದಲ್ಲಿದ್ದ ಅಪಾರ್ಟ್ ಮೆಂಟ್ ಭದ್ರತಾ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ದೇಹದ ಮೇಲಿನ ಗಾಯಗಳನ್ನು ಗುರುತಿಸಿ ತನಿಖೆಯನ್ನು ಆರಂಭಿಸಲಾಗಿತ್ತು. ಇದು ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವುದು ಗೊತ್ತಾಗಿತ್ತು. ಈ ಬಗ್ಗೆ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದರು. ವಶಕ್ಕೆ ಪಡೆದ ನಾಲ್ವರು ಆರೋಪಿಗಳು ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆಯಲ್ಲಿ ಹೇಳಿರುವುದಾಗಿ ತಿಳಿದು ಬಂದಿತ್ತು.