ಹೊಳಲ್ಕೆರೆ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡಬೇಕು. ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು. ತಾಲೂಕಿನ ರಂಗಾಪುರ ಗುರುಕುಲ ಆಶ್ರಮದ ಋಷಿ ಗುರುಕುಲ ವಿದ್ಯಾಕೇಂದ್ರದಲ್ಲಿ ನಡೆದ ‘ಋಷಿ ಗುರುಕುಲಂ ಸಂಭ್ರಮ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೌಲ್ಯಯುತ ಚಿಂತನೆಗಳಿಂದ ನಮ್ಮ ಮನಸ್ಸು ಮತ್ತು ಸಮಾಜ ತಪ್ಪುದಾರಿಗೆ ಹೋಗದಂತೆ ತಡೆಗಟ್ಟಬಹುದು. ನಿತ್ಯ ಸಾಧನೆಯ ಹಾಗೂ ಪರೋಪಕಾರದ ಚಿಂತನೆಯೂ ಬೇಕು. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಕನಕದಾಸರು, ಸಂತರು, ಶರಣರು, ವಚನಕಾರರು ನಡೆದಿದ್ದಾರೆ. ಇಂದಿನ ಸಮಾಜದಲ್ಲಿರುವ ಪ್ರತಿಯೊಬ್ಬರ ಚಿಂತನೆಗಳು ಇನ್ನೊಬ್ಬರ ಹಿತಕ್ಕಾಗಿ ಎನ್ನುವಂತಾಗಬೇಕು. ಸ್ವಾರ್ಥ ರಹಿತ ಬದುಕು ಕಟ್ಟಿಕೊಳ್ಳುವ ಆಶಯವಿರಬೇಕು. ಆಗ ಮಾತ್ರ ಶೋಷಣೆ ಮುಕ್ತ ಸಮಾಜ ಕಟ್ಟಲು ಸಾಧ್ಯ ಎಂದರು.
ಋಷಿ ಗುರುಕುಲಂ ವಿದ್ಯಾಕೇಂದ್ರ ಸಮಿತಿ ಕಾರ್ಯದರ್ಶಿ ಕುನುಗಲಿ ಷಣ್ಮುಖಪ್ಪ ಮಾತನಾಡಿ, ಶಿಕ್ಷಕರ ಜೊತೆ ಪೋಷಕರು ಕೂಡ ಕೈಜೋಡಿಸಿದಾಗ ಮಾತ್ರ ಮಕ್ಕಳಲ್ಲಿ ತ್ಯಾಗ ಹಾಗೂ ಸೇವಾ ಮನೋಭಾವ ಬೆಳೆಯಲು ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಡಾ| ತಿಪ್ಪಾರೆಡ್ಡಿ ಗುರೂಜಿ, ಸಮಿತಿ ಸದಸ್ಯರಾದ ಎಂ.ಇ. ಹೊನ್ನೇಶ್, ವಿಶ್ವನಾಥ್, ಡಾ| ಎನ್.ಬಿ. ಸಜ್ಜನ್, ನಿವೃತ್ತ ಉಪತಹಶೀಲ್ದಾರ್ ಗಂಗಮ್ಮ, ಗ್ರಾಪಂ ಮಾಜಿ ಅಧ್ಯಕ್ಷೆ ಕೆಂಚವೀರಪ್ಪರ ಗಂಗಮ್ಮ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೂಪಾ ಮತ್ತಿತರರು ಪಾಲ್ಗೊಂಡಿದ್ದರು.
ದುಮ್ಮಿ- ಹೊಳಲ್ಕೆರೆಯಲ್ಲಿ ಗುರುಕುಲ ಶಾಲೆಗೆ ಚಿಂತನೆ ಗುರುಕುಲ ಆಶ್ರಮದಲ್ಲಿ ಮೌಲ್ಯಯುತ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಪರಿಣಾಮಕಾರಿ ಶಿಕ್ಷಣ ನೀಡುತ್ತಿರುವ ಋಷಿ ಗುರುಕುಲಂ ವ್ಯಾಪ್ತಿಯನ್ನು ವಿಸ್ತರಿಸಲು ಉದ್ದೇಶಿಸಲಾಗಿದ್ದು, ದುಮ್ಮಿ ಹಾಗೂ ಹೊಳಲ್ಕೆರೆ ಬಳಿ ಗುರುಕುಲ ಶಿಕ್ಷಣ ಶಾಲೆಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಋಷಿ ಗುರುಕುಲಂ ವಿದ್ಯಾಕೇಂದ್ರ ಸಮಿತಿ ಅಧ್ಯಕ್ಷ ಡಾ| ಹನುಮಲಿ ಷಣ್ಮುಖಪ್ಪ ತಿಳಿಸಿದರು.