ಬೆಂಗಳೂರು: ಸರ್ಕಾರದಿಂದ ಸಂಸ್ಕೃತಿ ಉದ್ಧಾರವಾಗುತ್ತದೆ ಅನ್ನೋದು ಕನಸಿನ ಮಾತು. ಈ ಹಿನ್ನೆಲೆಯಲ್ಲಿ ಸಂಘ-ಸಂಸ್ಥೆಗಳು ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ನಿವೃತ್ತ ನ್ಯಾ.ಎನ್.ಕುಮಾರ್ ಹೇಳಿದ್ದಾರೆ.
ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಭಾನುವಾರ ಎನ್.ಆರ್.ಕಾಲೋನಿಯ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ವಿಪ್ರ ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ನಿದ್ರಾವಸ್ಥೆಯಲ್ಲಿದ್ದು, ಖುರ್ಚಿ ಅಲುಗಾಡುತ್ತಿದೆ ಎಂದು ನುಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು ಉತ್ತಮ ಕೆಲಸ. ಹಾಗೇ ನಮ್ಮ ಮುಂದೆ ಹಲವು ಮಂದಿ ಸಂಗೀತ ಮತ್ತು ನೃತ್ಯ ಸಾಧಕರು ಎಲೆ ಮರೆ ಕಾಯಂತೆ ಇದ್ದಾರೆ. ಅವರು ಕೂಡ ಸಂಸ್ಕೃತಿ ಸಾಧಕರಾಗಿದ್ದು, ಅಂತಹವರನ್ನು ಸನ್ಮಾನಿಸುವ ಕೆಲಸವಾಗಬೇಕು ಎಂದರು.
ಬ್ರಾಹ್ಮಣ ಸಮುದಾಯದ ಹನ್ನೇರಡು ಮಂದಿ ಶಾಸನ ಸಭೆಗೆ ಆಯ್ಕೆಯಾಗಿದ್ದಾರೆ. ಇದು ಖುಷಿ ಪಡುವ ವಿಚಾರ. ಶಾಸನ ಸಭೆಗೆ ಜಾತಿ ಬೆಂಬಲ ಇಲ್ಲದೆ ಗೆಲ್ಲುವುದು ಸುಲಭದ ಮಾತಲ್ಲ. ಆದರೂ, ಜಾತಿ ಬಲವಿಲ್ಲದೆ ಬಹುಜನ ವ್ಯಕ್ತಿಯಾಗಿ ಈ ಶಾಸಕರು ಹೊರ ಹೊಮ್ಮಿದ್ದಾರೆ. ಇವರು ನಿಜವಾದ ಬ್ರಾಹ್ಮಣರು (ಬ್ರಾಹ್ಮಣರು ಅಂದರೆ ಬಹುಜನರು ಎಂದರ್ಥ) ಎಂದು ಶ್ಲಾ ಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ.ವಿ.ಗೌರಿಶಂಕರ್, ಇಂದು ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಹೆಚ್ಚು ಅಂಕಪಡೆಯುವುದಷ್ಟೇ ವಿದ್ಯಾರ್ಥಿಯ ಸಾಧನೆಯಲ್ಲ. ಈ ಬಗ್ಗೆ ಪೋಷಕರು ಎಚ್ಚರಗೊಳ್ಳಬೇಕು. ವಿದ್ಯೆ ಜತೆಗೆ ಮಾನವೀಯ ಗುಣಗಳನ್ನು ಕೂಡ ವಿದ್ಯಾರ್ಥಿ ದಿಸೆಯಲ್ಲೇ ಕಲಿಸಬೇಕು ಎಂದು ಹೇಳಿದರು.
ಶಾಸಕರಾದ ರವಿಸುಬ್ರಹ್ಮಣ್ಯ, ಬಿ.ಸಿ.ನಾಗೇಶ್, ಉದಯ ಗರುಡಾಚಾರ್, ವಕೀಲ ದಿವಾಕರ್, ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟೇಶ್, ಉಪಾಧ್ಯಕ್ಷ ಎಂ.ವಿ.ಶಂಕರ ನಾರಾಯಣ, ಎಚ್.ಸಿ.ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.