Advertisement

ಸದ್ಯ 30 ನಿಗಮ; ಸಿದ್ದರಾಮಯ್ಯ ಜತೆ ಪರಮೇಶ್ವರ್‌ ಚರ್ಚೆ

05:00 AM Jun 25, 2018 | Team Udayavani |

ಬೆಂಗಳೂರು: ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ಮುನ್ನ ಸಚಿವಾಕಾಂಕ್ಷಿಗಳನ್ನು ಸಮಾಧಾನಪಡಿಸುವ ಕಾರ್ಯಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಂದಾಗಿದ್ದು, ಮೂವತ್ತು ನಿಗಮ-ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಭರ್ತಿಗೆ ತೀರ್ಮಾನಿಸಿದೆ.

Advertisement

ಮೊದಲ ಹಾಗೂ ಎರಡನೇ ಬಾರಿಗೆ ಶಾಸಕರಾಗಿ ಸಚಿವ ಸ್ಥಾನ ಕೇಳುತ್ತಿರುವ ಎರಡೂ ಪಕ್ಷದ 30 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ಸಹಿತ ನಿಗಮ -ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆ ನೀಡಲು ನಿರ್ಧರಿಸಿದೆ.
ನಿಗಮ-ಮಂಡಳಿಗಳಿಗೆ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ದಿಢೀರ್‌ ಮಂಗಳೂರಿಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಧರ್ಮಸ್ಥಳದ ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಿ ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪರಮೇಶ್ವರ್‌, ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ಪಟ್ಟಿಗೆ ಒಪ್ಪಿಗೆ ಪಡೆಯುವ ಸಂಬಂಧ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಬಜೆಟ್‌ ಅಧಿವೇಶನ ಜುಲೈ 2 ರಿಂದ ಆರಂಭವಾಗುತ್ತಿದ್ದು, ಅಷ್ಟರಲ್ಲಿ ಎರಡನೇ ಹಂತದ ಸಂಪುಟ ವಿಸ್ತರಣೆ ಹಾಗೂ ಸಚಿವಗಿರಿ ವಂಚಿತ ಶಾಸಕರಿಗೆ ಪರ್ಯಾಯ ಅಧಿಕಾರ ನೀಡಿ ಅಸಮಾಧಾನ ನಿವಾರಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಿರ್ಧರಿಸಿದೆ.

ಕಾಂಗ್ರೆಸ್‌ನಿಂದ 20 ಹಾಗೂ ಜೆಡಿಎಸ್‌ನಿಂದ 10 ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ. ಹೀಗಾಗಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ದೇವೇವೇಗೌಡರ ಜತೆ ಚರ್ಚಿಸಿ ಜೆಡಿಎಸ್‌ನಿಂದ ಮೊದಲ ಹಂತದಲ್ಲಿ ನಿಗಮ-ಮಂಡಳಿಗಳಿಗೆ ನೇಮಕ ಮಾಡುವ ಪಟ್ಟಿ ಸಿದ್ಧಪಡಿಸಿ ಕಾಂಗ್ರೆಸ್‌ ನಾಯಕರಿಗೆ ನೀಡಿದ್ದಾರೆ.

Advertisement

ಕಾಂಗ್ರೆಸ್‌ ನಾಯಕರು ತಮ್ಮ ಪಕ್ಷದವರ ಪಟ್ಟಿ ಸಿದ್ಧಗೊಳಿಸಿದ ನಂತರ ಹೈಕಮಾಂಡ್‌ ಒಪ್ಪಿಗೆ ಪಡೆದು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಅವರು ಪರಮೇಶ್ವರ್‌ ಜತೆ ಚರ್ಚೆ ಸಂದರ್ಭದಲ್ಲಿ ಸಚಿವಗಿರಿ ಸಿಗದ ಜಿಲ್ಲೆ ಹಾಗೂ ಸಮುದಾಯಗಳಿಗೆ ಅವಕಾಶ ಕಲ್ಪಿಸಲು ಒಲವು ತೋರಿದ್ದಾರೆ ಎಂದು ಹೇಳಲಾಗಿದೆ.ನಿಗಮ-ಮಂಡಳಿಗಳಿಗೆ ನೇಮಕ ಪ್ರಕ್ರಿಯೆ ನಂತರ ಎರಡನೇ ಹಂತದ ಸಂಪುಟ ವಿಸ್ತರಣೆಯೂ ಆಗಲಿದೆ.

ಸಿದ್ದರಾಮಯ್ಯಗೆ ಸಂಪುಟ ದರ್ಜೆ
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರದಿಂದಲೇ ಅಧಿಕೃತವಾಗಿ ಸಮನ್ವಯ ಸಮಿತಿ ಅಧ್ಯಕ್ಷರನ್ನು ಘೋಷಿಸಿ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಲಾಗುವುದು. ಸೋಮವಾರ ಈ ಕುರಿತು ಆದೇಶ ಹೊರಬೀಳಲಿದೆ ಎಂದು ಹೇಳಲಾಗಿದೆ. ಈಗಾಗಲೇ ಸಿದ್ದರಾಮಯ್ಯ ಅವರಿಗೆ ವಿಧಾನಸೌಧ ಮೊದಲ ಮಹಡಿಯಲ್ಲಿ ಕೊಠಡಿ ಸಹ ಮಂಜೂರು ಮಾಡಲಾಗಿದೆ. 

ಸಿದ್ದರಾಮಯ್ಯಅವರು ಬಯಸಿದರೆ ಕಾವೇರಿ ನಿವಾಸದಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿಕೊಡಲಾಗುವುದು. ಇಲ್ಲದಿದ್ದರೆ ಬೇರೊಂದು ಸರ್ಕಾರಿ ನಿವಾಸ ಹಂಚಿಕೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಆದರೆ, ಕಾವೇರಿ ನಿವಾಸಕ್ಕಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next