Advertisement

ಕ್ಯೂಟ್‌ ವೇರಿಯಂಟ್‌: ಸೆಲೆರಿಯೋ ಎಕ್ಸ್‌, ಫ್ಯಾಮಿಲಿ ಫೇವರಿಟ್‌ 

02:38 PM Jan 15, 2018 | |

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿಕೊಂಡು ಬಂದಿರುವ ಮಾರುತಿ ಸುಜುಕಿ ಕಂಪನಿ ತನ್ನ ಉತ್ಪಾದನೆಯ ಮಿನಿ ಕಾರುಗಳ ಸಾಲಿಗೆ ಸೇರಿದ ಸೆಲೆರಿಯೋ ಕಾರಿನ ಹೊಸ ವೇರಿಯಂಟ್‌ ಪರಿಚಯಿಸಿದೆ. ಇದು, ಈವರೆಗಿನ ವೇರಿಯಂಟ್‌ಗಳಿಗಿಂತ ಭಿನ್ನವಾಗಿದೆ ಎಂದು ಹೇಳಿಕೊಂಡಿರುವ  ಕಂಪನಿ, ಇನ್ನಷ್ಟು ಚಾಲಕ ಸ್ನೇಹಿಯಾಗಿಸಲು ಪ್ರಯತ್ನಿಸಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

Advertisement

ವಿನ್ಯಾಸದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಯನ್ನೇನೂ ಮಾಡದೇ ಇದ್ದರೂ, ಗ್ರಾಹಕರ ಬೇಡಿಕೆ ಹಾಗೂ ಅಭಿಪ್ರಾಯಗಳನ್ನು ಆಧರಿಸಿ ಸಣ್ಣ-ಪುಟ್ಟ ಬದಲಾವಣೆ ಮಾಡಿದೆ. ಈ ತಲೆಮಾರಿನ ಗ್ರಾಹಕರು ಬಯಸುವ ತಂತ್ರಜ್ಞಾನಗಳನ್ನೂ ಪರಿಚಯಿಸಿದೆ. ಈ ಮೂಲಕ ಗ್ರಾಹಕ ಸಮೂಹವನ್ನು ಇನ್ನಷ್ಟು ಆಕರ್ಷಿಸಲು, ಅವರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ.

 ಈಗಾಗಲೇ ಎಂಟು ವೇರಿಯಂಟ್‌ಗಳನ್ನು ಮ್ಯಾನ್ಯುಯಲ್‌ ಮತ್ತು ಆಟೋ ಟ್ರಾನ್ಸ್‌ಮಿಷನ್‌ನಲ್ಲಿ ಪರಿಚಯಿಸಿರುವ ಮಾರುತಿ ಸುಜುಕಿ ಕಂಪನಿ, ದಾಖಲೆಯ ಮಟ್ಟದಲ್ಲಿಯೇ ಸೆಲೆರಿಯೋ ಕಾರನ್ನೂ ಮಾರಾಟ ಮಾಡಿದೆ. ಇದೀಗ ಮಾರುಕಟ್ಟೆಗೆ ಬಂದಿರುವ ಹೊಸಕಾರು, ಅದೇ ಕಂಪನಿಯ ಮಿನಿ ಕಾರುಗಳಾದ ಕೆ10, ಸ್ವಿಫ್ಟ್, ವ್ಯಾಗನ್‌ ಆರ್‌ ಕಾರುಗಳಿಗೆ ಹಾಗೂ ಹುಂಡೈ ಐ10, ಫೋರ್ಡ್‌ ಫಿಗೋ ಇತ್ಯಾದಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಐದು ಬಣ್ಣಗಳಲ್ಲಿ ಲಭ್ಯ
ಸಾಲಿಡ್‌ ಪಾಪ್ರಿಕಾ ಆರೇಂಜ್‌ ಬಣ್ಣದಲ್ಲಿಯೂ ಲಭ್ಯವಿರುವ ಸೆಲೆರಿಯೋ ಕಾರಿನ ಎಲ್ಲಾ ವೇರಿಯಂಟ್‌ಗಳನ್ನು ಒಟ್ಟು ಐದು ಬಣ್ಣಗಳಲ್ಲಿ ಪರಿಚಯಿಸಲಾಗಿದೆ.

ಏನಿದೆ ಹೊಸತು?
2014ರ ಸೆಲೆರಿಯೋಗೆ ಹೋಲಿಸಿದರೆ 2018ರ ವೇರಿಯಂಟ್‌ನಲ್ಲಿ ಭಾರಿ ಬದಲಾವಣೆ ಏನಿಲ್ಲ. ಪ್ರಮುಖವಾಗಿ ಮುಂಭಾಗದ ಮೆಷ್‌ ಅಪ್ಪರ್‌ ಗ್ರಿಲ್‌, ಬಂಪರ್‌, ಟೈಲ್‌ಗೇಟ್‌ ಮತ್ತು ಫಾಗ್‌ ಲ್ಯಾಂಪ್‌ನಲ್ಲಿ ಕೆಲವೊಂದು ಬದಲಾವಣೆ ಕಾಣಬಹುದು. ಜತೆಗೆ ಚಾಲಕನ ಸೀಟ್‌ ಸೈಡ್‌ನ‌ಲ್ಲಿರುವ ಏರ್‌ಬ್ಯಾಗ್‌ನ ಗುಣಮಟ್ಟ ಹೆಚ್ಚಿಸಲಾಗಿದೆ. ಇನ್ನು, ಮುಂಭಾಗದ ಪ್ರಯಾಣಿಕ ಬದಿಯಲ್ಲಿನ ಏರ್‌ಬ್ಯಾಗ್‌ ಮತ್ತು ಎಬಿಎಸ್‌ ವ್ಯವಸ್ಥೆ ಐಚ್ಛಿಕವಾಗಿದೆ.

Advertisement

ಅದೇ ಎಂಜಿನ್‌, ನೋ ಚೇಂಜ್‌
ಐದು ಸೀಟರ್‌ ಸಾಮರ್ಥ್ಯದ ಸೆಲೆರಿಯೋ 998ಸಿಸಿ ಸಾಮರ್ಥ್ಯದ ಕೆ10ಬಿ ಪೆಟ್ರೋಲ್‌ ಎಂಜಿನ್‌ ಕಾರು. ಈ ಹಿಂದಿನ ಸಾಮರ್ಥ್ಯವನ್ನೇ ಉಳಿಸಿಕೊಳ್ಳಲಾಗಿದೆ. ಪವರ್‌ ಸ್ಟೀರಿಂಗ್‌ ಸೇರಿದಂತೆ ಪ್ರಸ್ತುತ ದಿನದಲ್ಲಿ ಅಗತ್ಯವಿರುವ ಎಲ್ಲಾ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. 6000ಆರ್‌ಪಿಎಂ ಜತೆ 67ಬಿಎಚ್‌ಪಿ ಹೊಂದಿರುವ ಈ ಕಾರು, ಒಂದಿಡೀ ಕುಟುಂಬದ ಬಳಕೆಗೆ ಯೋಗ್ಯವಾಗಿದೆ. ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡಿರುವ ಮಾರುತಿ ಸುಜಕಿ ಎರಡು ಏರ್‌ಬ್ಯಾಗ್‌ಗಳನ್ನು ನೀಡಿದೆ. 

ಸೆಲೆರಿಯೋ ಕಾರಿನ ಹೈಲೈಟ್ಸ್‌
* 3715 ಮಿ.ಮೀ. ಉದ್ದ/ 1635ಮಿ.ಮೀ. ಅಗಲ/ 1565ಮಿ.ಮೀ. ಎತ್ತರ
* 165 ಮಿ.ಮೀ. ಗ್ರೌಂಡ್‌ ಕ್ಲಿಯರೆನ್ಸ್‌
* 850 ಕಿ.ಗ್ರಾಂ ಕರ್ಬ್ ವೇಟ್‌
* 1250 ಕಿ.ಗ್ರಾಂ ಒಟ್ಟಾರೆ ವೇಟ್‌
* 235 ಲೀಟರ್‌ ಬೂಟ್‌ ಸ್ಪೇಸ್‌
* 35 ಲೀಟರ್‌ ಇಂಧನ ಶೇಖರಣಾ ಸಾಮರ್ಥ್ಯ

– ಶೋ ರೂಂ ದರ: 4.97 ಲಕ್ಷ ರೂ.ನಿಂದ 5.9 ಲಕ್ಷ ರೂ.
– ಪ್ರತಿ ಲೀಟರ್‌ ಪೆಟ್ರೋಲ್‌ಗೆ 23 ಕಿ.ಮೀ. ಮೈಲೇಜ್‌ 

ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next