ಹೊಸದಿಲ್ಲಿ : ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪದಕ್ಕೆ ರಾಜೀನಾಮೆ ನೀಡುವ ತನ್ನ ಕೊಡುಗೆಯನ್ನು ಸ್ವೀಕರಿಸಲೇಬೇಕು ಎಂಬ ಹಠಕ್ಕೆ ರಾಹುಲ್ ಗಾಂಧಿ ದೃಢವಾಗಿ ನಿಂತಿರುವ ಕಾರಣ ಅವರ ಉತ್ತರಾಧಿಕಾರಿಯನ್ನು ಕಂಡು ಕೊಳ್ಳುವ ಸಲುವಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮುಂದಿನ ನಾಲ್ಕು ದಿನಗಳ ಒಳಗೆ ಪುನಃ ಸಭೆ ಸೇರುವ ಸಾಧ್ಯತೆ ಇದೆ ವರದಿಗಳು ತಿಳಿಸಿವೆ.
ಸಿಡಬ್ಲ್ಯು ಸಿ ಮತ್ತೆ ಸಭೆ ಸೇರಿದ ಸಂದರ್ಭದಲ್ಲಿ ಕೂಡ ಪಕ್ಷಾಧ್ಯಕ್ಷ ಪದಕ್ಕೆ ರಾಜೀನಾಮೆ ನೀಡದಂತೆ ರಾಹುಲ್ ಅವರ ಮನ ಒಲಿಸುವ ಪ್ರಯತ್ನ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಒಂದೊಮ್ಮೆ ರಾಹುಲ್ ರಾಜೀನಾಮೆ ನೀಡುವ ತನ್ನ ದೃಢ ನಿರ್ಧಾರಕ್ಕೆ ಅಂಟಿಕೊಂಡಲ್ಲಿ ಹೊಸ ಅಧ್ಯಕ್ಷರನ್ನು ಕಂಡುಕೊಳ್ಳುವ ಪ್ರಯತ್ನ ನಡೆಯಲಿದೆ ಎನ್ನಲಾಗಿದೆ.
ಈಚೆಗಷ್ಟೇ ಮುಗಿದ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಯನೀಯ ಸೋಲು ಕಂಡಿರುವ ಕಾರಣ ಅದರ ಪೂರ್ತಿ ಜವಾಬ್ದಾರಿಯನ್ನು ತಾನು ಹೊರುತ್ತಿದ್ದು ಅದಕ್ಕಾಗಿ ಪಕ್ಷಾಧ್ಯಕ್ಷ ಹುದ್ದೆಗೆ ತಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.
ಪಕ್ಷಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ತನ್ನ ಅಚಲ ನಿರ್ಧಾರವನ್ನು ರಾಹುಲ್ ಗಾಂಧಿ ಈಗಾಗಲೇ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹಿತ ಪಕ್ಷದ ಅನೇಕ ಪ್ರಮುಖ ನಾಯಕರಿಗೆ ತಿಳಿಸಿದ್ದಾರೆ. ಅವರೆಲ್ಲ ರಾಹುಲ್ ನಿರ್ಧಾರವನ್ನು ಗೌರವಿಸಿರುವುದಾಗಿ ಮೂಲಗಳು ಹೇಳಿವೆ.