Advertisement

ಕಸದಿಂದ ಕರೆಂಟ್‌, ಗೊಬ್ಬರ ತಯಾರಿಕೆ

12:06 PM Oct 24, 2017 | Team Udayavani |

ಬೆಂಗಳೂರು: ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ವಿದ್ಯುತ್‌ ಉತ್ಪಾದಿಸುವ ಜತೆಗೆ ಉತ್ಕೃಷ್ಠ ಸಾವಯವ ಗೊಬ್ಬರ ತಯಾರಿಸುವ ತಂತ್ರಜ್ಞಾನದ ಬಗ್ಗೆ ಫ್ರಾನ್ಸ್‌ ಮೂಲದ ಕಂಪನಿಯೊಂದರ ನಿಯೋಗ ಸೋಮವಾರ ಪ್ರಾತ್ಯಕ್ಷಿಕೆ ನೀಡಿತು.

Advertisement

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಯೋಗದ ಪ್ರಮುಖರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಹಸಿ, ಒಣ ಕಸವನ್ನು ವಿಂಗಡಿಸಿಕೊಂಡು ಬಯೋ ಮಿಥನೈಸೇಷನ್‌ ವಿಧಾನದಡಿ ಹಸಿ ಕಸ ಸಂಸ್ಕರಿಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸುವಂತಹ ಸುಧಾರಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಜತೆಗೆ ಹಸಿ ತ್ಯಾಜ್ಯ ಸಂಸ್ಕರಿಸಿ ಗುಣಮಟ್ಟದ ಸಾವಯವ ಗೊಬ್ಬರ ತಯಾರಿಕೆಗೆ ಆದ್ಯತೆ ನೀಡಲಾಗಿದೆ. ಈ ಸುಧಾರಿತ ತಂತ್ರಜ್ಞಾನದಡಿ ಶೇ.90ರಷ್ಟು ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಅವಕಾಶವಿದೆ. ಗುಣಮಟ್ಟದ ಸಾವಯವ ಗೊಬ್ಬರವನ್ನು ಕೃಷಿ ಇಲಾಖೆಯೇ ಖರೀದಿಸಿದರೆ ರೈತರಿಗೆ ಪೂರೈಸಲು ಅನುಕೂಲವಾಗಲಿದೆ ಎಂದು ನಿಯೋಗದ ಪ್ರತಿನಿಧಿಗಳು ತಿಳಿಸಿದರು. 

ಬಳಿಕ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್‌, ಈ ಸಂಬಂಧ ಸಮಗ್ರ ಸಾಧ್ಯತಾ ವರದಿ ಸಲ್ಲಿಸುವಂತೆ ನಿಯೋಗದ ಪ್ರತಿನಿಧಿಗಳಿಗೆ ಸೂಚಿಸಿದರು. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸಫ್ರಾಜ್‌ ಖಾನ್‌ ಇತರರು ಉಪಸ್ಥಿತರಿದ್ದರು.

ಪರಿಶೀಲನೆ ಸಭೆ: ನಗರದಲ್ಲಿ ಬಡವರಿಗೆ “ಅನ್ಯಭಾಗ್ಯ’ ಯೋಜನೆಯಡಿ ಸಮರ್ಪಕವಾಗಿ ಪಡಿತರ ವಿತರಣೆ ಆಗುತ್ತಿದೆಯೇ ಎಂಬ ಕುರಿತು ಮಾಹಿತಿ ಪಡೆಯಲು ಸಚಿವ ಕೆ.ಜೆ.ಜಾರ್ಜ್‌ ಸೋಮವಾರ ಪರಿಶೀಲನಾ ಸಭೆ ನಡೆಸಿದರು.

Advertisement

ನಗರದ ಅಲಿ ಅಸ್ಕರ್‌ ರಸ್ತೆಯ ಬಿಎಂಆರ್‌ಡಿಎ ಕಚೇರಿಯಲ್ಲಿ ಬೆಂಗಳೂರು ನಗರ ಜಿಲ್ಲಾ ಆಹಾರ ವಿಚಕ್ಷಣ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದ ಸಚಿವರು, ನಗರದ ಎಲ್ಲ ಅರ್ಹ ಫ‌ಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಸಮರ್ಪಕವಾಗಿ ಪಡಿತರ ತಲುಪಿಸಲು ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದರು. ಮೇಯರ್‌ ಆರ್‌.ಸಂಪತ್‌ರಾಜ್‌, ಉಪ ಮೇಯರ್‌ ಪದ್ಮಾವತಿ, ಶಾಸಕ ಎಸ್‌.ಟಿ.ಸೋಮಶೇಖರ್‌ ಇತರರು ಉಪಸ್ಥಿತರಿದ್ದರು.

ಘಟಕ ನಿರ್ಮಾಣ ಕುರಿತು ಪ್ರಾತ್ಯಕ್ಷಿಕೆ: ಸುಮಾರು 500 ಟನ್‌ ಸಂಸ್ಕರಣೆ ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ಸಂಸ್ಥೆಯೇ 260 ಕೋಟಿ ರೂ. ವೆಚ್ಚ ಮಾಡಲಿದ್ದು, ಘಟಕದಿಂದ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ನಿಗದಿ ಪಡಿಸುವ ದರದಲ್ಲಿ ಮಾರಾಟ ಮಾಡಿ, ಹಣ ಪಡೆದುಕೊಳ್ಳಲಿದೆ.

ಘಟಕ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು 30 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಬೇಕಾಗುತ್ತದೆ. ಈ ಸಂಬಂಧ ಸಂಸ್ಥೆ ವಿವರವಾದ ಪ್ರಾತ್ಯಕ್ಷಿಕೆ ನೀಡಿದ್ದು, ಸಾಧ್ಯತಾ ವರದಿ ಆಧರಿಸಿ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next