Advertisement

ಮೇರಿ ಕೋಮ್‌, ವಿಕಾಸ್‌ , ಗೌರವ್‌ ಬಾಕ್ಸಿಂಗ್‌ ಬಂಗಾರದ ಗೌರವ

06:05 AM Apr 15, 2018 | |

ಗೋಲ್ಡ್‌ಕೋಸ್ಟ್‌: ಭಾರತದ ಬಾಕ್ಸಿಂಗ್‌ ಲೆಜೆಂಡ್‌ ಎಂ.ಸಿ. ಮೇರಿ ಕೋಮ್‌ ಕಾಮನ್ವೆಲ್ತ್‌ ಗೇಮ್ಸ್‌ ಸ್ವರ್ಣ ಪದಕ ಗೆದ್ದು ದೇಶದ ಕ್ರೀಡಾಭಿಮಾನಿಗಳ ನಿರೀಕ್ಷೆಯನ್ನು ಸಾಕಾರಗೊಳಿಸಿದ್ದಾರೆ. ಪುರುಷರ ವಿಭಾಗದಲ್ಲಿ ಗೌರವ್‌ ಸೋಲಂಕಿ ಮತ್ತು ವಿಕಾಸ್‌ ಕೃಷ್ಣನ್‌ ಕೂಡ ಚಿನ್ನದ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ. 

Advertisement

ಆದರೆ ಸೆಮಿಫೈನಲ್‌ನಲ್ಲಿ ಎಡವಿದ ಅಮಿತ್‌ ಪಾಂಗಾಲ್‌ ಮತ್ತು ಮನೀಷ್‌ ಕೌಶಿಕ್‌ ಬೆಳ್ಳಿ ಪದಕಕ್ಕೆ ತೃಪ್ತರಾಗಬೇಕಾಯಿತು.
5 ಬಾರಿಯ ವಿಶ್ವ ಚಾಂಪಿಯನ್‌ ಖ್ಯಾತಿಯ, 35ರ ಹರೆಯದ, ಒಲಿಂಪಿಕ್‌ ಕಂಚಿನ ಪದಕ ವಿಜೇತೆ “ಮೆಗ್ನಿಫಿಸೆಂಟ್‌ ಮೇರಿ’ ಪಾಲಿಗೆ ಇದು ಮೊದಲ ಕಾಮನ್ವೆಲ್ತ್‌ ಗೇಮ್ಸ್‌ ಪದಕ. ವಿಶ್ವ ಮಟ್ಟದ ಬಹುತೇಕ ಎಲ್ಲ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತ ಬಂದರೂ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಮಾತ್ರ ಮೇರಿ ಈವರೆಗೆ ದೇಶವನ್ನು ಪ್ರತಿನಿಧಿಸಿರಲಿಲ್ಲ. ಇದಕ್ಕೆ ಗೋಲ್ಡ್‌ಕೋಸ್ಟ್‌ನಲ್ಲಿ ಮುಹೂರ್ತ ಕೂಡಿಬಂತು. 48 ಕೆಜಿ ವಿಭಾಗದಲ್ಲಿ ಸ್ಪರ್ಧೆಗಿಳಿದ ಮೇರಿ ಕೋಮ್‌ ಗೇಮ್ಸ್‌ ಪಾದಾರ್ಪಣೆಯಲ್ಲೇ ಬಂಗಾರದಿಂದ ಸಿಂಗಾರಗೊಂಡರು.

ಏಕಪಕ್ಷೀಯ ಫೈನಲ್‌ನಲ್ಲಿ ಮೇರಿ ಕೋಮ್‌ ಉತ್ತರ ಅಯರ್‌ಲ್ಯಾಂಡಿನ ಕ್ರಿಸ್ಟಿನಾ ಒ’ಹರಾ ಅವರನ್ನು 5-0 ಅಂತರದಿಂದ ಕೆಡವಿದರು. 22 ಹರೆಯದ, ತನ್ನ ದೇಶದಲ್ಲಿ ನರ್ಸಿಂಗ್‌ ಹೋಮ್‌ ಒಂದನ್ನು ನಡೆಸುತ್ತಿರುವ 22ರ ಹರೆಯದ ಕ್ರಿಸ್ಟಿನಾಗೆ ಮೇರಿ ಅನುಭವವನ್ನು ಎದುರಿಸಿ ನಿಲ್ಲಲಾಗಲಿಲ್ಲ. ಭಾರತದ ಎದುರಾಳಿಗೆ ಯಾವುದೇ ವಿಧದಲ್ಲೂ ಸಾಟಿಯಾಗಲಿಲ್ಲ.”ಮತ್ತೂಮ್ಮೆ ಇತಿಹಾಸ ನಿರ್ಮಿಸಿದ್ದಕ್ಕೆ ಖುಷಿಯಾಗುತ್ತಿದೆ. ಇದನ್ನು ನನ್ನ ಮೂವರು ಮಕ್ಕಳಿಗೆ ಅರ್ಪಿಸುತ್ತೇನೆ. ಈ ಪದಕ ಸಹಿತ ನನ್ನ ಪ್ರತಿಯೊಂದು ಪದಕವೂ ಸ್ಪೆಷಲ್‌. ನನ್ನೆಲ್ಲ ಪದಕಗಳ ಹಿಂದೆಯೂ ಕಠಿನ ಪರಿಶ್ರಮವಿದೆ. ಎಲ್ಲಿಯ ತನಕ ಫಿಟ್‌ನೆಸ್‌ ಹೊಂದಿರುತ್ತೇನೋ ಅಲ್ಲಿಯ ತನಕ ಬಾಕ್ಸಿಂಗ್‌ನಲ್ಲಿ ಮುಂದುವರಿಯುತ್ತೇನೆ…’ ಎಂದಿದ್ದಾರೆ 35ರ ಹರೆಯದ ಮಣಿಪುರಿ ಸಾಧಕಿ.

ಗೌರವ್‌ಗೂ ಮೊದಲ ಪದಕ
ಪುರುಷರ ವಿಭಾಗದ 52 ಕೆಜಿ ಫ್ಲೈವೇಟ್‌ ವಿಭಾಗದಲ್ಲಿ ಸ್ಪರ್ಧೆಗಿಳಿದಿದ್ದ ಗೌರವ್‌ ಸೋಲಂಕಿ ಅವರಿಗೂ ಇದು ಮೊದಲ ಕಾಮನ್ವೆಲ್ತ್‌ ಗೇಮ್ಸ್‌ ಕೂಟವಾಗಿತ್ತು. ಗೌರವ್‌ಗೂ ಉತ್ತರ ಅಯರ್‌ಲ್ಯಾಂಡಿನ ಸ್ಪರ್ಧಿಯೇ ಫೈನಲ್‌ನಲ್ಲಿ ಎದುರಾಗಿದ್ದರು. ಬ್ರೆಂಡನ್‌ ಇರ್ವಿನ್‌ ವಿರುದ್ಧ ನಡೆದ ಚಿನ್ನದ ಕಾಳಗದಲ್ಲಿ ಸೋಲಂಕಿ 4-1 ಅಂತರದ ಗೆಲುವು ಸಾಧಿಸಿದರು. ತೃತೀಯ ಸುತ್ತಿನಲ್ಲಿ ಸೋಲನುಭವಿಸಿದರೂ ಮೊದಲೆರಡು ಸುತ್ತುಗಳ ಮೇಲುಗೈ ಗೌರವ್‌ ಚಿನ್ನಕ್ಕೆ ಧಾರಾಳವೆನಿಸಿತು.

“ಈ ಪದಕವನ್ನು ನಾನು ಅಮ್ಮನಿಗೆ ಅರ್ಪಿಸುತ್ತಿದ್ದೇನೆ. ನನ್ನ ಮುಂದಿನ ದೊಡ್ಡ ಕನಸೆಂದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಸಾಧನೆಯನ್ನು ಪುನರಾವರ್ತಿಸಿ ಭಾರತದ ತ್ರಿವರ್ಣ ಧ್ವಜವನ್ನು ಅರಳಿಸುವುದು…’ ಎಂಬುದಾಗಿ ಗೌರವ್‌ ಸೋಲಂಕಿ ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ.

Advertisement

ಅಮಿತ್‌, ಮನೀಷ್‌ಗೆ ನಿರಾಸೆ
49 ಕೆಜಿ ಲೈಟ್‌ ಫ್ಲೈವೇಟ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮಿತ್‌ ಪಾಂಗಾಲ್‌ ಫೈನಲ್‌ನಲ್ಲಿ ಇಂಗ್ಲೆಂಡಿನ ಗಲಾಲ್‌ ಯಾಫೈ ವಿರುದ್ಧ 1-3 ಅಂತರದ ಸೋಲನುಭವಿಸಿದರು. “ಈ ಫ‌ಲಿತಾಂಶದಿಂದ ಬೇಸರವಾಗಿದೆ. ಇದು 50-50 ಬೂಟ್‌ ಆಗಿತ್ತು…’ ಎಂದು ಅಮಿತ್‌ ನಿರಾಸೆ ವ್ಯಕ್ತಪಡಿಸಿದರು.60 ಕೆಜಿ ಲೈಟ್‌ವೇಟ್‌ ಫೈನಲ್‌ನಲ್ಲಿ ಮನೀಷ್‌ ಕೌಶಿಕ್‌ ಅವರಿಗೂ ಇದೇ ಸ್ಥಿತಿ ಎದುರಾಯಿತು. ಆಸ್ಟ್ರೇಲಿಯದ ನೆಚ್ಚಿನ ಬಾಕ್ಸರ್‌ ಹ್ಯಾರ್ರಿ ಗಾರ್‌ಸೈಡ್‌ ವಿರುದ್ಧ 2-3 ಅಂತರದಿಂದ ಎಡವಿದರು.

Advertisement

Udayavani is now on Telegram. Click here to join our channel and stay updated with the latest news.

Next