Advertisement

ಡೊನೇಷನ್‌ ಹಾವಳಿಗೆ ಕಡಿವಾಣ ಹಾಕಿ

02:45 PM May 26, 2022 | Team Udayavani |

ಗದಗ: ಸಾರ್ವಜನಿಕರ ಬದುಕಿಗೆ ಮೂಲಭೂತವಾಗಿ ಅಗತ್ಯವಿರುವ ಶಿಕ್ಷಣ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕವನ್ನು ಉಚಿತವಾಗಿ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಪ್ರಾಥಮವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್‌ ಹಾವಳಿಗೆ ಕಡಿವಾಣ ಹಾಕಲು ರಾಜ್ಯ ಸರಕಾರ ತಕ್ಷಣವೇ ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಶಾಲಾ, ಕಾಲೇಜು ಆರಂಭಿಸಿ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಆಮ್‌ ಆದ್ಮಿ ಪಕ್ಷದ ಧಾರವಾಡ ವಲಯ ವೀಕ್ಷಕ ಎಂ.ಅರವಿಂದ ಆಗ್ರಹಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಡೊನೇಷನ್‌ ಹಾವಳಿ ಹೆಚ್ಚಿದೆ. ಅದರಲ್ಲೂ ಗದಗ ನಗರದಲ್ಲಿ ಖಾಸಗಿ ಸಂಸ್ಥೆಗಳ ಹಾವಳಿ ಹುಬ್ಬಳ್ಳಿಗಿಂತ ಹೆಚ್ಚಿದೆ. ಜಿಲ್ಲೆಯಲ್ಲಿ ಅಗತ್ಯವಿರುವಷ್ಟು ಶಾಲೆ, ಪದವಿ ಪೂರ್ವ ಕಾಲೇಜುಗಳು ಇಲ್ಲದಿರುವುದೇ ಅದಕ್ಕೆ ಕಾರಣ. ಹೀಗಾಗಿ, ಜೆಇಇ, ಜೆಇಟಿ, ಸಿಇಟಿ ಮತ್ತತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್‌ ನೆಪದಲ್ಲಿ ಟ್ಯೂಷನ್‌ಗಳನ್ನೇ ಕಾಲೇಜು ತರಗತಿಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಅದಕ್ಕಾಗಿ ಲಕ್ಷಾಂತರ ರೂ. ಶುಲ್ಕ ವಸೂಲಿ ಮಾಡುತ್ತಿರುವುದು ಅನ್ಯಾಯದ ಪರಮಾವಧಿ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪಿಯು ಕಾಲೇಜುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರ ಸ್ಥಾಪಿಸಬೇಕೆಂದು ಒತ್ತಾಯಿಸಿ, ಶೀಘ್ರವೇ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಳೆದ 5 ವರ್ಷದಿಂದ ಅವಳಿ ನಗರದಲ್ಲಿ ಅನುಷ್ಠಾನಕ್ಕೆ ಬಂದಿರುವ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳ ಪೈಕಿ ಶೇ. 30 ರಷ್ಟು ಜನರಿಗೆ ಮಾತ್ರ ಹಕ್ಕುಪತ್ರಗಳು ಹಸ್ತಾಂತರಗೊಂಡಿವೆ. ಇನ್ನುಳಿದ ಜನರು ಹಕ್ಕುಪತ್ರಗಳಿಗಾಗಿ ಪರದಾಡುವಂತಾಗಿದೆ. ಜೊತೆಗೆ ಮುಂಗಾರು ಹಂಗಾಮು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಸೂಕ್ತ ಸಮಯದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಅಧಿಕಾರಿಗಳು ಕ್ರಮ ವಹಿಸಬೇಕು. ಈ ಕುರಿತಂತೆ ಗ್ರಾಮೀಣ ಜನರ ಸಮಸ್ಯೆಗಳಿಗೆ ನಿವಾರಣೆಗಾಗಿ ಗ್ರಾಮ ಸಂಪರ್ಕ ಅಭಿಯಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 224 ಕ್ಷೇತ್ರಗಳಲ್ಲಿ ಎಎಪಿ ಪಕ್ಷ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಜಿಪಂ, ತಾಪಂ ಚುನಾವಣೆಯಲ್ಲೂ ಆಪ್‌ ಸ್ಪರ್ಧಿಸಲಿದೆ. ಜಿಲ್ಲೆಯ ಸಂಘಟನೆ, ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದ್ದು, ಮೇ 29 ರಂದು ಹುಬ್ಬಳ್ಳಿಯಲ್ಲಿ ಅಖಂಡ ಧಾರವಾಡ ಜಿಲ್ಲೆಯ ಸಮಾಲೋಚನಾ ಸಭೆ ಆಯೋಜಿಸಲಾಗಿದೆ. ಸಾಮಾನ್ಯ ಹಾಗೂ ಸಕ್ರಿಯ ಕಾರ್ಯಕರ್ತರನ್ನು ಗುರುತಿಸಿ, ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತದೆ. 6 ತಿಂಗಳ ಮುನ್ನವೇ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಎಎಪಿ ಜಿಲ್ಲಾಧ್ಯಕ್ಷ ಬಸವರಾಜ ದೇಸಾಯಿ, ಎ.ಜೆ. ತಿರ್ಲಾಪುರ, ನಾಗರಾಜ ಹಿಟ್ನಾಳ್‌, ಎಲ್‌. ನಾರಾಯಣಸ್ವಾಮಿ, ಎಂ.ಎಂ.ಬುಡೇನಖಾನ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next