Advertisement

ಎಂಜಿನಿಯರಿಂಗ್‌ ಕಾಲೇಜುಗಳ ಕರೆಂಟ್‌ ಕಟ್‌! ವಿದ್ಯುತ್‌ ಬಿಲ್‌ ಪಾವತಿಸದ ಸರಕಾರಿ ಕಾಲೇಜುಗಳು

12:15 AM Nov 10, 2022 | Team Udayavani |

ಚಾಮರಾಜನಗರ: ವಿದ್ಯುತ್‌ ನಿಗಮಗಳಿಗೆ ವಿದ್ಯುತ್‌ ಬಿಲ್‌ ಕಟ್ಟದ ಕಾರಣ ರಾಜ್ಯದ ಬಹುತೇಕ ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಹಾಗೂ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಿಗೆ ಒಂದು ವಾರದಿಂದ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ.

Advertisement

ರಾಜ್ಯದ ಬಹುತೇಕ ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಹಾಗೂ 80 ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಲಕ್ಷಾಂತರ ರೂ. ವಿದ್ಯುತ್‌ ಬಿಲ್‌ ಬಾಕಿ ಇದೆ.

ಚಾಮರಾಜನಗರದ ಹೊರ ವಲಯದಲ್ಲಿರುವ ಸರಕಾರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯುತ್‌ ಬಾಕಿ 2 ಲಕ್ಷ ರೂ. ಇತ್ತು. ಹೀಗಾಗಿ ಸೆಸ್ಕ್ನಿಂದ ಸಂಪರ್ಕ ಕಡಿತಗೊಳಿಸಲಾಗಿದೆ. ಕಳೆದ ಒಂದು ವಾರದಿಂದ ವಿದ್ಯುತ್‌ ಸಂಪರ್ಕ ಇಲ್ಲದೆ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಸೌಲಭ್ಯ ಸಿಗುತ್ತಿಲ್ಲ. ನಗರದ ಕಾಲೇಜಿನಲ್ಲಿ ಜನರೇಟರ್‌ ಸೌಲಭ್ಯ ಇದೆಯಾದರೂ, ಅದನ್ನು ಸಂಪೂರ್ಣವಾಗಿ ಬಳಕೆ ಮಾಡಲು ಸಾಧ್ಯವಿಲ್ಲ. ನೀರಿನ ಪೂರೈಕೆಯಂಥ ಅಗತ್ಯ ವ್ಯವಸ್ಥೆಗೆ ಜನರೇಟರ್‌ ಬಳಸಿಕೊಳ್ಳಲಾಗುತ್ತಿದೆ.

ಇದಲ್ಲದೇ ರಾಜ್ಯದ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳ ವಿದ್ಯುತ್‌ ಬಿಲ್‌ ಅನ್ನೂ ಕಟ್ಟದೇ ಅವುಗಳಲ್ಲೂ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ. ನಗರದ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ 82,000 ರೂ. ವಿದ್ಯುತ್‌ ಬಿಲ್‌ ಬಾಕಿ ಇದ್ದು, ಪವರ್‌ಲೈನ್‌ ಸಂಪರ್ಕ ಕಡಿತಗೊಳಿಸಲಾಗಿದೆ.

ಎಂಜಿನಿಯರಿಂಗ್‌ ತರಗತಿಗಳು ಮುಖ್ಯವಾಗಿ ವಿದ್ಯುತನ್ನು ಅವಲಂಬಿಸಿವೆ. ಪ್ರಯೋಗಾಲಯಗಳಿಗೆ ವಿದ್ಯುತ್‌ ಅತ್ಯಗತ್ಯ. ಒಂದು ವಾರದಿಂದ ವಿದ್ಯಾರ್ಥಿ ಗಳು ಪರದಾಡುತ್ತಿದ್ದಾರೆ ಎಂದು ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಅಸಿಯಾ ಆತಂಕ ವ್ಯಕ್ತಪಡಿಸಿದರು.

Advertisement

ಎಲ್ಲೆಲ್ಲಿ, ಎಷ್ಟು ಬಾಕಿ?
-ಸರಕಾರಿ ಎಂಜಿನಿಯರಿಂಗ್‌ ಕಾಲೇಜು, ಮೊಸಳೆ ಹೊಸಹಳ್ಳಿ ಹಾಸನ- 5.64 ಲಕ್ಷ ರೂ.
– ಸ. ಎಂ. ಕಾಲೇಜು ಹಾಸನ- 5 ಲಕ್ಷ ರೂ.
– ಸ. ಎಂ.ಕಾಲೇಜು, ಕುಶಾಲನಗರ- 4.25 ಲ.ರೂ.
-ಸ. ಎಂ. ಕಾಲೇಜು ಚಾ.ನಗರ- 2 ಲಕ್ಷ ರೂ.
-ಸ. ಎಂ. ಕಾಲೇಜು ರಾಮನಗರ-4.50 ಲಕ್ಷ ರೂ.
– ಎಸ್‌ಜೆ ಪಾಲಿಟೆಕ್ನಿಕ್‌ ಬೆಂಗಳೂರು- 6.8ಲ.ರೂ.
-ಸ. ಪಾಲಿಟೆಕ್ನಿಕ್‌ ಚಾ.ನಗರ -82,000 ರೂ.
-ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಕೆ.ಆರ್‌. ಪೇಟೆ, ಮಂಡ್ಯ- 5.20 ಲಕ್ಷ ರೂ.
– ಸ. ಎಂ. ಕಾಲೇಜು, ಹಾವೇರಿ- 5.70 ಲಕ್ಷ ರೂ.

ನಮ್ಮ ಕಾಲೇಜಿನಲ್ಲಿ ಒಂದು ವಾರದಿಂದ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ. ಈ ಬಗ್ಗೆ ಕೇಂದ್ರ ಕಚೇರಿಯ ಗಮನಕ್ಕೆ ತರಲಾಗಿದೆ. ಪತ್ರವನ್ನೂ ಬರೆಯುತ್ತಿದ್ದೇವೆ. ಸದ್ಯಕ್ಕೆ ಜನರೇಟರ್‌ನಿಂದ ನಿಭಾಯಿಸುತ್ತಿದ್ದೇವೆ..
– ವೆಂಕಟೇಶ್‌,
ಪ್ರಿನ್ಸಿಪಾಲ್‌, ಸರಕಾರಿ ಎಂಜಿನಿಯರಿಂಗ್‌ ಕಾಲೇಜು, ಚಾ.ನಗರ.

ಒಂದು ವಾರದಿಂದ ವಿದ್ಯುತ್‌ ಇಲ್ಲದೇ ಪ್ರಯೋ ಗಾಲಯಗಳು ನಡೆಯುತ್ತಿಲ್ಲ. ಈ ಸಮಸ್ಯೆ ಆಗಾಗ ತಲೆದೋರುತ್ತಲೇ ಇರುತ್ತದೆ. ಸರ್ಕಾರ ಇದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು. ನಾವು ಇಂದು ಜಿಲ್ಲಾಧಿಕಾರಿಯವರ ಕಚೇರಿಗೆ ತೆರಳಿ ಈ ಬಗ್ಗೆ ಮನವಿಯನ್ನೂ ಸಲ್ಲಿಸಿದ್ದೇವೆ.
-ಸೃಷ್ಟಿ, ಎಂಜಿನಿಯರಿಂಗ್‌
ಕಾಲೇಜು ವಿದ್ಯಾರ್ಥಿನಿ.

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next