Advertisement

ಶ್ರೇಯಸಿಗೆ ಸ್ವರ್ಣ ಶ್ರೇಯಸ್ಸು: ವನಿತಾ ಡಬಲ್‌ ಟ್ರ್ಯಾಪ್‌ನಲ್ಲಿ ಚಿನ್ನ

07:00 AM Apr 12, 2018 | |

ಗೋಲ್ಡ್‌ಕೋಸ್ಟ್‌: ಆಸ್ಟ್ರೇಲಿಯನ್‌ ಎದುರಾಳಿಯನ್ನು ಶೂಟ್‌-ಆಫ್ನಲ್ಲಿ ಮಣಿಸಿದ ಭಾರತದ ವನಿತಾ ಶೂಟರ್‌ ಶ್ರೇಯಸಿ ಸಿಂಗ್‌ ಕಾಮನ್ವೆಲ್ತ್‌ ಗೇಮ್ಸ್‌ ಡಬಲ್‌ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಸ್ವರ್ಣ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೋರ್ವ ಶೂಟರ್‌ ವರ್ಷಾ ವರ್ಮನ್‌ 4ನೇ ಸ್ಥಾನಕ್ಕೆ ಕುಸಿದು ಪದಕ ವಂಚಿತರಾದರು. 

Advertisement

ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್‌ ಹಣಾಹಣಿಯಲ್ಲಿ ಶ್ರೇಯಸಿ ಸಿಂಗ್‌ ಮತ್ತು ಆಸ್ಟ್ರೇಲಿಯದ ಎಮ್ಮಾ ಕಾಕ್ಸ್‌ 96 ಅಂಕ ಸಂಪಾದಿಸಿದರು. ಶೂಟೌಟ್‌ ವೇಳೆ ಶ್ರೇಯಸಿ 2-1ರಿಂದ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. 87 ಅಂಕ ಪಡೆದ ಸ್ಕಾಟ್ಲೆಂಡಿನ ಲಿಂಡಾ ಪಿಯರ್ಸನ್‌ ಕಂಚಿನ ಪದಕ ಗೆದ್ದರು. ವರ್ಷಾ ವರ್ಮನ್‌ 86 ಅಂಕಗಳಿಗೆ ಸಮಾಧಾನಪಡಬೇಕಾಯಿತು. ವರ್ಷಾ ಸ್ವಲ್ಪ ಸಮಯವಷ್ಟೇ ತೃತೀಯ ಸ್ಥಾನದಲ್ಲಿದ್ದರು.

ಬೆಳ್ಳಿಯಿಂದ ಚಿನ್ನಕ್ಕೆ...
26ರ ಹರೆಯದ, ಹೊಸದಿಲ್ಲಿಯ ಶೂಟರ್‌ ಶ್ರೇಯಸಿ ಸಿಂಗ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಗೆದ್ದ ಮೊದಲ ಚಿನ್ನದ ಪದಕ ಇದಾಗಿದೆ. ಕಳೆದ ಸಲ ಗ್ಲಾಸೊದಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರು. “ಈಗ ಸಮಾಧಾನವಾಗಿದೆ. ಕಳೆದ ಸಲ ಗ್ಲಾಸೊದಲ್ಲಿ ಬೆಳ್ಳಿ ಪದಕ ಗೆದ್ದಾಗ ನನಗೆ ಬಹಳ ಬೇಜಾರಾಗಿತ್ತು. ಚಿನ್ನ ಗೆಲ್ಲಲಾಗಲಿಲ್ಲವಲ್ಲ ಎಂದು ತೀವ್ರ ನಿರಾಸೆ ಅನುಭವಿಸಿದ್ದೆ. ಇಂದಿನ ಸ್ಪರ್ಧೆಯೂ ಭಾರೀ ಪೈಪೋಟಿಯಿಂದ ಕೂಡಿತ್ತು. ನಾನು ಕೂಡ ಹಿನ್ನಡೆಯಲ್ಲಿದ್ದೆ. ಆದರೆ ಶೂಟ್‌-ಆಫ್ನಲ್ಲಿ ನನ್ನ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದೆ. ಈ ಪರಿಪೂರ್ಣ ಪ್ರಯತ್ನಕ್ಕೆ ಚಿನ್ನದ ಉಡುಗೊರೆ ಲಭಿಸಿತು’ ಎಂದು ಶ್ರೇಯಸಿ ಸಂಭ್ರಮಿಸಿದರು.

3 ಸುತ್ತುಗಳ ಸ್ಪರ್ಧೆಯ ಬಳಿಕ ಶ್ರೇಯಸಿ ಎರಡರಲ್ಲಿ, ವರ್ಷಾ 3ನೇ ಸ್ಥಾನದಲ್ಲಿದ್ದರು. ಅನಂತರವೇ ಶ್ರೇಯಸಿ ಚಿನ್ನದ ಸ್ಪರ್ಧೆಗೆ ಮರಳಿದ್ದು. ಈ ಕುರಿತು ಪ್ರತಿಕ್ರಿಯಿಸಿದ ಶ್ರೇಯಸಿ, “ನನ್ನ ತರಬೇತುದಾರರು ಬಹಳ ಸಹಾಯ ಮಾಡಿದರು. ಇಲ್ಲೇ ಇದ್ದ ನನ್ನ ಕುಟುಂಬದವರೂ ಅಪಾರ ಬೆಂಬಲ ನೀಡಿದರು. ಈ ಬಾರಿ ಚಿನ್ನವನ್ನು ಗೆದ್ದೇ ಗೆಲ್ಲಬೇಕೆಂಬ ಸಂಕಲ್ಪ ನನ್ನದಾಗಿತ್ತು. ಯಾವ ಕಾರಣಕ್ಕೂ ಇನ್ನೊಂದು ಬೆಳ್ಳಿಯೊಂದಿಗೆ ವಾಪಸಾಗಬಾರದೆಂಬುದೇ ನನ್ನ ಅಚಲ ನಿರ್ಧಾರವಾಗಿತ್ತು’ ಎಂಬುದಾಗಿ ಶ್ರೇಯಸಿ ಮಾಧ್ಯಮದವರಲ್ಲಿ ಹೇಳಿದರು. 2017ರ ಕಾಮನ್ವೆಲ್ತ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲೂ ಶ್ರೇಯಸಿ ಬೆಳ್ಳಿಗೇ ಗುರಿ ಇರಿಸಿದ್ದರು. 2014ರ ಏಶ್ಯಾಡ್‌ನ‌ಲ್ಲಿ ಕಂಚಿನ ಪದಕ ಗೆದ್ದ ಹಿರಿಮೆ ಇವರದ್ದಾಗಿದೆ.

“ಸದ್ಯ ಪಾರ್ಟಿ ನಡೆಸಿ ಸಂಭ್ರಮಾಚರಣೆ ಮಾಡುವ ಯೋಜನೆಯಲ್ಲಿಲ್ಲ. ಕೂಡಲೇ ತರಬೇತಿಗೆ ವಾಪಸಾಗಬೇಕಿದೆ. ಒಂದು ದಿನದ ಬಳಿಕ ಇನ್ನೊಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಿದೆ’ ಎಂದು ಶ್ರೇಯಸಿ ಸಿಂಗ್‌ ಅವರು ಹೇಳಿದರು.

Advertisement

ಕ್ರೀಡಾ ಬದುಕಿನ ಮೈಲುಗಲ್ಲು: ಶ್ರೇಯಸಿ
“ಈ ಚಿನ್ನದ ಪದಕ ನನ್ನ ಕ್ರೀಡಾ ಬದುಕಿನ ನೂತನ ಮೈಲುಗಲ್ಲಾಗಿದೆ…’ ಎಂದಿದ್ದಾರೆ ಶ್ರೇಯಸಿ ಸಿಂಗ್‌. ಅವರು ಹೀಗೆ ಹೇಳುವುದಕ್ಕೂ ಕಾರಣವಿದೆ. 2022ರ ಬರ್ಮಿಂಗಂ ಕಾಮನ್ವೆಲ್ತ್‌ ಗೇಮ್ಸ್‌ನಿಂದ ಶೂಟಿಂಗ್‌ ಸ್ಪರ್ಧೆಯನ್ನು ಕೈಬಿಡಲಾಗಿದೆ! “ನನ್ನ ಈ ಸಾಧನೆ ಸುದೀರ್ಘ‌ ಕಾಲ ಸಂಭ್ರಮಿಸುವಂತೆ ಮಾಡಲಿದೆ. ಇದೊಂದು ಸ್ಪೆಷಲ್‌ ಮೆಡಲ್‌ ಕೂಡ ಆಗಿದೆ. 2022ರ ಗೇಮ್ಸ್‌ನಿಂದ ಶೂಟಿಂಗ್‌ ಸ್ಪರ್ಧೆಯನ್ನು ಕೈಬಿಟ್ಟಿರುವ ಕಾರಣ ಗೇಮ್ಸ್‌ನಲ್ಲಿ ಇಂಥ ಅವಕಾಶ ನನ್ನ ಬದುಕಿನಲ್ಲಿ ಸಿಗದು’ ಎಂದು ಶ್ರೇಯಸಿ ಹೇಳಿದರು.
2004ರ ಏಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರೇ ತನಗೆ ಸ್ಫೂರ್ತಿ ಎಂದ ಶ್ರೇಯಸಿ, ಹೊಸದಿಲ್ಲಿ ಗೇಮ್ಸ್‌ನಲ್ಲಿ ಯಾವುದೇ ಪದಕ ಗೆದ್ದಿರಲಿಲ್ಲ. ಬೆನ್ನುನೋವಿನ ನಡುವೆಯೇ ಗ್ಲಾಸೊಗೆ ಬಂದಿಳಿದು ಬೆಳ್ಳಿ ಪದಕಕ್ಕೆ ಗುರಿ ಇರಿಸಿದ್ದರು. ಈ ಬಾರಿ ಹಳದಿ ಲೋಹ ಒಲಿದಿದೆ.

ಮಾಜಿ ಕೇಂದ್ರ ಸಚಿವರ ಪುತ್ರಿ!
ಶ್ರೇಯಸಿ ಸಿಂಗ್‌ ಅವರ ಅಜ್ಜ ಕುಮಾರ್‌ ಸುರೇಂದ್ರ ಸಿಂಗ್‌ ಮತ್ತು ತಂದೆ ದಿಗ್ವಿಜಯ್‌ ಸಿಂಗ್‌ “ನ್ಯಾಶನಲ್‌ ರೈಫ‌ಲ್‌ ಅಸೋಸಿಯೇಶನ್‌ ಆಫ್ ಇಂಡಿಯಾ’ದ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿದ್ದರು. 2010ರ ಹೊಸದಿಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ನ 2 ಶೂಟಿಂಗ್‌ ಸ್ಪರ್ಧೆಗಳಲ್ಲಿ ಶ್ರೇಯಸಿ ಸ್ಪರ್ಧೆಗಿಳಿದರೂ ಪದಕ ಲಭಿಸಿರಲಿಲ್ಲ. ಶ್ರೇಯಸಿಯ ತಂದೆ ದ್ವಿಗ್ವಿಜಯ್‌ ಸಿಂಗ್‌ ಬಿಹಾರದ ರಾಜಕಾರಣಿಯಾಗಿದ್ದು, ಚಂದ್ರಶೇಖರ್‌ ಹಾಗೂ ಅಟಲ್‌ ಬಿಹಾರಿ ವಾಜಪೇಯಿ ಸರಕಾರದಲ್ಲಿ ಕೇಂದ್ರ ಸಚಿವರೂ ಆಗಿದ್ದರು. ಶ್ರೇಯಸಿ 2010ರ ದಿಲ್ಲಿ ಗೇಮ್ಸ್‌ಗೆ ಅಣಿಯಾಗುತ್ತಿರುವ ಸಂದರ್ಭದಲ್ಲೇ ದಿಗ್ವಿಜಯ್‌ ಇಹಲೋಕ ತ್ಯಜಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next