Advertisement

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ವಿದ್ಯುತ್‌ ಶಾಕ್‌ !

11:48 AM Nov 08, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಅಸ್ತವ್ಯಸ್ತ ವಿದ್ಯುತ್‌ ಪೂರೈಕೆ ಸಮಸ್ಯೆಯ “ಶಾಕ್‌’ಗೆ ದಿಢೀರನೇ ಈಡಾಗಿವೆ. ಈ ಬಾರಿ “ಮಳೆಗಾಲ’ ಇನ್ನೂ ಮುಕ್ತಾಯವಾಗಿರದಂತಹ ಪರಿಸ್ಥಿತಿ ಇದ್ದರೂ ಅಘೋಷಿತ ಲೋಡ್‌ಶೆಡ್ಡಿಂಗ್‌ನಿಂದ ಉಭಯ ಜಿಲ್ಲೆಗಳು ಆಘಾತಗೊಂಡಿವೆ.

Advertisement

ಈ ವಿದ್ಯುತ್‌ ಸ್ಥಗಿತ ಸದ್ಯಕ್ಕೆ ದಿನಕ್ಕೆರಡು ತಾಸು ಎಂದು ಹೇಳಲಾಗುತ್ತಿದೆ. ಆದರೆ ಇದು ದೀರ್ಘ‌ಕಾಲೀನ ಸಮಸ್ಯೆ ಆಗಬಹುದೆಂದು ಸ್ವತಃ ಮೆಸ್ಕಾಂ ಮೂಲಗಳೇ ತಿಳಿಸುತ್ತವೆ. ಈ ವಿದ್ಯುತ್‌ ಸ್ಥಗಿತದಿಂದ ಜಿಲ್ಲೆಯ ಉದ್ಯಮ, ಕೃಷಿ ಮುಂತಾದ ಎಲ್ಲ ಕ್ಷೇತ್ರಗಳೂ ತೊಂದರೆ ಅನುಭವಿಸುತ್ತಿವೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಸಮಸ್ಯೆಯ ಸರಣಿಯೇ ಉಂಟಾಗುತ್ತಿದೆ.

ಸಾಮಾನ್ಯವಾಗಿ ಮಳೆಯ ಕೊರತೆಯನ್ನು ವಿದ್ಯುತ್‌ ಕೊರತೆಗೆ ಕಾರಣವಾಗಿ ಉಲ್ಲೇಖೀಸಲಾಗುತ್ತಿದೆ. ಆದರೆ ಈ ಬಾರಿ ನಿರೀಕ್ಷೆಗೂ ಮೀರಿ ಸಕಾಲಿಕವಾಗಿ ಮತ್ತು ಅಕಾಲಿಕವಾಗಿ ಮಳೆಯಾಗಿದೆ. ಆದರೂ ನವೆಂಬರ್‌ ಮೊದಲ ವಾರದಲ್ಲೇ ವಿದ್ಯುತ್‌ ಕೊರತೆ ಉಂಟಾಗಿದೆ!

ಯುಪಿಸಿಎಲ್‌ ಸ್ಥಾಗಿತ್ಯ
ಉಡುಪಿ ಪವರ್‌ ಕಾರ್ಪೊರೇಶನ್‌ ಲಿಮಿಟೆಡ್‌ ಅದಾನಿ ಸಂಸ್ಥೆಯು ಉಡುಪಿಯಲ್ಲಿ ಕಾರ್ಯಾ ರಂಭಿಸಿದಾಗ ಈ ಪ್ರದೇಶ ನಿರಂತರ ವಿದ್ಯುತ್‌ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಸಾಮಾನ್ಯವಾಗಿ ಇದು ಸಾಧ್ಯವಿಲ್ಲ. ಏಕೆಂದರೆ ಉತ್ಪಾದಿತ ವಿದ್ಯುತ್‌ ರಾಜ್ಯ ಗ್ರಿಡ್‌ಗೆ ಪೂರೈಕೆಯಾ ಗುತ್ತದೆ. ಅಲ್ಲಿಂದ ಕೆಪಿಟಿಸಿಎಲ್‌ನ ವಿವಿಧ ಎಸ್ಕಾಂಗಳ (ಮೆಸ್ಕಾಂ, ಬೆಸ್ಕಾಂ, ಹೆಸ್ಕಾಂ ಇತ್ಯಾದಿ) ಮೂಲಕ ಆಯಾ ಪ್ರದೇಶಕ್ಕೆ ವಿತರಣೆಯಾಗುತ್ತದೆ.

ಯುಪಿಸಿಎಲ್‌ ಸಿಂಹಪಾಲು ಬೆಂಗಳೂರು ಮತ್ತು ಹುಬ್ಬಳ್ಳಿಗೆ ಪೂರೈಕೆಯಾಗುತ್ತದೆ. ಮೆಸ್ಕಾಂ ಪಾಲು ಅತೀ ಕಡಿಮೆ. 
ಯುಪಿಸಿಎಲ್‌ ಪೂರೈಸಿದ ವಿದ್ಯುತ್‌ನ ಬಿಲ್‌ ಪಾವತಿಸುವಲ್ಲಿ ಕರ್ನಾಟಕ ಸರಕಾರ ತೋರಿರುವ ನಿರ್ಲಕ್ಷವೇ ಈ ಬಾರಿಯ ಸಮಸ್ಯೆಗೆ ಮೂಲ ಕಾರಣವಾಗಿದೆ.

Advertisement

ಹುಬ್ಬಳ್ಳಿ, ಗುಲ್ಬರ್ಗ ಮುಂತಾದ ಎಸ್ಕಾಂಗಳಿಂದ ಸುಮಾರು 800 ಕೋಟಿ ರೂ. ಬಿಲ್‌ ಮೊತ್ತ ಯುಪಿಸಿಎಲ್‌ಗೆ ಬಾಕಿ ಇದೆ. ಸರಕಾರ ಈ ಮೊತ್ತ ಪಾವತಿಸದೆ ವಿದ್ಯುತ್‌ ಉತ್ಪಾದನಾ ಖಾಸಗಿ ವಲಯಗಳಿಗೆ ತೊಂದರೆಯಾಗಿದೆ. ಯುಪಿಸಿಎಲ್‌ನ 2 ಘಟಕಗಳಿಂದ ಒಟ್ಟು 1,200 ಮೆಗಾವ್ಯಾಟ್‌ ಉತ್ಪಾದನೆ ಸಾಧ್ಯವಿದೆ. ಆದರೆ ಈಗ ಒಂದು ಘಟಕವನ್ನು ದುರಸ್ತಿಗಾಗಿ ಮುಚ್ಚಲಾಗಿದೆ. ದಿಢೀರ್‌ ಲೋಡ್‌ ಶೆಡ್ಡಿಂಗ್‌ ಬಗ್ಗೆ ಮೆಸ್ಕಾಂನವರು ಇದನ್ನೇ ಕಾರಣವಾಗಿ ನೀಡುತ್ತಾರೆ.

“ಒಂದು ಘಟಕದಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ದುರಸ್ತಿ ನಿರ್ವಹಣಾ ಕಾರ್ಯ ನಡೆಯುತ್ತಿದೆ. ಮುಂದಿನ ಹತ್ತು ದಿನಗಳ ಒಳಗೆ ಈ ಘಟಕ ಪುನರ್‌ ಕಾರ್ಯಾರಂಭಿಸಲಿದೆ’ ಎಂದು ಯುಪಿಸಿಎಲ್‌ ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ ಅವರು ಮಂಗಳವಾರ ಉದಯವಾಣಿಗೆ ತಿಳಿಸಿದ್ದಾರೆ.

ಇಚ್ಛಾಶಕ್ತಿಯ ಕೊರತೆ
ಉಭಯ ಜಿಲ್ಲೆಗಳ ವಿದ್ಯುತ್‌ ಪೂರೈಕೆಯ ಸಮಸ್ಯೆಗೆ ಇದೊಂದೇ ಕಾರಣವಲ್ಲ. ರಾಜ್ಯದ ವಿದ್ಯುತ್‌ ಇಲಾಖೆಯು ವಸ್ತುಶಃ ಪುರಾತನ ಕಾಲದಲ್ಲಿಯೇ ಇದೆ ಅಂದರೆ ಉತ್ಪ್ರೇಕ್ಷೆಯಲ್ಲ. ಆಧುನೀಕರಣದ ಕಾರ್ಯ ನಿರೀಕ್ಷಿತ ವೇಗ ಪಡೆದಿಲ್ಲ. ವಿದ್ಯುತ್‌ ಪೂರೈಕೆಯ ವೇಳೆ ಸಂಭವಿಸುವ “ಸೋರುವಿಕೆ’ಯೇ ಅಧಿಕವಾಗಿದೆ. ಒಂದಷ್ಟು ಗಾಳಿ ಬೀಸಿದರೂ ತಡೆದುಕೊಳ್ಳುವ ಸ್ಥಿತಿಯಲ್ಲಿ ವಿದ್ಯುತ್‌ ಪೂರೈಕೆಯ ತಂತಿಗಳು ಇರುವುದಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರ ತೆಯೂ ಇಲ್ಲಿ ಗಮನಾರ್ಹ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ದಿನದ 24 ತಾಸು ಕೂಡ ವಿದ್ಯುತ್‌ ಪೂರೈಕೆ ಇರಬೇಕೆಂದು ಇಲ್ಲಿನ ರಾಜಕೀಯ ಮುಖಂಡರು ಪ್ರಯತ್ನಿಸಿದ್ದಿದೆ. ಆದರೆ ಈ ಬಗ್ಗೆ ನಿರಂತರ ಒತ್ತಡಕ್ಕೆ ಯಾರೂ ಮುಂದಾಗಿಲ್ಲ. ಉಭಯ ಜಿಲ್ಲೆಗಳಲ್ಲಿ ವಿದ್ಯುತ್‌ ಸಂಬಂಧಿತ ಸೇವಾ ಕಾರ್ಯ ಶ್ಲಾಘನೀಯವಾಗಿ ಸುಧಾ ರಣೆಯಾಗಿದ್ದರೂ ಆಧುನೀಕರಣ ಅಪೇಕ್ಷಣೀಯ. ಪಕ್ಷಭೇದ ಮರೆತು ರಾಜಕಾರಣಿ ಗಳು ಈ ಹಕ್ಕೊತ್ತಾಯ ಮಂಡಿಸ ಬೇಕು. ಆದರೆ ಶೀಘ್ರದಲ್ಲೇ ಬರುವ ಚುನಾವಣೆಗಳು ಈ ವಿದ್ಯುತ್‌ ಸಮಸ್ಯೆಯನ್ನೂ ರಾಜಕೀಯ ಲಾಭಕ್ಕೆ ಬಳಸಿಕೊಂಡರೆ?

ಯುಪಿಸಿಎಲ್‌ಗೆ 800 ಕೋಟಿ ರೂ. ಬಾಕಿ!
ಯುಪಿಸಿಎಲ್‌ಗೆ ಸರಕಾರದಿಂದ ಸುಮಾರು 800 ಕೋಟಿ ರೂ. ಮೊತ್ತ ಬಾಕಿ ಇದೆ. ಇದರಲ್ಲಿ ಸಿಂಹಪಾಲು ಹುಬ್ಬಳ್ಳಿ, ಗುಲ್ಬರ್ಗಗಳಿಗೆ ಸಂಬಂಧಿಸಿದೆ. ಯುಪಿಸಿಎಲ್‌ ಉತ್ಪಾದಿಸಿದ ವಿದ್ಯುತ್ತಿನ ಸಿಂಹಪಾಲು ಬೆಂಗಳೂರು, ಹುಬ್ಬಳ್ಳಿಗೆ ವಿತರಣೆಯಾಗುತ್ತದೆ. ದ.ಕ.-ಉಡುಪಿ ಜಿಲ್ಲೆಗಳಿಗೆ ದೊರೆಯುವ ಪ್ರಮಾಣ ಶೇ. 2ರಷ್ಟು ಮಾತ್ರ. ಈ ಪ್ರಮಾಣವನ್ನು ಹೆಚ್ಚಿಸ ಬೇಕೆಂಬ ಬೇಡಿಕೆಗೆ ವಿದ್ಯುತ್‌ ಇಲಾಖೆ ಮೌನವಾಗಿದೆ. ಈ ಸಂಸ್ಥೆಗೆ ಬೇಕಾದ ಕಲ್ಲಿದ್ದಲು (ಕೋಲ್‌) ಈಗಾಗಲೇ ನವಮಂಗಳೂರು ಬಂದರಿನಲ್ಲಿ ಸಂಗ್ರಹವಿದೆ. ಆದರೆ ಪಾವತಿಸಲು ಮೊತ್ತದ ಕೊರತೆ ಇದೆ. ಕಲ್ಲಿದ್ದಲು ಬಿಡಿಸಿ ಕೊಳ್ಳದಿರುವುದರಿಂದ ದಿನಕ್ಕೆ ಸುಮಾರು 10 ಲಕ್ಷ ರೂ. ದಂಡ ಕಟ್ಟಬೇಕು. ಸರಕಾರ ಮೊತ್ತ ಪಾವತಿಸದೇ ವರ್ಷಗಳು ಸಾಗುತ್ತಿವೆ. ಸಕಾಲಿಕ ಮೊತ್ತ ಪಾವತಿಯಲ್ಲಿ ಮೆಸ್ಕಾಂ ಅಗ್ರಸ್ಥಾನದಲ್ಲಿದೆ. ಉಭಯ ಜಿಲ್ಲೆಗಳಿಗೆ ವಿದ್ಯುತ್‌ ಪೂರೈಕೆಗೆ ಶರಾವತಿಯೇ ಮುಖ್ಯವಾಗಿದ್ದು ಉಳಿದಂತೆ ಯುಪಿಸಿಎಲ್‌, ರಾಯಚೂರು, ವಾರಾಹಿ ವಿವಿಧ ವಿಂಡ್‌ಮಿಲ್‌ಗ‌ಳು, ಕಿರುಜಲ ವಿದ್ಯುತ್‌ ಯೋಜನೆಗಳಿಂದ ಪೂರೈಕೆಯಾಗುತ್ತದೆ. ಉಭಯ ಜಿಲ್ಲೆಗಳಿಗೆ ಮೆಸ್ಕಾಂ ಮೂಲಕ (ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ) ನಿರೀಕ್ಷಿತ ಅಗತ್ಯ ವಿದ್ಯುತ್‌ನ ಪ್ರಮಾಣ ದಿನಕ್ಕೆ ಸುಮಾರು 150 ಲಕ್ಷ ಯುನಿಟ್‌ಗಳು. ಈಗ ಪೂರೈಕೆಯಾಗುತ್ತಿರುವುದು 120 ಲಕ್ಷ ಯುನಿಟ್‌ಗಳು. 

ವಿಪರ್ಯಾಸ
ಯುಪಿಸಿಎಲ್‌ಗೆ ಈಗ ಕಲ್ಲಿದ್ದಲು ಲಭ್ಯವಿದೆ. ಆದರೆ ಖರೀದಿಸಲು ಮೊತ್ತವಿಲ್ಲ. ರಾಯಚೂರು ಸ್ಥಾವರಕ್ಕೆ ಹಣವಿದೆ. ಆದರೆ ಖರೀದಿಸಲು ಕಲ್ಲಿದ್ದಲು ಲಭ್ಯವಿಲ್ಲ! ಇದು ವಿದ್ಯುತ್‌ ನಿರ್ವಹಣಾ ವ್ಯವಸ್ಥೆಯ ಪರಿಸ್ಥಿತಿ.

ಅಂದಹಾಗೆ
ಎರಡೂವರೆ ದಶಕಗಳ ಹಿಂದೆ ಕಲಾವಿದರೋರ್ವರು ರಚಿಸಿದ ವ್ಯಂಗ್ಯಚಿತ್ರ ಉದಯವಾಣಿಯಲ್ಲಿ ಪ್ರಕಟವಾಗಿತ್ತು. ಅದು ಮೂರು ಕತ್ತಲು ಚೌಕಗಳ ರಚನೆ. ಶೀರ್ಷಿಕೆ: ಸೆಕೆಗಾಲದಲ್ಲಿ ಕೊರತೆಯಿಂದ ವಿದ್ಯುತ್‌  ಪೂರೈಕೆ ಇಲ್ಲ. ಮಳೆಗಾಲದಲ್ಲಿ ಸಿಡಿಲು ಮಿಂಚಿಂದ ವಿದ್ಯುತ್‌ ಪೂರೈಕೆ ಇಲ್ಲ. ಚಳಿಗಾಲದಲ್ಲಿ ದುರಸ್ತಿ ಕಾರ್ಯದಿಂದ ವಿದ್ಯುತ್‌ ಪೂರೈಕೆ ಇಲ್ಲ. 

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next