ಕಾಸರಗೋಡು: ಎಲ್ಲ ವೃಕ್ಷಗಳ ಮೂಲ ಬೇರುವಿಗೆ “ತಾಯಿ ಬೇರು’ ಎನ್ನುತ್ತಾರೆ. ತಾಯಿ ಬೇರು ಗಟ್ಟಿಯಾಗಿದ್ದರೆ ಮರವೂ ಗಟ್ಟಿಯಾಗಿರುತ್ತದೆ. ಹಾಗೇನೇ ಭಾಷೆ, ಸಂಸ್ಕೃತಿ ಎಳವೆಯಲ್ಲಿಯೇ ಗಟ್ಟಿಯಾಗಿದ್ದರೆ ಮಕ್ಕಳು ಕೂಡ ಸಮಾಜದಲ್ಲಿ ಗಟ್ಟಿಯಾಗಿ ನೆಲೆವೂರಲು ಸಾಧ್ಯ ಎಂದು ವೇದಮೂರ್ತಿ ಚೇಂಪಿ ರಾಮಚಂದ್ರ ಭಟ್ ಹೇಳಿದರು.
ಅವರು ಕಾಸರಗೋಡಿನ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ ಕೊಂಕಣಿ ಮಾತೃದೇವೋ ಭವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಾವು ಮಾತನಾಡುವ ಭಾಷೆಗೆ ಮಾತೃ ಭಾಷೆ ಎನ್ನುತ್ತೇವೆ. ತಾಯಿಯೇ ಸರ್ವಶ್ರೇಷ್ಠ. ಆಕೆಯ ಆಶೀರ್ವಾದವಿದ್ದರೆ ಉನ್ನತಿ ಪಡೆಯಲು ಸಾಧ್ಯ. ಸಂಸ್ಕೃತಿ ಉಳಿಸುವ ಬಹುದೊಡ್ಡ ಜವಾಬ್ದಾರಿ ಆಕೆಯ ಮೇಲಿದೆ ಎಂದರು.
ಉದ್ಯಮಿ ನಿರ್ಮಲಾ ಟ್ರಾವೆಲ್ಸ್‌ನ ಒಡತಿ ನಿರ್ಮಲಾ ಕಾಮತ್ ಮಾತನಾಡಿ ಅಡುಗೆ ಕೋಣೆಯಿಂದ ಹೊರ ಬಂದು ಸ್ವಾಭಿಮಾನದಿಂದ ತನ್ನ ಸಂಸ್ಥೆಯನ್ನು ಬೆಳೆಸಿದ ಬಗ್ಗೆ ವಿವರಿಸಿ ಪ್ರತಿಯೊಬ್ಬ ಮಹಿಳೆಯು ಸ್ವಾಭಿಮಾನದಿಂದ, ಉದ್ಯಮ ನಡೆಸಲು ಮುಂದೆ ಬರಬೇಕೆಂದರು. ಮಣಿಪಾಲದ ಸಮಾಜ ಸೇವಕಿ ಲಕ್ಷ್ಮೀ ಎಸ್.ರಾವ್, ರಾಜಾಪುರ ಸ್ವಾರಸ್ವತ ಸಮಾಜ ಮುಖ್ಯಸ್ಥೆ, ನಿವೃತ್ತ ಮುಖ್ಯೋಪಾಧ್ಯಾಯಿನಿ ಶಾರದಾ ಜೆ.ನಾಯಕ್, ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಶಕುಂತಳಾ ಆರ್.ಕಿಣಿ, ಖ್ಯಾತ ತಬಲಾ ವಾದಕಿ ಶ್ರೀಲತಾ ಪ್ರಭು, ಲೇಖಕಿ ಜ್ಯೋತಿಪ್ರಭಾ ಎಸ್.ರಾವ್, ನಟಿ ದೀಪಾಲಿ ಕಂಬದಕೋಣೆ, ನಗರದ ಮುನ್ಸಿಪಲ್ ಹಾಲ್‌ನ ಪುಷ್ಪಲತಾ ನಟರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ|ಅನಂತ ಕಾಮತ್ ಅವರು ಕೊಂಕಣಿ ಮಾತನಾಡುವ 42 ಪಂಗಡಗಳಿದ್ದು, ಅವುಗಳೆಲ್ಲವೂ ಒಂದೇ ವೇದಿಕೆಗೆ ಬಂದಾಗ ಭಾಷೆ ಮತ್ತಷ್ಟು ಗಟ್ಟಿಯಾಗುತ್ತದೆ. ಇದೇ ಪ್ರಥಮಬಾರಿಗೆ ಕುಂದಾಪುರದಿಂದ ಕಾಂಞಂಗಾಡ್‌ವರೆಗಿನ 11 ಊರುಗಳಿಂದ ಮಹಿಳೆಯರು ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿದನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ರಂಗಚಿನ್ನಾರಿ ಏರ್ಪಡಿಸುವ ಎಲ್ಲಾ ಕಾರ್ಯಕ್ರಮಗಳ ಜೊತೆ ತಾನೂ ಇರುವುದಾಗಿ ತಿಳಿಸಿದರು.
ಕೊನೆಯಲ್ಲಿ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಅಲೆವೂರಿನ ಕುಸುಮಾ ಕಾಮತ್ ಮತ್ತು ಪಂಗಡ, ದ್ವಿತೀಯ ಸ್ಥಾನಗಳಿಸಿದ ಮಂಜೇಶ್ವರದ ಪ್ರಭಾ ಎಂ.ನಾಯಕ್ ಮತ್ತು ಪಂಗಡ, ತೃತೀಯ ಸ್ಥಾನಗಳಿಸಿದ ಉಡುಪಿಯ ಮಂಜುಳಾ ವಿ.ನಾಯಕ್ ಮತ್ತು ಪಂಗಡದವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಲ್ಲದೆ ವೈಯಕ್ತಿಕವಾಗಿ ಪ್ರಶಸ್ತಿಗಳಿಸಿದವರನ್ನು ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಪ್ರಾಸ್ತಾವಿಕ ಮಾತನಾಡಿದ ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮುಂಬರುವ ದಿನಗಳಲ್ಲಿ ರಂಗಚಿನ್ನಾರಿ ಮತ್ತಷ್ಟು ಕಾರ್ಯಕ್ರಮಗಳನ್ನು ನೀಡುವುದಾಗಿ ತಿಳಿಸಿದರು. ಮಾಯಾ ಮುಕುಂದರಾಜ ನಾಯಕ್, ತಾರಾ ಜಿ.ಕಾಮತ್ ಪ್ರಾರ್ಥನೆ ಹಾಡಿದರು. ಡಾ|ಸುದೇಶ್ ರಾವ್, ಜ್ಯೋತಿಪ್ರಭಾ ರಾವ್, ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ, ಜಿ.ಎಸ್.ಬಿ. ಸೇವಾ ಸಂಘ, ಜಿ.ಎಸ್.ಬಿ. ಮಹಿಳಾ ಸಂಘ, ವಜ್ರಗೋಲ್ಡ್ ಆ್ಯಂಡ್ ಡೈಮಂಡ್ಸ್, ಕೆನರಾ ಐಸ್‌ಕ್ರೀಮ್ ಪಾರ್ಲರ್(ಕೆ.ಎಸ್.ಗ್ರೂಪ್), ರವೀಂದ್ರ ಶೆಣೈ ಮುಂತಾದವರು ಮಾತೃದೇವೋ ಭವ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಕೊನೆಯಲ್ಲಿ ರಂಗಚಿನ್ನಾರಿಯ ಸತ್ಯನಾರಾಯಣ ಕೆ. ವಂದಿಸಿದರು.