ಆಳಂದ: ಪಟ್ಟಣದಲ್ಲಿ ಮೇಲಿಂದ ಮೇಲೆ ಬೈಕ್ ಕಳ್ಳತನ, ಸರಗಳ್ಳತನ, ಪಿಕ್‌ಪಾಕೇಟ್ ಆಗುತ್ತಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಬಸ್ ನಿಲ್ದಾಣ ಮುಖ್ಯದ್ವಾರದಲ್ಲೇ ಪೊಲೀಸ್ ಪಾಯಿಂಟ್ ಇದ್ದು, ಇಲ್ಲಿ ದಿನವಿಡಿ ಪೊಲೀಸ್ ಸಿಬ್ಬಂದಿ ದಂಡೇ ಇರುತ್ತದೆ. ಹೀಗಿದ್ದರೂ ಗುರುವಾರ ಪೊಲೀಸರಿದ್ದ 50 ಅಡಿ ಅಂತರದಲ್ಲೇ ಕಳ್ಳರು ದ್ವಿಚಕ್ರವಾಹನವೊಂದು ಕದ್ದೊಯ್ದ ಘಟನೆ ನಡೆದಿದೆ. ತಾಲೂಕಿನ ತಡೋಳಾ ಗ್ರಾಮದ ವಿಶ್ವನಾಥ ವೆಂಕಟರಾವ್ ಪಾಟೀಲ ಎನ್ನುವರು ದ್ವಿಚಕ್ರವಾಹನ ನಿಲ್ಲಿಸಿ ಹೋಟೆಲ್‌ನಲ್ಲಿ ಚಹಾ ಕುಡಿದು ಬರುವರಷ್ಟರನ್ನೇ ವಾಹನ ನಾಪತ್ತೆಯಾಗಿದೆ. ಈ ಕುರಿತು ವೆಂಕಟರಾವ್ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದಾಗ, ಬಸ್ ನಿಲ್ದಾಣದೊಳಗಿನ ಸಿಸಿ ಕ್ಯಾಮೆರಾ ತಪಾಸಣೆಗೆ ಒಳಪಡಿಸಲಾಯಿತು. ಆದರೆ ಈ ವೇಳೆ ವಿದ್ಯುತ್ ಕಡಿತವಾಗಿತ್ತು.
ಹೀಗಾಗಿ ಕಳ್ಳರು ಚಾಲಾಕಿತನ ಪ್ರದರ್ಶಿಸಿದ್ದಾರೆ. ರೇವಣಸಿದ್ಧೇಶ್ವರ ಕಾಲೋನಿ ನಿವಾಸಿ ತೀರ್ಥ ಶಾಲೆ ಶಿಕ್ಷಕ ನಿಂಗಣ್ಣ ಪೂಜಾರಿ ಅವರ ಸ್ಥಳೀಯ ಮನೆ ಎದುರು ನಿಲ್ಲಿಸಿದ್ದ ದ್ವಿಚಕ್ರವಾಹನ ಕಳೆದ ಡಿ. 30ರಂದು ಕಳ್ಳತನವಾಗಿದೆ. ಈ ಕುರಿತು ದೂರು ನೀಡಿದ್ದರೂ ಇನ್ನುವರೆಗೂ ಪತ್ತೆಯಾಗಿಲ್ಲ.
ತಹಶೀಲ್ದಾರ್ ಕಚೇರಿ, ಬಸ್ ನಿಲ್ದಾಣ ಪ್ರದೇಶಗಳಲ್ಲಿ ಅವ್ಯಾಹತವಾಗಿ ಬೈಕ್ ಕಳ್ಳತನಗಳು ನಡೆಯುತ್ತಲೇ ಇವೆ. ಪ್ರತಿ ಗುರುವಾರಕ್ಕೊಮ್ಮೆ ಪಟ್ಟಣದಲ್ಲಿ ನಡೆಯುವ ಸಂತೆಯಲ್ಲಿ ಸಾರ್ವಜನಿಕರ ಹಣ, ವಸ್ತು, ಆಭರಣ ದೋಚಿದ ಘಟನೆಗಳು ನಡೆದಿವೆ. ಈ ಕುರಿತು ಕೆಲವರು ದೂರು ನೀಡಿದ್ದರೆ, ಇನ್ನು ಕೆಲವರು ನೀಡಿಲ್ಲ. ಈ ಹಿಂದೆ ಪೊಲೀಸರು ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದರು. ಆದರೀಗ ಒಮ್ಮೆಯೂ ಪಟ್ಟಣದಲ್ಲಿ ಬರುತ್ತಿಲ್ಲ. ಪ್ರತಿನಿತ್ಯ ಆಟೋ, ಬೀದಿ ವ್ಯಾಪರಿಗಳು, ತಳ್ಳೋ ಗಾಡಿಗಳ ಮಧ್ಯೆ ಸಂಚಾರಕ್ಕೆ ಜನತೆ ಪರದಾಡುತ್ತಿದ್ದು, ಜೇಬುಗಳ್ಳರು, ಸರಗಳ್ಳರಿಗೆ ಈ ವಾತಾವರಣ ಅನುಕೂಲಕರವಾಗಿದೆ. ನಿಂಬರಗಾದ ಆರಾಧ್ಯ ದೈವ ಶ್ರೀ ಶರಣ ಬಸವೇಶ್ವರ ಬೆಳ್ಳಿ ಮೂರ್ತಿಗಳು ಕಳ್ಳತನವಾಗಿ ಹಲವು ದಿನಗಳಾದರೂ ಕಳ್ಳರು ಪತ್ತೆಯಾಗಿಲ್ಲ. ಈ ಕುರಿತು ಪೊಲೀಸರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತರು ಮನವಿ ಮಾಡಿದ್ದಾರೆ.
ಕಳ್ಳತನ ಪ್ರಕರಣಗಳನ್ನು ಮಟ್ಟ ಹಾಕಲು ಪೊಲೀಸ್ ಸಿಬ್ಬಂದಿಗಳನ್ನು ಗಸ್ತಿಗೆ ನಿಯೋಜಿಸಲಾಗುವುದು. ಕಳ್ಳರನ್ನು ಹಿಡಿಯಲು ಜಾಲ ಬೀಸಲಾಗುವುದು. ಬಸ್ ನಿಲ್ದಾಣದಲ್ಲಿ ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಇದರಿಂದ ವಾಹನ ಕಳ್ಳತನ ಯಾರು ಮಾಡುತ್ತಿದ್ದಾರೆ ಎನ್ನುವುದು ಅರಿವಿಗೆ ಬಾರದೇ ಇಂತ ಪ್ರಮಾದಗಳು ನಡೆಯುತ್ತಿವೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚಿಸಲಾಗುವುದು.
-ಮಂಜುನಾಥ, ಸಿಪಿಐ