ದೇವನಹಳ್ಳಿ: ತಾಲೂಕಿನ ವ್ಯಾಪ್ತಿಯಲ್ಲಿನ ದೇವನಹಳ್ಳಿ ಟೌನ್ ಪೊಲೀಸ್ ಠಾಣೆ, ಚಿಕ್ಕಜಾಲ,ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೊಲೀಸ್‌ಸಿಬ್ಬಂದಿಗೆ ಗೃಹ ಇಲಾಖೆ ಕಹಿ ಸುದ್ದಿ ನೀಡಿದೆ.
ಸಂಬಳದಲ್ಲಿ ಭತ್ಯೆ ಕಡಿತವಾಗಿರುವುದರಿಂದ ಪೊಲೀಸ್ ಸಿಬ್ಬಂದಿಗಳಿಗೆ ಬೇಸರ ಮೂಡಿಸಿದೆ. ಪ್ರತಿಯೊಂದು ಠಾಣೆಯಲ್ಲಿಯೂ ಅಂದಾಜು 80-100 ಜನ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇವರೆಲ್ಲರೂ ಬೆಂಗಳೂರು ನಗರ ಪೊಲೀಸ್ ವಿಭಾಗಕ್ಕೆ ನೇಮಕವಾಗಿದ್ದರೂ, ಬಿಬಿಎಂಪಿ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿ ಕೇವಲ ಶೇ.8ರಷ್ಟು ಭತ್ಯೆನೀಡುವಂತೆ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರು ಜ್ಞಾಪಕ ಪತ್ರದ ಮೂಲಕ ತಿಳಿಸಿದ್ದಾರೆ.
“ಯಾರು ತಾನೇ ಹೆಚ್ಚಿನ ಸಂಬಂಳ ಬರುವಲ್ಲಿ ಸೇವೆ ಸಲ್ಲಿಸಲು ಇಷ್ಟ ಪಡುವುದಿಲ್ಲ. ಸಾಕಷ್ಟು ಸಿಬ್ಬಂದಿ ಮನೆ, ಮಕ್ಕಳು ಎಲ್ಲ ನಗರದಲ್ಲಿಯೇ ವಾಸವಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಆದೇಶದಿಂದ ಆರ್ಥಿಕವಾಗಿ ತೊಂದರೆಯಾಗಲಿದ್ದು, 2.88 ಕೋಟಿ ರೂ.ವಾರ್ಷಿಕವಾಗಿ ಇಲಾಖೆಗೆ ಉಳಿತಾಯ ವಾಗಲಿದೆ. ಸಾಧ್ಯವಾದಷ್ಟು ಆದೇಶವನ್ನು ಮತ್ತೂಮ್ಮೆ ಪರಿಶೀಲಿಸಿ, ಸಿಬ್ಬಂದಿಗೆ ಅನುಕೂಲ ಮಾಡಿಕೊಡಬೇಕೆಂದು ಮಹಿಳಾ ಸಿಬ್ಬಂದಿ ಅಳಲು ತೋಡಿಕೊಂಡರು.
ದೇವನಹಳ್ಳಿ ಟೌನ್, ಚಿಕ್ಕಜಾಲ, ವಿಮಾನ ನಿಲ್ದಾಣ ಠಾಣೆಗಳು ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಂದಾಯ ಇಲಾಖೆ ಅನ್ವಯ ಇವುಗಳು ಗ್ರಾಮಾಂತರ ಜಿಲ್ಲೆಗೆ ಸೇರಿರುವುದರಿಂದ ಇಲಾಖೆ ಸಿಬ್ಬಂದಿಗಳಿಗೆ ನೀಡಲಾಗುತ್ತಿದ್ದ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆಯನ್ನು ಗ್ರಾಮಾಂತರ ವ್ಯಾಪ್ತಿಗೆ ಸೀಮಿತಗೊಳಿಸಿ, ಪ್ರಸ್ತುತ ನೀಡಲಾಗುತ್ತಿದ್ದ ಭತ್ಯೆಗಳಿಗೆ ಕತ್ತರಿ ಹಾಕಲಾಗಿದೆ. ಈ ಕುರಿತು ಸಿಬ್ಬಂದಿಯೊಬ್ಬರು ಮಾತನಾಡಿ, ನಾವೆಲ್ಲರೂ ನಗರ ಪೊಲೀಸ್ ವಿಭಾಗಕ್ಕೆ ನೇಮಕವಾಗಿದ್ದೇವೆ. ಏಕಾಏಕಿ ಭತ್ಯೆ ಕಡಿತ ಮಾಡಿದರೇ ಸರಾಸರಿ ಒಬ್ಬರಿಗೆ 8ಸಾವಿರ ಪ್ರತಿ ತಿಂಗಳು ನಷ್ಟವಾಗುತ್ತದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವವರಿಗೆಲ್ಲಾ ಒಂದೇ ರೀತಿಯ ಸಂಬಂಳ ನೀಡಬೇಕು ಎಂದು ಅಳಲು ತೋಡಿಕೊಂಡರು.