Advertisement
ಎಸೆಸೆಲ್ಸಿ ಮುಖ್ಯ ಪರೀಕ್ಷೆಯನ್ನು ಸಾಧ್ಯ ವಾದಷ್ಟು ಕ್ಲಸ್ಟರ್ ರಹಿತ/ಸ್ವತಂತ್ರ ಪರೀಕ್ಷಾ ಕೇಂದ್ರ ಗಳಲ್ಲಿ ನಡೆಸುವುದನ್ನು ಕೈಬಿಟ್ಟು ಹೋಬಳಿ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಡೆಸು ವುದು ಸೂಕ್ತ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಸುತ್ತೋಲೆ ಹೊರಡಿಸಿದೆ.2023ರಲ್ಲಿ ನಡೆದ ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ರಾಜ್ಯಾದ್ಯಂತ ಒಟ್ಟು 3,305 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿತ್ತು. ಇವುಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿ 724, ತಾಲೂಕು ಕೇಂದ್ರಗಳಲ್ಲಿ 755, ಹೋಬಳಿ ಕೇಂದ್ರಗಳಲ್ಲಿ 604 ಹಾಗೂ ಗ್ರಾಮೀಣ ಭಾಗದಲ್ಲಿ 1,222 ಪರೀಕ್ಷಾ ಕೇಂದ್ರಗಳಿದ್ದವು. ಅಂದರೆ ರಾಜ್ಯದ ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಮೂರನೇ ಒಂದರಷ್ಟು ಕೇಂದ್ರಗಳು ಗ್ರಾಮೀಣ ಭಾಗದಲ್ಲೇ ಇದ್ದವು.
ಈಗ ಗ್ರಾಮೀಣ ಭಾಗದಲ್ಲಿನ ಪರೀಕ್ಷಾ ಕೇಂದ್ರ ಗಳ ಸಂಖ್ಯೆಯನ್ನು ಕಡಿಮೆ ಮಾಡಿ ಹೋಬಳಿ, ತಾಲೂಕು ಮತ್ತು ಜಿಲ್ಲಾ ಕೇಂದ್ರ ಗಳಲ್ಲಿ ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ರಚಿಸಲು ತೀರ್ಮಾನಿಸಲಾಗಿದೆ. ಅನಿವಾರ್ಯ ಸಂದರ್ಭ ದಲ್ಲಿ ಅಂದರೆ, ಬೆಟ್ಟಗುಡ್ಡ, ಅಣೆಕಟ್ಟು, ಅರಣ್ಯ, ನದಿ ತಪ್ಪಲಿನ ಪ್ರದೇಶ ಹಾಗೂ ಇನ್ನಿತರ ನೈಸರ್ಗಿಕ ಕಾರಣಗಳಿದ್ದಲ್ಲಿ ಮಾತ್ರ ಪರೀಕ್ಷಾ ಕೇಂದ್ರ ರಚನೆಯ ನಿಯಮಗಳನ್ನು ಸಡಿಲಗೊಳಿಸ ಬಹುದು ಎಂದು ಕೆಎಸ್‌ಇಎಬಿ ಸೂಚಿಸಿದೆ. ಗ್ರಾಮೀಣ ಭಾಗದ ಪರೀಕ್ಷಾ ಕೇಂದ್ರಗಳನ್ನು ಕಡಿತ ಮಾಡಿ ಹೋಬಳಿ, ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಪರೀಕ್ಷಾ ಕೇಂದ್ರಗಳನ್ನು ರಚಿ ಸುವುದರ ಮುಖಾಂತರ ಪರೀಕ್ಷಾ ಕೇಂದ್ರ ಗಳ ಸಂಖ್ಯೆ ಕಡಿಮೆ ಮಾಡಬೇಕು. ಈ ಸಂಖ್ಯೆ ಕಡಿಮೆಯಾದಷ್ಟು ಇಲಾಖೆಯ ಅಧಿ ಕಾರಿ ಗಳು ಉಸ್ತುವಾರಿ ನಡೆಸಲು, ಎಲ್ಲ ಹಂತದ ಅಧಿ ಕಾರಿ ಗಳು ನಿಗಾ ವಹಿಸಲು ಅನುಕೂಲವಾಗುತ್ತದೆ ಎಂದು ಕೆಎಸ್‌ಇಎಬಿ ತನ್ನ ತೀರ್ಮಾನಕ್ಕೆ ಸಮರ್ಥನೆ ನೀಡಿದೆ.
10 ಕಿ.ಮೀ. ವ್ಯಾಪ್ತಿಯಲ್ಲಿ 8-10 ಶಾಲೆ ಗಳನ್ನು ಸೇರಿಸಿ ಕ್ಲಸ್ಟರ್ ಹಂತದಲ್ಲಿ ಹೆಚ್ಚಿನ ಸಾಮರ್ಥ್ಯ ವಿರುವ ಪರೀಕ್ಷಾ ಕೇಂದ್ರಗಳನ್ನು ರಚಿಸಬೇಕು ಎಂದು ಸೂಚಿಸಲಾಗಿದೆ.
Related Articles
Advertisement
ಉಳಿದಂತೆ ಪ್ರತೀ ಕೊಠಡಿಗೆ 24 ವಿದ್ಯಾರ್ಥಿಗಳು ಮಾತ್ರ ಹಂಚಿಕೆಯಾಗಬೇಕು, ಪ್ರತೀ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 400ರಿಂದ ಗರಿಷ್ಠ 800 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಹೊಂದಿರುವ, ಮೂಲ ಸೌಕರ್ಯ ಹೊಂದಿರುವ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳನ್ನು ಮಾತ್ರ ಪರೀಕ್ಷಾ ಕೇಂದ್ರಗಳನ್ನಾಗಿ ಆಯ್ಕೆ ಮಾಡಬೇಕು ಎಂದು ಸೂಚಿಸಲಾಗಿದೆ.
ಶಾಲೆಯ ಸುತ್ತ ಕಂಪೌಂಡ್, ಸಿಸಿಟಿವಿ ಕೆಮರಾ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸಾರಿಗೆ ವ್ಯವಸ್ಥೆ, ನಿಗದಿತ ಸಮಯದಲ್ಲಿ ಸುರಕ್ಷಿತವಾಗಿ ಪ್ರಶ್ನೆಪತ್ರಿಕೆಗಳನ್ನು ವಿತರಿಸಲು ರಸ್ತೆಗಳಿರುವ ಶಾಲೆಗಳನ್ನೇ ಪರೀಕ್ಷಾ ಕೇಂದ್ರವನ್ನಾಗಿ ರೂಪಿಸಬೇಕು ಎಂದು ಸೂಚಿಸಲಾಗಿದೆ.
ನಿರ್ಧಾರಕ್ಕೆ ಕಾರಣವೇನು?ಎಸೆಸೆಲ್ಸಿ ಪರೀಕ್ಷೆಯಲ್ಲಿ ನಕಲು/ಸಾಮೂ ಹಿಕ ನಕಲು ನಡೆಯುತ್ತಿರುವ ಬಗ್ಗೆ ವ್ಯಾಪಕ ದೂರು ಬರುತ್ತಿರುವುದು ಕಳವಳ ಕಾರಿ ವಿಷಯ. ಇದು ಶಿಕ್ಷಣ ಇಲಾಖೆಗೆ ಮುಜುಗರ ತಂದಿದೆ. ಹಾಗಾಗಿ ಪರೀಕ್ಷಾ ಅವ್ಯವಹಾರ ತಡೆಗಟ್ಟುವುದು ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಶಿಕ್ಷಕರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಪರೀಕ್ಷೆಗೆ ಪೂರ್ವಭಾವಿಯಾಗಿ ಪರೀಕ್ಷಾ ಕೇಂದ್ರ ಗಳನ್ನು ರಚಿಸುವುದು ಅತ್ಯಂತ ಮಹತ್ವದ ಕಾರ್ಯ ಎಂದು ಕೆಎಸ್‌ಇಎಬಿ ಹೇಳಿದೆ. ತನ್ಮೂಲಕ ಪರೀಕ್ಷಾ ಕೇಂದ್ರಗಳನ್ನು ಕಡಿಮೆ ಮಾಡಿ ಅಲ್ಲಿ ಹೆಚ್ಚು ಮಾನವ ಸಂಪನ್ಮೂಲ ವನ್ನು ನಿಯೋಜಿಸುವುದು ಮತ್ತು ಆಧುನಿಕ ಕ್ರಮಗಳ ಮೂಲಕ ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಪರೀಕ್ಷಾ ಮೇಲ್ವಿಚಾರಕರ ಕೊರತೆ ಆಗಬಾರದು ಎಂಬ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳನ್ನು ಕಡಿಮೆ ಮಾಡುವ ಕುರಿತು ಮಾರ್ಗಸೂಚಿ ಹೊರಡಿಸಿದ್ದೇವೆ. ಪರೀಕ್ಷಾ ಕೇಂದ್ರಗಳು ಅನಿವಾರ್ಯ ಅಲ್ಲದಿದ್ದ ಕಡೆ ಕಡಿತ ಮಾಡುತ್ತೇವೆ.
– ರಾಮಚಂದ್ರನ್ ಆರ್.,
ಕೆಎಸ್‌ಇಎಬಿ ಅಧ್ಯಕ್ಷರು