ಅಹಮದಾಬಾದ್: ಹಲವು ತಿಂಗಳ ಕಾಯುವಿಕೆ ಮುಗಿದಿದೆ. ಬಹು ನಿರೀಕ್ಷಿತ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಆರಂಭವಾಗಲಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಳೆದ ಬಾರಿಯ ರನ್ನರ್ ಅಪ್ ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದೆ.
ಇಂಗ್ಲೆಂಡ್ ಬರೋಬ್ಬರಿ 44 ವರ್ಷಗಳ ಬಳಿಕ ವಿಶ್ವಕಪ್ ಎತ್ತಿರುವ ಹಾಲಿ ಚಾಂಪಿಯನ್. ಅದೂ ಅದೃಷ್ಟದ ಬಲದಿಂದ ಕಪ್ ಎತ್ತಿದ ತಂಡ. 2019ರ ಫೈನಲ್ ಟೈ ಆದಾಗ, ಸೂಪರ್ ಓವರ್ ಕೂಡ ಟೈ ಆದಾಗ ಗರಿಷ್ಠ ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಕೈಗೆ ಕಪ್ ನೀಡಲಾಗಿತ್ತು. ನ್ಯೂಜಿಲ್ಯಾಂಡ್ ಈ ಎಡವಟ್ಟು ನಿಯಮಕ್ಕೆ ಈಗಲೂ ದುಃ ಖಪಡುತ್ತಿರಬಹುದು. ಹೀಗಾಗಿ ಈ ಬಾರಿಯ ಆರಂಭಿಕ ಪಂದ್ಯದಲ್ಲೇ ಸೇಡು ತೀರಿಸಿಕೊಂಡರೆ ಒಂದು ಹಂತದ ನೋವನ್ನು ಮರೆಯಬಹುದು.
ಸತತ 2 ವಿಶ್ವಕಪ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿಯೂ ಕಪ್ ಗೆಲ್ಲಲಾಗದ ನತದೃಷ್ಟ ತಂಡ ಈ ನ್ಯೂಜಿಲ್ಯಾಂಡ್. ಇಲ್ಲಿ ಕೂಡ ಆರಂಭದಲ್ಲೇ ಗಾಯದ ಹೊಡೆತಕ್ಕೆ ಸಿಲುಕಿದೆ. ನಾಯಕ ಕೇನ್ ವಿಲಿಯಮ್ಸನ್ ಹಾಗೂ ಪ್ರಧಾನ ವೇಗಿ ಟಿಮ್ ಸೌಥಿ ಇಬ್ಬರೂ ಪೂರ್ಣ ಪ್ರಮಾಣದ ಫಿಟ್‌ನೆಸ್ ಹೊಂದಿಲ್ಲ. ಈ ಅನುಭವಿಗಳಿಬ್ಬರೂ ಉದ್ಘಾಟನ ಪಂದ್ಯಕ್ಕೆ ಲಭ್ಯರಿಲ್ಲ. ಹೀಗಾಗಿ ಕೀಪರ್ ಟಾಮ್ ಲ್ಯಾಥಂ ಅವರಿಗೆ ತಂಡವನ್ನು ಮುನ್ನಡೆಸುವ ಯೋಗ ಲಭಿಸಿದೆ.
ಅತ್ತ ಇಂಗ್ಲೆಂಡ್ ತಂಡದಲ್ಲಿಯೂ ಕಳೆದ ವಿಶ್ವಕಪ್ ಫೈನಲ್ ಹೀರೋ ಬೆನ್ ಸ್ಟೋಕ್ಸ್ ಅವರು ಗಾಯಾಳಾಗಿದ್ದು ಮೊದಲ ಪಂದ್ಯಕ್ಕೆ ಲಭ್ಯರಿಲ್ಲ. ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದ ಸ್ಟೋಕ್ಸ್ ಈ ವಿಶ್ವಕಪ್ ಗಾಗಿ ನಿವೃತ್ತಿ ಹಿಂಪಡೆದಿದ್ದರು.
ತಂಡಗಳು;
ಇಂಗ್ಲೆಂಡ್: ಜಾನಿ ಬೇರಿಸ್ಟೋ, ಡೇವಿಡ್ ಮಲನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾ/ವಿ.ಕೀ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್
ನ್ಯೂಜಿಲ್ಯಾಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾ/ವಿ.ಕೀ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮ್ಯಾಟ್ ಹೆನ್ರಿ, ಮಿಚೆಲ್ ಸ್ಯಾಂಟ್ನರ್, ಜೇಮ್ಸ್ ನೀಶಮ್, ಟ್ರೆಂಟ್ ಬೌಲ್ಟ್.