Advertisement

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

03:22 PM Oct 12, 2024 | Team Udayavani |

ಭಾರತವು ವಿವಿಧ ಸಂಸ್ಕೃತಿ, ಆಚಾರ ವಿಚಾರ, ಭಾಷೆಗಳನ್ನು ಹೊಂದಿರುವ ಭವ್ಯ ದೇಶ. ಇಲ್ಲಿ ಪ್ರತೀ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ, ತಾಲೂಕಿನಿಂದ ತಾಲೂಕಿಗೆ ಬಳಸುವ ಭಾಷೆ, ಆಚರಣೆಗಳು, ಆಹಾರ ಪದ್ಧತಿ, ಉಡುಗೆಗಳು ಬದಲಾಗುತ್ತದೆ. ಇತ್ತೀಚೆಗೆ ಭಾರತದ ಸಂಸ್ಕೃತಿಯನ್ನು ಬೇರೆ ದೇಶಗಳಲ್ಲಿ ಅಳವಡಿಕೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

Advertisement

ಭಾರತದ ಯೋಗಕ್ಕೆ ಈಗ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದೆ. ಇದರೊಂದಿಗೆ ಭಾರತದ ಕಲೆ, ವಿವಿಧ ಆಚಾರಗಳು ವಿದೇಶಿಗರನ್ನು ಸೆಳೆಯುತ್ತಿರುವುದು ಅಚ್ಚರಿಯ ಸಂಗತಿಯೇನು ಅಲ್ಲ. ಯಾಕೆಂದರೆ ಭಾರತದ ಸಂಸ್ಕೃತಿಯು ಅಷ್ಟೊಂದು ಶ್ರೀಮಂತಿಕೆಯಿಂದ ಕೂಡಿದೆ.

ಇತ್ತೀಚೆಗೆ ತೆರೆಯ ಮೇಲೆ ಬಂದ ಕಾಂತಾರ ಗೆದ್ದದ್ದೂ ಕೂಡ ಇದೇ ಕಾರಣದಿಂದ. ಕರಾವಳಿಯ ಕಲೆ, ಸಂಸ್ಕೃತಿ, ಭಾಷೆಯನ್ನು ಬಳಸಿ ಮಾಡಿದ ಸಿನೆಮಾ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಮುಡಿಗೇರುವಂತೆ ಮಾಡಿತು.

ಭಾರತದ ಪ್ರತೀ ಊರು ಒಂದು ವಿಭಿನ್ನ ಸಂಸ್ಕೃತಿಯನ್ನು ಹೊಂದಿದೆ. ಪ್ರತೀ ಊರಿಗೂ ಅದರದ್ದೇ ಆದ ವಿಭಿನ್ನ ಆಚಾರ ವಿಚಾರಗಳಿವೆ. ಅಲ್ಲಿನ ಹಬ್ಬಗಳು, ಆಚರಣೆಗಳು, ನಂಬಿಕೆಗಳು, ಆಹಾರ ಪದ್ಧತಿಯು ಇನ್ನೊಂದು ಊರಿನಲ್ಲಿ ಕಾಣಲು ಸಾಧ್ಯವಿಲ್ಲ. ಇನ್ನೊಂದು ಊರಿಗೆ ತಲುಪುವಾಗ ಭಾಷೆ, ಆಚರಣೆಗಳಲ್ಲಿ ಬದಲಾವಣೆಗಳಾಗಿರುತ್ತದೆ. ಇದೇ ಇಲ್ಲಿನ ವಿಶೇಷತೆ.

Advertisement

ದಕ್ಷಿಣ ಕನ್ನಡದಲ್ಲಿ ತುಳು ಭಾಷೆ ಹೆಚ್ಚು ಜನರು ಬಳಸುವ ಭಾಷೆ. ಆದರೆ ದಕ್ಷಿಣ ಕನ್ನಡದಲ್ಲಿ ಬಳಸುವ ತುಳು ಎಲ್ಲ ಕಡೆಗಳಲ್ಲಿ ಒಂದೇ ಎಂದರೆ ಅಲ್ಲ. ಮಂಗಳೂರಿನ ತುಳು, ಪುತ್ತೂರು-ಸುಳ್ಯ ಪ್ರದೇಶಗಳಲ್ಲಿ ಬಳಸುವ ತುಳುವಿಗೂ ತುಂಬಾ ವ್ಯತ್ಯಾಸವಿದೆ. ಕನ್ನಡದಲ್ಲೂ ಹಾಗೆಯೇ..ಮಂಗಳೂರು ಕನ್ನಡ, ಬೆಂಗಳೂರು ಕನ್ನಡ, ಮಂಡ್ಯ ಕನ್ನಡ ಹೀಗೆ ಆಯಾ ಊರು, ಪ್ರದೇಶಕ್ಕೆ ತಕ್ಕಂತೆ ಭಾಷೆ ಬದಲಾಗುತ್ತದೆ.

ಭಾಷೆ ಮಾತ್ರವಲ್ಲ ಹಬ್ಬಗಳು, ಆಚರಣೆಗಳೂ ಬದಲಾಗುತ್ತವೆ. ಕರ್ನಾಟಕದ ಆಹಾರ ಪದ್ಧತಿ, ಹಬ್ಬಗಳು ನೆರೆಯ ಕೇರಳ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಇಲ್ಲ. ಇನ್ನು ಉತ್ತರ ಭಾರತಕ್ಕೆ ಹೋದರೆ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಹಬ್ಬಗಳು, ಉಡುಪು ಸಂಪೂರ್ಣ ಭಿನ್ನವಾಗಿರುತ್ತದೆ. ಕರ್ನಾಟಕದಲ್ಲೇ ವಿಭಿನ್ನ ಆಚರಣೆಗಳನ್ನು ಕಾಣಬಹುದು.

ತುಳುನಾಡ ಸಂಸ್ಕೃತಿ
ಕರಾವಳಿಯೆಂದೇ ಪ್ರಸಿದ್ಧವಾದ ಅವಿಭಜಿತ ದಕ್ಷಿಣ ಕನ್ನಡವು ಹಲವು ಆಚರಣೆಗಳು, ವಿಭಿನ್ನ ಸಂಸ್ಕೃತಿಗೆ ಹೆಸರುವಾಸಿ. ಇಲ್ಲಿನ ಆಹಾರಪದ್ಧತಿಯೂ ಭಿನ್ನವಾಗಿದೆ. ಪ್ರಕೃತಿಯೊಂದಿಗೆ ಬೆರೆತಿರುವ ಇಲ್ಲಿನ ಜನರ ಆಚರಣೆಗಳೂ, ಹಬ್ಬಗಳೂ ಅದಕ್ಕೆ ಪೂರಕವಾಗಿದೆ. ನಾಗಾರಾಧನೆ, ದೈವಾರಾಧನೆ, ಭೂಮಿಯ ಆರಾಧನೆಗೆ ಇಲ್ಲಿ ಪ್ರಾಧಾನ್ಯತೆ. ಇದರೊಂದಿಗೆ ಯಕ್ಷಗಾನ, ಕೋಳಿ ಅಂಕ, ಕಂಬಳವು ಇಲ್ಲಿನ ಜನರ ಬದುಕಿನೊಂದಿಗೆ ಸೇರಿಕೊಂಡಿದೆ. ಇನ್ನು ಆಹಾರ ಪದ್ಧತಿಗೆ ಬಂದರೆ ಕರಾವಳಿಯು ಮತ್ಸ್ಯೋದ್ಯಮಕ್ಕೆ ಹೆಸರುವಾಸಿ.

ಹಾಗಾಗಿ ಮೀನು ಇಲ್ಲಿನ ಆಹಾರದಲ್ಲಿ ಪ್ರಮುಖವಾದದು. ಇದರೊಂದಿಗೆ ವಿಭಿನ್ನವಾದ ಆಹಾರ ಪದ್ಧತಿಯನ್ನು ಇಲ್ಲಿನ ಜನರು ಹೊಂದಿದ್ದಾರೆ. ಕುಚ್ಚಲಕ್ಕಿ ಹೆಚ್ಚು ಬಳಕೆ ಮಾಡುವುದೂ ಕರಾವಳಿಗರೇ… ಕೃಷಿ ಪ್ರಧಾನವಾದ ಕರಾವಳಿಯಲ್ಲಿ ಭತ್ತ, ತೆಂಗು, ಅಡಿಕೆಗೆ ಹೆಚ್ಚು ಪ್ರಾಧಾನ್ಯತೆ. ಭತ್ತ ಬೇಸಾಯ ವೇಳೆ ಮಹಿಳೆಯರು ಹಾಡುವ ಪಾಡ್ದನ, ಕಥೆಗಳು ಇಲ್ಲಿನ ಸಂಸ್ಕೃತಿಯ ಒಂದು ಭಾಗವೇ.. ಆದರೆ ಈಗ ಇದು ಕಣ್ಮರೆಯಾಗುತ್ತಿರುವುದು ವಿಪರ್ಯಾಸ.

ಈಗಿನ ಕ್ಯಾಲೆಂಡರ್‌ ಪ್ರಕಾರ ವರ್ಷ ಆರಂಭ ಜನವರಿಯಾದರೆ ತುಳುವರಿಗೆ ಬೇರೆಯದ್ದೇ ಕ್ಯಾಲೆಂಡರ್‌. ಇಲ್ಲಿ ವಿಷು ಹಬ್ಬದಂದು ಹೊಸ ವರ್ಷ ಆರಂಭ. ಪಗ್ಗು, ಬೇಶ, ಕಾರ್ತೆಲ್‌ ಹೀಗೆ ತಿಂಗಳುಗಳು ಆರಂಭವಾಗುತ್ತದೆ. ಪ್ರತೀ ತಿಂಗಳಿಗೂ ಆಯಾ ಮಹತ್ವವಿರುತ್ತದೆ. ಆಟಿ ತಿಂಗಳು ಎಂದರೆ ಬೇಸಾಯದ ಕೆಲಸಗಳೆಲ್ಲ ಮುಗಿದು ರೈತರಿಗೆ ಬಿಡುವಿನ ತಿಂಗಳು. ಈ ವೇಳೆ ಇಲ್ಲಿ ಯಕ್ಷಗಾನಗಳ ಪ್ರದರ್ಶನಕ್ಕೆ ಹೆಚ್ಚು ಬೇಡಿಕೆ. ಹೆಚ್ಚು ಕಷ್ಟದ ಸಮಯವೆನ್ನುವ ಆಟಿ ತಿಂಗಳ ಆಹಾರ ಪದ್ಧತಿಯು ವಿಭಿನ್ನ. ಈ ತಿಂಗಳಿನಲ್ಲಿ ಸುತ್ತಮುತ್ತಲು ಸಿಗುವ ಸೊಪ್ಪು,

ಉತ್ಪನ್ನಗಳನ್ನು ಬಳಸಿ ಆಹಾರ ತಯಾರಿಸುತ್ತಾರೆ. ಇದು ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಈ ವೇಳೆ ಚೆನ್ನೆಮಣೆ ಆಡುವುದೂ ಇಲ್ಲಿ ವಿಶೇಷ. ವರ್ಷಪೂರ್ತಿ ಮನೆಯ ಅಟ್ಟದಲ್ಲಿರುವ ಚೆನ್ನಮಣೆಯನ್ನು ಆಟಿ ತಿಂಗಳ ಮೊದಲ ದಿನ ತೆಗೆದರೆ ತಿಂಗಳು ಪೂರ್ತಿ ಆಡಿ ಮತ್ತೆ ತಿಂಗಳ ಕೊನೆಯ ದಿನ ಅಟ್ಟಕ್ಕೆ ಹಾಕಿದರೆ ಮತ್ತೆ ತೆಗೆಯುವುದು ಮುಂದಿನ ವರ್ಷ. ಆಟಿ ತಿಂಗಳಿನಲ್ಲಿ ಆಟಿ ಕಷಾಯ ಕುಡಿಯುವುದು ಇಲ್ಲಿನ ಇನ್ನೊಂದು ಪದ್ಧತಿ. ಆಯಾ ತಿಂಗಳಿಗೆ ಅನುಗುಣವಾಗಿ ಇಲ್ಲಿನ ಆಹಾರ ಪದ್ಧತಿ, ಮನೋರಂಜನೆಗಳು ಬದಲಾಗುತ್ತವೆ. ಈಗ ಎಲ್ಲೆಡೆ ಆಟಿಡೊಂಜಿ ದಿನ ಎನ್ನುತ್ತಾ ಹಿರಿಯರು ಮಾಡುತ್ತಿದ್ದ ತಿನಿಸುಗಳು, ಆಟಗಳನ್ನು ಮೆಲುಕು ಹಾಕುತ್ತಿರುವುದು ಕಾಣಬಹುದು.

ಪ್ರತೀ ಒಂದು ಊರಿಗೂ ಅದರದ್ದೇ ಆದ ಆಚರಣೆಗಳಿದ್ದು, ಇದೇ ಕಾರಣಕ್ಕೆ ಭಾರತ ವಿಶ್ವದಲ್ಲೇ ಸಂಸ್ಕೃತಿಯ ನಿಟ್ಟಿನಲ್ಲಿ ಮಹತ್ವ ಪಡೆದಿದೆ. ಒಬ್ಬ ವ್ಯಕ್ತಿಯ ಬೆಳವಣಿಗೆ, ಸಮಾಜದ ಅಭಿವೃದ್ಧಿಗೆ ಆಯಾ ಊರಿನ ಗಟ್ಟಿಯಾದ ಸಂಸ್ಕೃತಿಯು ಕಾರಣ ಎಂದರೆ ತಪ್ಪಾಗಲಾರದು. ಜತೆಗೆ ಈಗ ವಿದೇಶಿಗರೂ ಭಾರತದ ಸಂಸ್ಕೃತಿಗೆ ಮಹತ್ವ ನೀಡುತ್ತಿರುವುದು, ಅನುಕರಿಸುತ್ತಿರುವುದನ್ನು ಸಂತಸದ ವಿಚಾರ. ಆದ್ದರಿಂದ ನಾವು ನಮ್ಮ ಆಚಾರ ವಿಚಾರ, ಆಹಾರ ಶೈಲಿ, ಭಾಷೆಯನ್ನು ಬಳಕೆ ಮಾಡುತ್ತಾ ನಮ್ಮ ಮುಂದಿನ ಜನಾಂಗಕ್ಕೂ ತಲುಪಿಸುವ ಕೆಲಸ ಮಾಡೋಣ….

*ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next