Advertisement

ಪೆಟ್ರೋಲ್‌ ಬೈಕ್‌ಗಳಿಗೆ ಕರೆಂಟ್‌ ಶಾಕ್‌!ಇಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳತ್ತ ಹೆಚ್ಚಿದ ಒಲವು

02:46 PM Mar 26, 2022 | Team Udayavani |

ಹುಬ್ಬಳ್ಳಿ: ಪರಿಸರಸ್ನೇಹಿ ಇಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಕಡೆ ಜನರು ಹೆಚ್ಚು ವಾಲುತ್ತಿದ್ದು, ಪೆಟ್ರೋಲ್‌ ವಾಹನಗಳ ವಹಿವಾಟಿಗೆ ಹೊಡೆತ ಬೀಳತೊಡಗಿದೆ. ಇ-ಸ್ಕೂಟರ್‌ ಬಳಕೆಯ ಹೊಸ ಟ್ರೆಂಡ್‌ ಶುರುವಾಗಿದೆ. ಪೆಟ್ರೋಲ್‌ ದರ ಲೀಟರ್‌ಗೆ 100ರೂ. ದಾಟಿರುವುದರಿಂದ ಅವಳಿನಗರಗಳಲ್ಲಿ ಇಲೆಕ್ಟ್ರಿಕ್‌ ಸ್ಕೂಟರ್‌ಗಳ ಬೇಡಿಕೆ ಹೆಚ್ಚಾಗಿದೆ. ಇ-ಸ್ಕೂಟರ್‌ಗಳನ್ನು ಬುಕ್‌ ಮಾಡಿದ ವಾರದಲ್ಲಿ ವಾಹನ ದೊರೆಯತೊಡಗಿದೆ.

Advertisement

ಬೇಡಿಕೆ ಇಳಿಮುಖ: ನಗರದ ಬಹುತೇಕ ಪೆಟ್ರೋಲ್‌ ಬೈಕ್‌ ಶೋರೂಮ್‌ಗಳಲ್ಲಿ ಕಳೆದ ಕೆಲವು ದಿನಗಳಿಂದ ವಾಹನಗಳ ಮಾರಾಟ ಇಳಿಮುಖವಾಗಿದೆ. ಟಿವಿಎಸ್‌, ಬಜಾಜ್‌ ಸೇರಿದಂತೆ ಇನ್ನಿತರ ವಾಹನಗಳ ಮಾರಾಟದಲ್ಲಿ ಶೇ.30-40 ಇಳಿಮುಖವಾಗಿರುವುದು ಕಂಡುಬಂದಿದೆ.

ಆದರೆ ಹೀರೊ ಹಾಗೂ ಹೊಂಡಾ ಕಂಪನಿಯ ಮಾರಾಟದಲ್ಲಿ ಅಷ್ಟೇನೂ ಪರಿಣಾಮ ಬೀರಿರುವುದು ಕಂಡುಬಂದಿಲ್ಲ,ಈ ಹಿಂದೆ ಇಲೆಕ್ಟ್ರಿಕ್‌ ವಾಹನಗಳ ಖರೀದಿ ದೊಡ್ಡ ನಗರಗಳಲ್ಲಿ ಮಾತ್ರ ಜೋರಾಗಿತ್ತು. ಈಗ ದ್ವಿತೀಯ ಸ್ತರದ ನಗರಗಳಲ್ಲಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಮೊದಲು ಇ ಸ್ಕೂಟರ್‌ ಅನ್ನು ಪರಿಸರ ಕಾಳಜಿ ಮಾಡುವವರು ಮಾತ್ರ ಬಳಕೆ ಮಾಡುತ್ತಿದ್ದರು. ಆದರೆ, ಸಾಂಪ್ರದಾಯಿಕ ಇಂಧನ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲೆಕ್ಟ್ರಿಕ್‌ ವಾಹನಗಳ ಬಳಕೆ ಹೆಚ್ಚತೊಡಗಿದೆ.

ಪೆಟೋಲ್‌ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಗಳು ಸಹ ಇದೀಗ ಇಲೆಕ್ಟ್ರಿಕ್‌ ವಾಹನ ಉತ್ಪಾದನೆ ಮಾಡುತ್ತಿವೆ. ಇವುಗಳೊಂದಿಗೆ ಓಲಾ, ಏಥರ್‌ ಸ್ಟಾರ್ಟ್‌ಅಪ್‌ ಗಳು ಮಿಂಚುತ್ತಿವೆ. ಇವುಗಳೊಂದಿಗೆ ಚೀನಾದ ಕೆಲ ಕಂಪನಿಗಳ ಬ್ಯಾಟರಿ ಆಧಾರಿತ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿವೆ. ಡಿಸೈನ್‌, ಬಣ್ಣ ಮತ್ತಿತರ ವಿಭಾಗಗಳಲ್ಲಿಯೂ ಪೆಟ್ರೋಲ್‌ ಸ್ಕೂಟರ್‌ಗಳಿಗೆ ಸ್ಪರ್ಧೆ ನೀಡುವ ದಿಸೆಯಲ್ಲಿ ಇ-ಸ್ಕೂಟರ್‌ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.

80ರಿಂದ 1,95,000 ರೂ.ವರೆಗೆ
ಈಗಾಗಲೇ ಮಾರುಕಟ್ಟೆಯಲ್ಲಿ ಓಲಾ ಎಸ್‌1, ಓಲಾ ಎಸ್‌1 ಪ್ರೊ, ಏಥರ್‌ 450ಎಕ್ಸ್, 450 ಪ್ಲಸ್‌, ಕೊಮಾತಿ ಎಸ್‌ಐ, ಎಕ್ಸ್‌ಟಿಟಿ, ಎಕ್ಸ್‌4, ಬಜಾಜ್‌ ಚೇತಕ್‌, ಟಿವಿಎಸ್‌ ಐಕ್ಯೂಬ್‌ ಇಲೆಕ್ಟ್ರಿಕ್‌, ಓನಾವಾ ಐಪ್ರಸ್‌, ಹೀರೋ ಆಪ್ಟಿಮಾ ಸೇರಿದಂತೆ ವಿವಿಧ ಕಂಪನಿಗಳ ಹಲವು ಬಗೆಯ ಸ್ಕೂಟರ್‌ಗಳಿವೆ. ಇವುಗಳ ಬೆಲೆ 80,000ರೂ.ಗಳಿಂದ 1,95,000 ರೂ.ವರೆಗೆ ಇವೆ. ಈಗಾಗಲೇ ನಗರದಲ್ಲಿ ಏಥರ್‌ ಎನರ್ಜಿ ವತಿಯಿಂದ ನಾಲ್ಕು ಕಡೆ ಸ್ಪೀಡ್‌ ಚಾರ್ಜಿಂಗ್‌ ಪಾಯಿಂಟ್‌ ಮಾಡಲಾಗಿದ್ದು, ಇನ್ನೂ ನಾಲ್ಕು ಕಡೆ ಮಾಡಲು ಸಿದ್ಧತೆ ನಡೆದಿದೆ.

Advertisement

ಕೆಲವೊಂದು ಇಲೆಕ್ಟ್ರಿಕ್‌ ವಾಹನಗಳಿಗೆ ನೋಂದಣಿಯಲ್ಲಿ ರಿಯಾಯಿತಿ ಇದ್ದು, ಇನ್ನು ಕೆಲವು ವಾಹನಗಳಿಗೆ ನೋಂದಣಿ ಕಡ್ಡಾಯವಾಗಿದೆ. ಇಲೆಕ್ಟ್ರಿಕ್‌ ವಾಹನಗಳಿಗೆ ಟ್ಯಾಕ್ಸ್‌ನಲ್ಲಿ ರಿಯಾಯಿತಿಯೂ ಇದೆ. 250 ವ್ಯಾಟ್‌ಗಿಂತ ಕಡಿಮೆ ಶಕ್ತಿಯ ಬ್ಯಾಟರಿ ಹಾಗೂ 25 ಕಿಮೀ ವೇಗಮಿತಿ ಇರುವ ಇ-ವಾಹನಗಳಿಗೆ ನೋಂದಣಿ ಅಗತ್ಯವಿಲ್ಲ. ಇದಕ್ಕಿಂತ ಹೆಚ್ಚಿನ ಶಕ್ತಿಶಾಲಿ ಬ್ಯಾಟರಿ ಇರುವ ಹಾಗೂ ವೇಗ ಹೆಚ್ಚಳವಿರುವ ವಾಹನಗಳಿಗೆ ನೋಂದಣಿ ಕಡ್ಡಾಯ.
ಕೆ. ದಾಮೋದರ, ಆರ್‌ಟಿಒ ಹುಬ್ಬಳ್ಳಿ

ಸದ್ಯ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಇಲೆಕ್ಟ್ರಿಕ್‌ ಬೈಕ್‌ಗಳದ್ದೇ ಹವಾ ನಡೆಯುತ್ತಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಬೈಕ್‌ ಸವಾರಿ ಮಾಡಬಹುದು. ಮನೆಯಲ್ಲಿಯೇ ಬ್ಯಾಟರಿ ಚಾರ್ಜ್‌ ಮಾಡಿಕೊಳ್ಳಬಹುದಾಗಿದ್ದು, ಪರಿಸರ ಸ್ನೇಹಿಯೂ ಆಗಿದೆ. ಕೆಲವೊಂದು ಮಾಡೆಲ್‌ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅಂತಹವುಗಳ ಕೊರತೆ ಕಂಡುಬರುತ್ತಿದೆ. ಯುಗಾದಿ ಹಿನ್ನೆಲೆಯಲ್ಲಿ ವಾಹನಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆ ಇದೆ.
ಅನಿಲ್‌ ಬಾಗರೇಚಾ,
ಕೊಮಾಕಿ ವೆಹಿಕಲ್ಸ್‌ ಶಾಖೆಯ ಮಾಲೀಕ

ಇಲೆಕ್ಟ್ರಿಕ್‌ ಬೈಕ್‌ಗಳು ಮಾರುಕಟ್ಟೆಗೆ ಬಂದಾಗಿನಿಂದ ಪೆಟ್ರೋಲ್‌ ಬೈಕ್‌ ಗಳ ಮಾರಾಟದಲ್ಲಿ ಸುಮಾರು ಶೇ.30 ಇಳಿಮುಖವಾಗಿದೆ. ಪ್ರತಿ ತಿಂಗಳು ಕಡಿಮೆ ಎಂದರೂ 120ಕ್ಕೂ ಹೆಚ್ಚು ವಾಹನಗಳನ್ನು ಮಾರುತ್ತಿದ್ದೆವು. ಆದರೆ ಇದೀಗ ಅದು 80-90 ವಾಹನಗಳಿಗೆ ಬಂದು ನಿಂತಿದೆ.
ಎಡ್ವರ್ಡ್‌ ಸೈಮನ್‌, ಬೆಲ್ಲದ ಹೀರೊ ಧಾರವಾಡ ಬ್ರ್ಯಾಂಚ್‌ ವ್ಯವಸ್ಥಾಪಕ

ಕೆಲ ದಿನಗಳಿಂದ ಹಳೇ ವಾಹನ ಮಾರಾಟದಲ್ಲೂ ಇಳಿಮುಖ ಕಂಡಿದೆ. ಹೆಚ್ಚಿನ ಜನರು ಇಲೆಕ್ಟ್ರಿಕ್‌ ಬೈಕ್‌ ಖರೀದಿಗೆ ಮುಂದಾಗಿದ್ದು ಕಾರಣ ಇರಬಹುದು.

ರಾಜು ಕೋರ್ಯಾನಮಠ, ಕಾರ್ಯದರ್ಶಿ

ಹಳೇ ದ್ವಿಚಕ್ರ ವಾಹನಗಳ ಮಾರಾಟಗಾರರ ಹಾಗೂ ಮಧ್ಯವರ್ತಿಗಳ ಸಂಘ

*ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next