ಮುಂಬಯಿ, ಅ. 13: ತುಳು ಸಂಘ ಬೊರಿವಲಿ ಇದರ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಸೆ. 29ರಂದು ಬೆಳಗ್ಗೆ 10ರಿಂದ ಬೊರಿವಲಿ ಪಶ್ಚಿಮದ ಧರ್ಮನಗರ, ಆದಿನಾಥ್ ಮಾರ್ಗ, ಶ್ರೀ ಸಾಯಿನಾಥ್ ವೆಲ್ಫೆರ್ ಸೊಸೈಟಿಯ ರೂಮ್ ನಂಬರ್-5ರಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಅನಂತರ ಆದಿನಾಥ ಸಭಾಗೃಹದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂಸದ ಗೋಪಾಲ್ ಸಿ. ಶೆಟ್ಟಿ ಅವರು ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಥೆಗಳು ಭಾವನಾತ್ಮಕ ಸಂಬಂಧದಿಂದ ಬೆಳೆದಾಗ ನಮ್ಮ ಭಾರತೀಯ ಸಂಸ್ಕೃತಿ ಮೇಳೈಸಲು ಸಾಧ್ಯ. ಶ್ರಮ, ಸಾಧನೆಯ ಮೂಲಕ ಸಂಸ್ಥೆಗಳು ಭದ್ರ ತಳಪಾಯನ್ನು ಹೊಂದಿ, ಸುಭದ್ರವಾಗಿರಲು ಸಾಧ್ಯ. ಕಳೆದ 9 ವರ್ಷಗಳ ಸಾಧನೆ, ಪರಿಶ್ರಮದಿಂದ ತುಳು ಸಂಘ ಬೊರಿವಲಿ ಸಮೃದ್ಧವಾಗಿ ಬೆಳೆದು ಪ್ರಸ್ತುತ ಸ್ವಂತ ಕಚೇರಿಯನ್ನು ಹೊಂದುವ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಸಹಕಾರಿಯಾಗಲಿದೆ.
ಈ ಸಂಘದಿಂದ ಮಹಿಳೆಯರಿಗೆ, ಮಕ್ಕಳಿಗೆ ಕೌಶಲ್ಯಾಭಿವೃದ್ದಿಯಂತಹ ಕಾರ್ಯಕ್ರಮಗಳು ನಡೆದು ಅವರ ಬದುಕಿಗೆ ಆಶಾದಾಯಕವಾಗಿ ಪರಿಣಮಿಸುವಂತಾಗಬೇಕು. ಕಳೆದ 9 ವರ್ಷಗಳ ಹಿಂದೆ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಜನ್ಮತಾಳಿದ ಈ ಸಂಸ್ಥೆಗೆ ಮುಂದೆ ಉತ್ತಮ ಭವಿಷ್ಯವಿದ್ದು, ಪರಿಸರದಲ್ಲಿ ಸಾಮಾಜಿಕ ಸೇವಾ ಸಂಸ್ಥೆಯಾಗಿ ಪ್ರಸಿದ್ಧಿಯನ್ನು ಹೊಂದಲಿ ಎಂದು ನುಡಿದು ಶುಭಹಾರೈಸಿದರು.
ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ತುಳು ಸಂಘ ಬೊರಿವಲಿ ಇದರ ಅಧ್ಯಕ್ಷ ವಾಸು ಕೆ. ಪುತ್ರನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಮಾತನಾಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಉಪಾಧ್ಯಕ್ಷ ಕರುಣಾಕರ ಎಂ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಸಿ. ಶೆಟ್ಟಿ, ಗೌರವ ಕೋಶಾಧಿಕಾರಿ ಹರೀಶ್ ಮೈಂದನ್, ಗೌರವ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ ಅವರು ಅತಿಥಿಗಳನ್ನು ಶಾಲು ಹದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀಮಹಿಷ ಮರ್ದಿನಿ ಮಂದಿರ ಬೊರಿವಲಿ ಇದರ ಆಡಳಿತ ಟ್ರಸ್ಟಿ ಪ್ರದೀಪ್ ಸಿ. ಶೆಟ್ಟಿ, ಸಂಘದ ಗೌರವಾಧ್ಯಕ್ಷ ಡಾ| ವಿರಾರ್ ಶಂಕರ್ ಶೆಟ್ಟಿ ಮತ್ತು ರತಿ ಶಂಕರ್ ಶೆಟ್ಟಿ ವಿರಾರ್ ದಂಪತಿ, ಶ್ರೀನಿವಾಸ ಸಾಫಲ್ಯ, ಟಿ. ಎಸ್. ಪುತ್ರನ್, ಸಿಎ ಸತ್ಯೇಶ್ ಶೆಟ್ಟಿ, ಕು| ಕೌಶಿಕಾ ಕೆ. ಪೂಜಾರಿ ಇವರನ್ನು ಗೌರವಿಸಲಾಯಿತು. ಗೌರವ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕೋಶಾಧಿಕಾರಿ ಹರೀಶ್ ಮೈಂದನ್ ವಂದಿಸಿದರು.
ವೇದಿಕೆಯಲ್ಲಿ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಎ. ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ ಕರ್ಕೇರ, ಜತೆ ಕೋಶಾಧಿಕಾರಿ ಟಿ. ವಿ. ಪೂಜಾರಿ, ಕಾರ್ಯದರ್ಶಿ ತಿಲೋತ್ತಮ ವೈದ್ಯ ಮೊದಲಾದವರು ಉಪಸ್ಥಿತರಿದ್ದರು. ನೂತನ ಕಚೇರಿಯಲ್ಲಿ ನಡೆದ ಗಣಹೋಮ ಪೂಜೆಯಲ್ಲಿ ಸಂಘದ ಅಧ್ಯಕ್ಷ ವಾಸು ಪುತ್ರನ್ ಮತ್ತು ಶಕುಂತಳಾ ವಿ. ಪುತ್ರನ್ ದಂಪತಿ ಸಹಕರಿಸಿದರು. ಕೌಶಿಕಾ ಕರುಣಾಕರ ಪೂಜಾರಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ಯಾಕ್ಸೋಫೋನ್ ವಾದನ ನಡೆಯಿತು. ವಿಶ್ವ ಡಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ನೃತ್ಯ ವೈವಿದ್ಯ ಜರಗಿತು. ಸಮಿತಿಯ ಸದಸ್ಯ ಯಶವಂತ್ ಪೂಜಾರಿ ಪ್ರಾರ್ಥನೆಗೈದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಹಕರಿಸಿದರು. ಸದಸ್ಯ ಬಾಂಧವರು, ಪರಿಸರದ ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ರಮೇಶ್ ಉದ್ಯಾವರ