ಬೆಂಗಳೂರು : ನಲುವತ್ತು ಪರ್ಸೆಂಟ್ ಕಮಿಷನ್ ಆರೋಪದಲ್ಲಿ ಸಚಿವರೊಬ್ಬರ ತಲೆದಂಡದ ಬೆನ್ನಲ್ಲೇ ಜಲಸಂಪನ್ಮೂಲ ಇಲಾಖೆಯಲ್ಲಿ “ಪ್ಯಾಕೇಜ್ ಪದ್ಧತಿ’ಯಲ್ಲಿ ಹಣ ಗಳಿಸಲಾಗುತ್ತಿದೆ ಎಂಬ ಮತ್ತೂಂದು ಗಂಭೀರ ಆರೋಪ ಗುತ್ತಿಗೆದಾರರ ಸಂಘದಿಂದ ಕೇಳಿಬಂದಿದೆ.
ಈ ಸಂಬಂಧ ಶನಿವಾರ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿರುವ ಗುತ್ತಿಗೆದಾರರು, ಸಣ್ಣ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲಾಗುತ್ತಿದೆ. ಇದರ ಹಿಂದೆ ಹಣ ಮಾಡುವ ದುರುದ್ದೇಶ ಅಡಗಿದೆ ಎಂದು ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಥಣಿ ವಿಭಾಗದಲ್ಲಿ ಹೊರಗಾಲುವೆ ಕಾಮಗಾರಿಗಳಿಗೆ ಈ ಮೊದಲು ಟೆಂಡರ್ ಆಹ್ವಾನಿಸಲಾಗಿತ್ತು. ಇದಕ್ಕಾಗಿ ಸಾಲ ಮಾಡಿ, ಟೆಂಡರ್ ಅರ್ಜಿ ಮತ್ತು ಇಎಂಡಿ ಹಣ ಪಾವತಿಸ ಲಾಗಿತ್ತು. ಆದರೆ, ಈಗ ಏಕಾಏಕಿ ಆ ಸಣ್ಣ ಕಾಮಗಾರಿಗಳನ್ನು ಪ್ಯಾಕೇಜ್ ರೂಪದಲ್ಲಿ ಕೈಗೆತ್ತಿಕೊಳ್ಳುವುದಾಗಿ ಹೇಳಲಾಗುತ್ತಿದೆ. ಇದರಿಂದ ಸಣ್ಣ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗುತ್ತಿಗೆದಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಜಲಸಂಪನ್ಮೂಲ ಸಚಿವರು ಸಣ್ಣ ಕಾಮಗಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದನ್ನು ಉಲ್ಲೇಖೀಸಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರು “ಪ್ಯಾಕೇಜ್ ಪದ್ಧತಿ’ ಅನುಸರಿಸಲು ಆದೇಶಿಸಿದ್ದಾರೆ. ಈ ಕ್ರಮದ ಹಿಂದೆ ಹಣ ಮಾಡುವ ಉದ್ದೇಶ ಅಡಗಿದೆ. ಕೂಡಲೇ ಈ ಪದ್ಧತಿಯನ್ನು ರದ್ದು ಮಾಡಿ, ಸಣ್ಣ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಪ್ಯಾಕೇಜ್ ಪದ್ಧತಿ ರದ್ದುಪಡಿಸದಿದ್ದರೆ, ಉಗ್ರ ಹೋರಾಟ ನಡೆಸಬೇಕಾದೀತು. ಮುಂದಿನ ದಿನಗಳಲ್ಲಾಗುವ ಅನಾಹುತಗಳಿಗೆ ಸರಕಾರವೇ ಹೊಣೆ ಎಂದೂ ಗುತ್ತಿಗೆದಾರರು ಎಚ್ಚರಿಸಿದ್ದಾರೆ.