ಬೆಳಗಾವಿ: ಜನ ಮಾನಸದಿಂದ ದೂರ ಸರಿಯುತ್ತಿರುವ ಜಾನಪದ ಮತ್ತು ಧಾರ್ಮಿಕ ಗೀತೆಗಳ ಮೂಲಕ ನಮ್ಮ ಸಂಸ್ಕೃತಿ ಕಾಪಾಡುವಲ್ಲಿ ಜಿನ ಭಜನಾ ಸ್ಪರ್ಧೆ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ ಹೇಳಿದರು.
ನಗರದ ಧರ್ಮನಾಥ ಭವನದಲ್ಲಿ ಭಾರತೀಯ ಜೈನ ಮಿಲನ ವಲಯ- 8ರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಧಾರವಾಡ ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಮೊಬೈಲ್ ಹಾವಳಿಯಿಂದ ಭಕ್ತಿ-ಜಾನಪದ ಗೀತೆಗಳು ನಶಿಸಿಹೋಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಭಕ್ತಿ ಗೀತೆಗಳು, ಜಾನಪದ ಗೀತೆಗಳನ್ನು ಪುನಶ್ಚೇತನಗೊಳಿಸಿ ಹೇಮಾವತಿ ಹೆಗ್ಗಡೆ, ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಧರ್ಮಸ್ಥಳ ಸುರೇಂದ್ರ ಕುಮಾರರವರ ಪೋಷಣೆಯಲ್ಲಿ ಅನಿತಾ ಸುರೇಂದ್ರಕುಮಾರ ಪರಿಕಲ್ಪನೆಯ ಜಿನ ಭಜನಾ ಸ್ಪರ್ಧೆ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ಅಧ್ಯಕ್ಷ ಪುಷ್ಪಕ ಹನಮಣ್ಣವರ ಮಾತನಾಡಿ, ಜಿನ ಭಜನೆ ಮೂಲಕ ಜಾಗೃತಿ ಕಾರ್ಯಕ್ರಮ ಮತ್ತು ಧರ್ಮದ ಕಡೆ ಆಕರ್ಷಣೆ ಬೆಳೆಯುತ್ತಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯಲಿ ಎಂದರು.
ಡಾ| ಪಿ.ಜಿ. ಕೆಂಪಣ್ಣವರ ಪ್ರಾಸ್ತಾವಿಕ ಮಾತನಾಡಿ, ಜಿನ ಭಜನೆ ಪರಂಪರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಾನಾಗಡು ವರ್ಧಮಾನ ಹೆಗ್ಗಡೆ ಅಡಿಪಾಯ ಹಾಕಿದ್ದಾರೆ. ಮೂಡಬಿದರೆ, ಧರ್ಮಸ್ಥಳ ಮುಂತಾದೆಡೆ ಸುತ್ತಾಡಿ ಶ್ರಾವಕರಲ್ಲಿ ಜಿನ ತತ್ವ ಪ್ರಸಾರ ಮಾಡಿದರು. ಅದೇ ಅವಧಿಯಲ್ಲಿ ಹಾರೂಗೇರಿಯ ಅಲಬೇರಿ ಬೆಳಗಾವಿಯ ದ್ವಾರಪಾಲ, ತಿಗಡೊಳ್ಳಿನ ಭೀಷ್ಮಪ್ಪ ಮುಂತಾದವರು ಜಿನ ಭಜನೆ ರಚಿಸಿ ಹಾಡಿನ ಶ್ರಾವಕರಲ್ಲಿ ಜಾಗೃತಿ ಮೂಡಿಸಿದರು ಎಂದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕುಂತಿನಾಥ ಕಲಮನಿ ಹಾಗೂ ಪದ್ಮರಾಜ ವೈಜಣ್ಣವರ ಅವರನ್ನು ಸತ್ಕರಿಸಲಾಯಿತು. ಈ ವೇಳೆ ಜೀವಂಧರ ಕುಮಾರ, ಗುಣಪಾಲ ಹೆಗ್ಗಡೆ, ಅಶೋಕ ಜೈನ, ಸನ್ಮತಿ ಕಸ್ತೂರಿ ಇತರರಿದ್ದರು. ಜೈನ ಮಿಲನ ಮಧ್ಯವರ್ತಿ ಸಮಿತಿ ಕಾರ್ಯದರ್ಶಿ ಡಾ| ನಾಗರಾಜ ಮರೆಣವರ ಸ್ವಾಗತಿಸಿದರು. ಅಜಿತ ಕುಮಾರ ವಂದಿಸಿದರು. ನಮಿತಾ ಪರಮಾಜ ನಿರೂಪಿಸಿದರು.