ಹಾವೇರಿ: ಜಿಲ್ಲೆಯಲ್ಲಿ ಅನಧಿಕೃತ ಮರಳುಗಾರಿಕೆ ಹಾಗೂ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ಅಧಿಕಾರಿಗಳಿಗೆ ಆದೇಶ ಮಾಡಿದರು.
ಗಣಿ ಇಲಾಖೆಯಿಂದ ಗುರುತಿಸಲಾದ ಅಧಿಕೃತ ಮರಳು ಬ್ಲಾಕ್‌ಗಳ ಹೊರತಾಗಿಯೂ ಜಿಲ್ಲೆಯ ಕೆಲವೆಡೆ ಸಣ್ಣ ಸಣ್ಣ ಮರಳು ಬ್ಲಾಕ್‌ಗಳಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇಂಥ ಬ್ಲಾಕ್‌ಗಳಿಗೆ ಭೇಟಿ ನೀಡಿ ಆ ಮರಳು ಕಟ್ಟಡ ನಿರ್ಮಾಣಕ್ಕೆ ಯೋಗ್ಯವೇ ಎಂದು ಪರಿಶೀಲಿಸಿ ಯೋಗ್ಯವೆನಿಸಿದರೆ ನಿರ್ದಿಷ್ಟ ದರದಲ್ಲಿ ವ್ಯವಸ್ಥಿತವಾಗಿ ಮರಳು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ದಾಸ್ತಾನಿರುವ ಮರಳನ್ನು ಸರ್ಕಾರಿ ದರದಂತೆ ಜನತಾ ಮನೆಗಳಿಗೆ ವಿತರಿಸಲು ಕ್ರಮವಹಿಸಬೇಕು. ಬಡವರು ಮನೆ ಕಟ್ಟಿಕೊಳ್ಳಲು ಹಾಗೂ ಗುಡಿ ಗೋಪುರಗಳಿಗೆ ಸುಲಭದಲ್ಲಿ ಕಡಿಮೆ ದರದಲ್ಲಿ ಮರಳು ದೊರಕುವಂತೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ, ಶಾಸಕ ಸಿ.ಎಂ. ಉದಾಸಿ ಮಾತನಾಡಿ, ಜನತಾ ಮನೆಗಳು, ಸಣ್ಣ ಸಣ್ಣ ಗುಡಿ ನಿರ್ಮಾಣ ಕೆಲಸಕ್ಕೆ ಮರಳು ಸಿಗದೆ ತೊಂದರೆಯಾಗಿದೆ. ಕೆಲ ಹಳ್ಳ ಹಾಗೂ ನದಿ ಪಾತ್ರದಲ್ಲಿ ಟ್ರ್ಯಾಕ್ಟರ್ ಮೂಲಕ ಅನಧಿಕೃತವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ದೂರುಗಳು ಬರುತ್ತಿವೆ. ಕೆಲ ಅಧಿಕಾರಿಗಳೇ ಇದಕ್ಕೆ ಸಹಕರಿಸುತ್ತಿರುವ ದೂರುಗಳಿವೆ. ಇದಕ್ಕೆ ಕಡಿವಾಣ ಹಾಕಬೇಕು. ಎಲ್ಲೆಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗುರುತಿಸಿದ ಮರಳು ಬ್ಲಾಕ್‌ಗಳನ್ನು ಹೊರತುಪಡಿಸಿ ಇತರೆಡೆ ಸಿಗುವ ಮರಳನ್ನು ಗುರುತಿಸಿ ವ್ಯವಸ್ಥಿತವಾಗಿ ವಿತರಣೆಗೆ ಕ್ರಮವಹಿಸಬೇಕು ಎಂದರು.
Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಮರಳು ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆ ಸಂಬಂಧಿಸಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
1.50ಲಕ್ಷ ಟನ್ ದಾಸ್ತಾನು: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಲತಾ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಒಟ್ಟು 18 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಇದರಲ್ಲಿ ಒಂದು ಬ್ಲಾಕಿನ ಗುತ್ತಿಗೆ ಮಂಜೂರಾಗಿಲ್ಲ. ಉಳಿದಂತೆ 17 ಬ್ಲಾಕಿನಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಕೆಲ ದೂರಗಳ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮರಳು ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. 17 ಮರಳು ಬ್ಲಾಕಿನ ಸ್ಟಾಕ್ ಯಾರ್ಡ್‌ಗಳಲ್ಲಿ 1.50 ಲಕ್ಷ ಟನ್ ಮರಳು ದಾಸ್ತಾನಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 39 ಕಲ್ಲುಗಣಿ ಗುತ್ತಿಗೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 32 ಕಲ್ಲುಗಣಿಗಳ ಗುತ್ತಿಗೆ ಅವಧಿ ಮುಗಿದಿದೆ. ಕಲ್ಲು ಪುಡಿ ಘಟಕಗಳ ಆರಂಭಿಸುವ ಕುರಿತಂತೆ ಜಿಲ್ಲಾ ಸಮಿತಿ 92 ಅರ್ಜಿಗಳನ್ನು ಸ್ವೀಕರಿಸಿದೆ. 2018 ರಿಂದ ಈ ವರೆಗೆ 41 ಮೊಕದ್ದಮೆಯನ್ನು ದಾಖಲಿಸಿ 77.31 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ವಾರ್ಷಿಕವಾಗಿ 2016ರಿಂದ ಈ ವರೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಸಂಗ್ರಹಿಸಿದ ಮೊತ್ತ 3.33 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ, ಸವಣೂರ ಉಪವಿಭಾಗಾಧಿಕಾರಿ ಹರ್ಷಲ್ ನಾರಾಯಣ ಭೋಯಾರ್, ವಿವಿಧ ತಾಲೂಕಿನ ತಹಶೀಲ್ದಾರ್ ಇದ್ದರು.
ಇಂದು ಮರಳು ನೀತಿ ಜಾರಿಗೆ ಡಿಸಿಎಂ ಜತೆ ಸಭೆ:
ರಾಜ್ಯದಲ್ಲಿ ಯಾವ ರೀತಿಯ ಮರಳುನೀತಿ ಜಾರಿಗೆ ತರಬೇಕು ಎಂಬ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ಜು. 3ರಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಹೊಸ ಮರಳುನೀತಿ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ತಿಳಿಸಿದರು. ಮಂಗಳವಾರ ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದ ಐದಾರು ರಾಜ್ಯಗಳಿಗೆ ಅಧಿಕಾರಿಗಳ ತಂಡ ಕಳುಹಿಸಿ ಮರಳುನೀತಿ ಬಗ್ಗೆ ಅಧ್ಯಯನ ಮಾಡಿಸಲಾಗಿದೆ. ಅಧಿಕಾರಿಗಳು ಜು. 3ರ ಸಭೆಯಲ್ಲಿ ಅಧ್ಯಯನ ವರದಿ ಪ್ರಸ್ತಾಪಿಸಲಿದ್ದಾರೆ. ಪ್ರಸ್ತುತ ತೆಲಂಗಾಣ ಮಾದರಿ ಉತ್ತಮ ಎಂದು ಭಾವಿಸಲಾಗಿದೆ. ಆದರೆ, ನಾಳೆ ಸಭೆಯಲ್ಲಿಯೇ ಈ ಕುರಿತಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಸದ್ಯ ಸರ್ಕಾರಿ ದರ ಪ್ರತಿ ಟನ್‌ಗೆ 900 ರೂ. ನಿಗಯಾಗಿದೆ. ಈ ದರ ಬಡವರಿಗೆ ದುಬಾರಿಯಾಗುತ್ತದೆ ಎಂಬ ದೂರುಗಳಿವೆ. ಹೀಗಾಗಿ ಇದೇ ಸಭೆಯಲ್ಲಿ ಬಡವರಿಗೆ ಕಡಿಮೆ ಹಾಗೂ ಸುಲಭವಾಗಿ ಮರಳು ವಿತರಣೆಗೆ ಏನು ಕ್ರಮ ಕೈಗೊಳ್ಳಬಹುದು ಎಂಬ ತೀರ್ಮಾನ ಕೈಗೊಳ್ಳಲಾಗುವುದು. ಇದರಿಂದ ರಾಜ್ಯಾದ್ಯಂತ ಮರಳು ವಿತರಣೆಗೆ ಒಂದು ಸ್ಪಷ್ಟವಾದ ನೀತಿ ರೂಪುಗೊಳ್ಳಲಿದೆ ಎಂದರು.