Advertisement

ಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

12:57 PM Aug 16, 2017 | Team Udayavani |

ಧಾರವಾಡ: ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ಓಡಾಡುವ ಮಕ್ಕಳು…, ಖಾದಿ ಬಟ್ಟೆಯಲ್ಲಿ ಇನ್ನು ಕೆಲವರು, ಶಿಸ್ತಿನಿಂದ ಸ್ವಾತಂತ್ರ್ಯದ ಘೋಷಣೆ ಮೊಳಗಿಸುತ್ತ ತುಂಟಾಟ ಮಾಡುತ್ತ ಓಡಾಡಿಕೊಂಡಿದ್ದ ಇನ್ನೊಂದು ಗೆಳೆಯರ ಬಳಗ, ಒಟ್ಟಿನಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ನಗರದ ವಿದ್ಯಾರ್ಥಿ ಸಮೂಹವೇ ಮುಳುಗೆದ್ದಿತು. 

Advertisement

ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ದಿನದಂದು ಖಾಲಿ ಖಾಲಿಯಾಗಿರುತ್ತಿದ್ದ ನಗರದ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣ 71ನೇ ಸ್ವಾತಂತ್ರೊತ್ಸವದಂದು ಸಂಪೂರ್ಣ ಭರ್ತಿಯಾಗಿತ್ತು. 

ಬೆಳಿಗ್ಗೆ 8:30ಕ್ಕೆ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ-ತಮ್ಮ ಶಾಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ, ಜಿಲ್ಲಾ ಕ್ರೀಡಾಂಗಣದತ್ತ ಧಾವಿಸುತ್ತಿದ್ದರು. ರಸ್ತೆಗಳೆಲ್ಲ ವಿದ್ಯಾರ್ಥಿಗಳಿಂದ ತುಂಬಿದ್ದವು. ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರಧ್ವಜಾರೋಹಣ ಮಾಡುತ್ತಿದ್ದಂತೆ ಪೊಲೀಸ್‌ ವಾದ್ಯ ವೃಂದ ರಾಷ್ಟ್ರಗೀತೆ ಮೊಳಗಿಸಿತು.

ಅದಾದ ನಂತರ ನಾಡಗೀತೆ ನಡೆಯುತ್ತಿರುವಾಗ ಇಡೀ ಕ್ರೀಡಾಂಗಣದಲ್ಲಿ ಸೇರಿದ್ದ ಸಾವಿರಾರು ಜನ ಎದ್ದು ನಿಂತು ಕನ್ನಡಾಂಬೆಗೆ ಗೌರವ ಸಲ್ಲಿಸಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತೆರೆದ ಜೀಪಿನಲ್ಲಿ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದ್ದ ವಿವಿಧ ದಳಗಳ ವೀಕ್ಷಣೆ ಮಾಡಿ, ಸ್ವಾತಂತ್ರೊತ್ಸವದ ಸಂದೇಶ ನೀಡಿದರು.

ನಂತರ ನಡೆದದ್ದು ಆಕರ್ಷಕ ಪಥ ಸಂಚಲನ. ಒಟ್ಟು 20 ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. ಪಥ ಸಂಚಲನ ವೀಕ್ಷಿಸಿ, ಸಚಿವರು ಗೌರವ ವಂದನೆ ಸ್ವೀಕರಿಸಿದರು. ಇಡೀ ಪಥ ಸಂಚಲನದಲ್ಲಿ ಸಮರ್ಥನಂ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರು.

Advertisement

ಇದಾದ ನಂತರ ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ದೇಶಭಕ್ತಿ ಗೀತೆ, ನೃತ್ಯ ರೂಪಕ, ಸಮೂಹ ನೃತ್ಯಗಳು ಪ್ರದರ್ಶನಗೊಂಡವು. ಇದೇ ಸಂದರ್ಭದಲ್ಲಿ ಐದು ಜನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ದೇಶ ರಕ್ಷಣೆ ಸಂದರ್ಭದಲ್ಲಿ ಬಲಿದಾನ ಮಾಡಿದ ಮೂವರು ವೀರ ಯೋಧರ ಕುಟುಂಬದವರು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಕ್ರೀಡಾಪಟುವೊಬ್ಬರು ಮತ್ತು ಆಪರೇಶನ್‌ ವಿಜಯದಲ್ಲಿ ಪಾಲ್ಗೊಂಡಿದ್ದ ಯೋಧರೊಬ್ಬರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಜತೆಗೆ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಮತ್ತು ತಾಲೂಕುಗಳ ಸರ್ಕಾರಿ ಶಾಲೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ವಿತರಿಸಲಾಯಿತು. ವಿವಿಧ ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿ, ಬಣ್ಣದ ಲೋಕ ಅನಾವರಣಗೊಳಿಸಿದರು. ಇದಕ್ಕೆಲ್ಲ ಮುಕುಟವಿಟ್ಟಂತೆ ಹಾಲಾಡಿ ರಾಮಣ್ಣ ಶೆಟ್ಟಿ ಜಿಮ್ನಾಸ್ಟಿಕ್‌ ಸಂಸ್ಥೆಯ ಕ್ರೀಡಾಪಟುಗಳಿಂದ ಮೈನವಿರೇಳಿಸುವ ಜಿಮ್ನಾಸ್ಟಿಕ್‌ ಪ್ರದರ್ಶನ ಕೂಡ ನಡೆಯಿತು.  

Advertisement

Udayavani is now on Telegram. Click here to join our channel and stay updated with the latest news.

Next