ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆ ಆಗುತ್ತಿರುವವರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ ಕಂಡುಬಂದಿದೆ.
ಭಾನುವಾರ 4,540 ಮಂದಿ ಕೋವಿಡ್-19 ನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರಗಳಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಕೊರೊನಾ ಸೋಂಕಿನಿಂದ ಚೇತರಿಸಿ ಕೊಂಡು ಬಿಡುಗಡೆ ಆಗುತ್ತಿರುವವರ ಸಂಖ್ಯೆ ಇದೀಗ 1,05,692ಕ್ಕೆ ಏರಿಕೆಯಾಗಿದ್ದು ಚೇತರಿಕೆ ಪ್ರಮಾಣ ಶೇ.71.64 ರಷ್ಟಿದೆ.
ಜತೆಗೆ 2,824 ಪ್ರಕರಣ ದೃಢಪಟ್ಟಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 1,47,581ಕ್ಕೆ ತಲುಪಿದೆ. ಅಲ್ಲದೇ 39,724 ಸಕ್ರಿಯ ಪ್ರಕರಣ ನಗರದಲ್ಲಿದ್ದು ಅವರೆಲ್ಲಾ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಆರೈಕೆ ಪಡೆಯುತ್ತಿದ್ದಾರೆ. 267 ಮಂದಿ ತೀವ್ರ ನಿಗಾ ಘಟಕಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು ಭಾನುವಾರ 25 ಪುರುಷ, 13 ಮಹಿಳೆಯರು ಸೇರಿ 38 ಮಂದಿ ಸಾವನ್ನಪ್ಪಿ ದ್ದಾರೆ. ಈ ಮೂಲಕ ಕೋವಿಡ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ 2,164ಕ್ಕೆ ತಲುಪಿದೆ. ಸಾವಿನ ಪ್ರಮಾಣ ಶೇ.1.47 ರಷ್ಟಿದೆ. ಸಿಲಿಕಾನ್ ಸಿಟಿಯಲ್ಲೀಗ ಒಟ್ಟು ಪಾಸಿಟಿವ್ ಪ್ರಮಾಣ ಶೇ.14.22 ಇದ್ದು, ಆಕ್ಟೀವ್ ಪ್ರಮಾಣ ಶೇ.26.92 ರಷ್ಟಿದೆ. ಭಾನುವಾರ 28,728 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಇದುವರೆಗೂ 10,38,077 ಮಂದಿ ತಪಾಸಣೆ ಮಾಡಲಾಗಿದೆ.
ಹೆಡ್‌ಕಾನ್ಸ್‌ಟೇಬಲ್ ಸಾವು : ಬೆಂಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಹೆಡ್‌ಕಾನ್ಸ್‌ಟೇಬಲ್‌ವೊಬ್ಬರು ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾರೆ. ಜಿ.ಆರ್.ರಾಘವೇಂದ್ರ (41) ಮೃತರು. ಆರ್‌ಎಂಸಿ ಯಾರ್ಡ್ ಠಾಣೆ ಹೆಡ್‌ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಘವೇಂದ್ರ ಅವರಿಗೆ ಆ.25ರಂದು ಸೋಂಕು ದೃಢಪಟ್ಟಿತ್ತು. ಅಂದಿನಿಂದ ಅವರಿಗೆ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ದುರಾದೃಷ್ಟವಶಾತ್ ಶನಿವಾರ ತಡರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ನೆಲಮಂಗಲ ತಾಲೂಕಿನ ಡಾಬಸ್‌ಪೇಟೆ ನಿವಾಸಿಯಾದ ಮೃತ ರಾಘವೇಂದ್ರ, ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ ಎಂದು ಉತ್ತರ ವಿಭಾಗ ಪೊಲೀಸರು ತಿಳಿಸಿದ್ದಾರೆ. ಕೊರೊನಾ ವಾರಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ನಗರ ಪೊಲೀಸ್ ಸಿಬ್ಬಂದಿ ಪೈಕಿ ಸೋಂಕು ದೃಢಪಟ್ಟು ಪಿಎಸ್‌ಐ, ಎಎಸ್‌ಐ, ಕಾನ್ಸ್ ಟೇಬಲ್ ಸೇರಿ 10 ಮಂದಿ ಮೃತಪಟ್ಟಿದ್ದಾರೆ. 1500ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದಾರೆ.