Advertisement
ಇದೆಲ್ಲವೂ ಎಲ್ಲಿ ಸಾಧ್ಯ ಎಂದು ಕೇಳುವವರು ಕಾರ್ಕಳದ ಪುಲ್ಕೇರಿಯಲ್ಲಿರುವ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯೆಡೆಗೆ ಹೋಗಬೇಕು. ನೂರು ವಿದ್ಯಾರ್ಥಿಗಳಿರುವ ಈ ಶಾಲೆಯನ್ನು ನೋಡಲು ಹೋದರೆ ದೂರದಿಂದಲೇ ಗಮನ ಸೆಳೆಯುತ್ತದೆ ಶಾಲೆಯ ಆವರಣ ಗೋಡೆ. ಅದರ ರಕ್ಷೆಯಲ್ಲಿ ಬುಡದಿಂದ ತಲೆಯ ತನಕ ಕಾಯಿಗಳನ್ನು ಹೊತ್ತ ಎಪ್ಪತ್ತೆ„ದು ಪಪ್ಪಾಯದ ಮರಗಳು, ಸೊಂಟದೆತ್ತರದ ಗೊನೆ ಹಾಕಿ ಬಲಿಯುತ್ತಿರುವ ಸಾಲು ಸಾಲು ಬಾಳೆಗಳು, ಬಸಳೆಯ ಚಪ್ಪರ, ಹೀರೆ, ಸೋರೆಯ ಬಳ್ಳಿಗಳು. ಎಲ್ಲವೂ ಕಾಯಿ ಕೊಡುತ್ತವೆ. ಮಕ್ಕಳ ಹಸಿವು ತಣಿಸುತ್ತವೆ. ಶಾಲೆಯ ಹಳೆಯ ಕಟ್ಟಡದ ಸುತ್ತಲೂ ಹಸಿರಿನ ನವ ಕಳೆಯಿಂದ ನಳನಳಿಸಿವೆ.
Related Articles
ಇಲ್ಲಿ ರಸ ಗೊಬ್ಬರದ ಸೋಂಕಿಲ್ಲ. ಕೀಟಗಳು ಬಾಧಿಸಿದರೆ ಬೇವಿನೆಣ್ಣೆ ಸಿಂಪಡಿಸುತ್ತಾರೆ ಅಷ್ಟೆ. ಪಕ್ಕದ ಶಾಲೆಗಳಿಗೆ ತರಕಾರಿ ಅಭಾವ ಉಂಟಾದರೆ ಇಲ್ಲಿಂದಲೇ ಉಚಿತವಾಗಿ ಕೊಡುತ್ತಾರೆ. ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳು ಇಲ್ಲಿ ಆಗುವುದಿದ್ದರೆ ಭೋಜನಕ್ಕೆ ತರಕಾರಿಯ ಕೊಡುಗೆ ಇಲ್ಲಿಂದಲೇ. ಕಸ, ಕಡ್ಡಿಗಳನ್ನು ಗುಡಿಸಿ ತಯಾರಿಸಿದ ಸುಡುಮಣ್ಣು, ಬೂದಿ, ಸಗಣಿ ಮುಂತಾಗಿ ಸಾವಯವ ಸತ್ವದಲ್ಲಿ ಬೆಳೆಯುವ ಕಾರಣ ಮಿಗುವ ಪಪ್ಪಾಯ, ಬಸಳೆ, ತರಕಾರಿಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದಕ್ಕಾಗಿ ಶಾಲೆಗೇ ಬಂದು ಕೊಂಡುಹೋಗುತ್ತಾರೆ. ಶಾಲೆಗೆ ಇದೊಂದು ಗಮನಾರ್ಹ ಆದಾಯ ಮೂಲವಾಗಿದೆ. ಶಾಲೆಗೆ ಭೇಟಿ ನೀಡಿದ ಗಣ್ಯರು, ಅಧಿಕಾರಿಗಳು ತೋಟವನ್ನು ಮುಕ್ತ ಕಂಠದಿಂದ ಹೊಗಳಿ ಹೋಗುತ್ತಾರೆ.
Advertisement
ಐದು ವರ್ಷಗಳಿಂದಲೂ ಈ ಶಾಲೆಯ ಕೈತೋಟ ಮಾದರಿಯಾಗಿ ಗಮನ ಸೆಳೆಯುತ್ತಿದೆ. ವಿವಿಧ ತಳಿಗಳ ಪಪ್ಪಾಯ ಗಿಡಗಳು ಸದಾ ಫಲಭರಿತವಾಗಿರುತ್ತವೆ. ಸಿಹಿ ಗೆಣಸು, ಬೂದುಗುಂಬಳ, ಸಿಹಿಗುಂಬಳ, ಅಲಸಂದೆ, ತೊಂಡೆ, ಸೌತೆ, ಬದನೆ ಮುಂತಾಗಿ ಮಳೆಗಾಲ ಮತ್ತು ಬೇಸಗೆಗೆ ಪ್ರತ್ಯೇಕವಾಗಿ ವೈವಿಧ್ಯಮಯ ತರಕಾರಿಗಳನ್ನು ಬೆಳೆಯುವ ಕೆಲಸದಲ್ಲಿ ಮಕ್ಕಳು ತೊಡಗುತ್ತಾರೆ. ಚಿಕ್ಕ ಮಕ್ಕಳನ್ನು ಹೊರತುಪಡಿಸಿ ಏಳು ಮಕ್ಕಳ ಒಂದೊಂದು ಪಂಗಡಗಳನ್ನು ಮಾಡಿದ್ದಾರೆ. ಒಂದೊಂದು ದಿನ ಒಂದೊಂದು ಪಂಗಡ ತರಕಾರಿ ಗಿಡಗಳಿಗೆ ಕಳೆ ಕೀಳುವುದು, ಗೊಬ್ಬರ ಹಾಕುವುದು, ಬುಡಕ್ಕೆ ಮಣ್ಣು ಸೇರಿಸುವುದು ಮೊದಲಾದ ಕೆಲಸಗಳನ್ನು ಮಾಡುತ್ತದೆ. ತರಕಾರಿಗಳಲ್ಲದೆ ಅನಾನಸ್, ನಕ್ಷತ್ರ ನೇರಳೆಯಂತಹ ಹಣ್ಣಿನ ಗಿಡಗಳು ಫಲ ಕೊಡುತ್ತಿವೆ. ಕಸಿ ಸಾಗುವಾನಿಯ ಗಿಡಗಳು ಬೆಳೆಯುತ್ತಿವೆ. ಹೀಗೊಂದು ಕೈತೋಟ ಮಾಡಬೇಕು ಎನ್ನುವವರಿಗೆ ಇಂತಹ ಮಾದರಿ ಅಪೂರ್ವ ಎನ್ನಬೇಕು.
ರಾಮಕೃಷ್ಣ ಶಾಸ್ತ್ರಿ