Advertisement

Manipur ದ 5 ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆ 

09:29 PM Jun 02, 2023 | Team Udayavani |

ನವದೆಹಲಿ/ಇಂಫಾಲ: ಕಳೆದೊಂದು ತಿಂಗಳಿಂದ ಸರಣಿ ಹಿಂಸಾಚಾರವನ್ನು ಕಂಡಿರುವ ಮಣಿಪುರದ 5 ಜಿಲ್ಲೆಗಳಲ್ಲಿ ಶುಕ್ರವಾರ ಕರ್ಫ್ಯೂ ಸಡಿಲಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭೇಟಿ ನೀಡಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಅಷ್ಟೇ ಅಲ್ಲ, ಪೊಲೀಸ್‌ ಶಿಬಿರಗಳಿಂದ ಲೂಟಿ ಮಾಡಲಾಗಿದ್ದ 2 ಸಾವಿರಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳ ಪೈಕಿ 140 ಅನ್ನು ಅಮಿತ್‌ ಶಾ ಅವರ ಎಚ್ಚರಿಕೆಯ ಬಳಿಕ ಮರಳಿಸಲಾಗಿದೆ.

Advertisement

4 ದಿನಗಳ ಕಾಲ ರಾಜ್ಯ ಪ್ರವಾಸದಲ್ಲಿದ್ದ ಸಚಿವ ಶಾ ಅವರು ಗುರುವಾರವಷ್ಟೇ ಬಂಡುಕೋರರ ಗುಂಪಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಶಸ್ತ್ರಾಸ್ತ್ರಗಳನ್ನು ಮರಳಿಸದೇ ಇದ್ದರೆ ಅಂಥವರ ವಿರುದ್ಧ ಕಠಿಣಾತಿಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಅದಾದ 24 ಗಂಟೆಗಳಲ್ಲಿ ಮಣಿಪುರದ ವಿವಿಧ ಜಿಲ್ಲೆಗಳಲ್ಲಿ ಒಟ್ಟಾರೆ 140 ಶಸ್ತ್ರಾಸ್ತ್ರಗಳನ್ನು ವಾಪಸ್‌ ಮಾಡಲಾಗಿದೆ. ಈ ಶಸ್ತ್ರಾಸ್ತ್ರಗಳ ಪೈಕಿ ಎಕೆ-47ಗಳು, ಇನ್ಸಾಸ್‌ ರೈಫ‌ಲ್‌ಗಳು, ಅಶ್ರುವಾಯು, ಸ್ಟೆನ್‌ ಗನ್‌ಗಳು, ಗ್ರೆನೇಡ್‌ ಲಾಂಚರ್‌ಗಳು ಮತ್ತು ಹಲವು ಪಿಸ್ತೂಲುಗಳು ಸೇರಿವೆ. ಇದೇ ವೇಳೆ, ಅಮಿತ್‌ ಶಾ ಅವರ ರಾಜ್ಯ ಪ್ರವಾಸ ಪೂರ್ಣಗೊಂಡ ಬಳಿಕವೂ ಮಣಿಪುರದ ಅಲ್ಲಲ್ಲಿ ಶುಕ್ರವಾರ ಹಿಂಸಾಚಾರಗಳು ವರದಿಯಾಗಿವೆ.

ರಾಷ್ಟ್ರಪತಿಯನ್ನು ಭೇಟಿಯಾದ ಸಚಿವ ಶಾ

ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಣಿಪುರದಿಂದ ಮರಳಿದ ಮಾರನೇ ದಿನವೇ ಈ ಭೇಟಿ ನಡೆದಿದೆ. ಇದು ಕೇವಲ ಸೌಜನ್ಯದ ಭೇಟಿ ಎಂದು ಶಾ ಹೇಳಿದ್ದಾರೆ. ಆದರೆ, ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಶಾ ಅವರು ಮಣಿಪುರ ಗಲಭೆ ಕುರಿತು ಮಾಹಿತಿ ನೀಡಲು ಮುರ್ಮು ಅವರನ್ನು ಭೇಟಿಯಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ಮಾಹಿತಿ ಸೋರಿಕೆಗೆ ಸೇನೆ ಖಂಡನೆ

Advertisement

ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಇರುವಂತೆಯೇ ವಿವಿಧ ಭಾಗಗಳಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮೈತೇಯಿ ಸಮುದಾಯದ ಅಧಿಕಾರಿಗಳ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿವೆ. ಇದರ ಬಗ್ಗೆ ಭಾರತೀಯ ಸೇನೆಯು ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ರೀತಿ ಪಟ್ಟಿಯನ್ನು ಹಂಚಿಕೊಂಡಿರುವುದು ಖಂಡನೀಯ. ನಮ್ಮ ಅಧಿಕಾರಿಗಳು ಧರ್ಮ, ಜಾತಿ, ಜನಾಂಗ ಎಂಬ ಭೇದವಿಲ್ಲದೇ ಸಾವಿರಾರು ಮಂದಿಯನ್ನು ರಕ್ಷಿಸಿದ್ದಾರೆ, ನಿರ್ವಸಿತರಿಗೆ ಆಶ್ರಯ ನೀಡಲು ಆಹಾರ, ನಿದ್ರೆಯಿಲ್ಲದೇ ಹಲವು ದಿನಗಳನ್ನು ಕಳೆದಿದ್ದಾರೆ. ಈಗ ಅಧಿಕಾರಿಗಳ ಹೆಸರುಗಳನ್ನು ಸೋರಿಕೆ ಮಾಡುವ ಮೂಲಕ ಅವರ ನೈತಿಕತೆಯನ್ನು ಕುಗ್ಗಿಸುತ್ತಿರುವುದು ದುಷ್ಕೃತ್ಯ ಎಂದು ಸೇನೆ ಟ್ವೀಟ್‌ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next