Advertisement
ಸಾಂಸ್ಕೃತಿಕ ನೀತಿ ಸಂಬಂಧ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ಶಿಫಾರಸ್ಸು ಅನ್ವಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗಳನ್ನು ವಿಭಾಗ ಮಟ್ಟದಲ್ಲಿ ಸ್ಥಾಪಿಸುವುದು. ಕರಾವಳಿ ಭಾಗದಲ್ಲಿ ರಂಗಾಯಣ ಕೇಂದ್ರ ತೆರೆಯಬೇಕು.ಪ್ರಾದೇಶಿಕ ಹಾಗೂ ಜಿಲ್ಲಾ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಿಬ್ಬಂದಿ ಹಾಗೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಪ್ರಾಚ್ಯವಸ್ತು ಇಲಾಖೆಗೆ ಸಿಬ್ಬಂದಿ ನೇಮಕ ಮಾಡಬೇಕು.
Related Articles
Advertisement
ಪ್ರಮುಖ ಶಿಫಾರಸ್ಸುಗಳು:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಾಡಿನ ಸಂಸ್ಕೃತಿ ಸಂರಕ್ಷಣೆ ಹಾಗೂ ಸಾಹಿತ್ತಿಕ ಬಲವರ್ಧನೆ ಹಾಗೂ ಇಲಾಖೆಯು ದಕ್ಷವಾಗಿ ಕಾರ್ಯ ನಿರ್ವಹಿಸಲು ನಾಲ್ಕು ಕಂದಾಯ ವಿಭಾಗಗಳಲ್ಲಿ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಿ, ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಂಟಿ ನಿರ್ದೇಶಕರನ್ನು ಪ್ರಾದೇಶಿಕ ನಿರ್ದೇಶಕರಾಗಿ ನೇಮಿಸುವುದು. ಕಚೇರಿ ನಿರ್ವಹಣೆಗೆ ಸಹಾಯಕ ನಿರ್ದೇಶಕರು-1, ಅಧೀಕ್ಷರು-1, ಪ್ರಥಮ ದರ್ಜೆ ಸಹಾಯಕರು-1 ಕಂಪ್ಯೂಟರ್ ಅಪರೇಟರ್/ಬೆರಳಚ್ಚುಗಾರರು-2, ದ್ವಿತೀಯ ದರ್ಜೆಯ ಸಹಾಯಕರು-1, ದಲಾಯತರು-1 ವಾಹನ ಚಾಲಕರು-1 ಹುದ್ದೆ ಸೇರಿದಂತೆ ಎಂಟು ಜನ ಅಧಿಕಾರಿಗಳನ್ನೊಳಗೊಂಡ ಪ್ರಾದೇಶಿಕ ಕಚೇರಿಗಳನ್ನು ತೆರೆಯಲು ಶಿಫಾರಸ್ಸು ಮಾಡಲಾಗಿದೆ. ಸಾಹಿತಿ ಮತ್ತು ಕಲಾವಿದರು ಜೀವನದ ಸಂಧ್ಯಾ ಕಾಲದಲ್ಲಿ ಗೌರವ ಪೂರ್ಣ ಬದುಕು ನಡೆಸಲು ಮಾಸಾಶನವನ್ನು 2 ಸಾವಿರ ರೂಪಾಯಿಗೆ ಹೆಚ್ಚಳ ಮಾಡುವುದು. ಕರ್ನಾಟಕ ಉರ್ದು ಅಕಾಡೆಮಿಯನ್ನು ಅಲ್ಪ ಸಂಖ್ಯಾತ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಗೆ ವಾಪಸ್ ಪಡೆಯುವುದು. ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರಾಗುವವರು ಉದ್ಯೋಗಿಯಾಗಿರಬಾರದು ಎಂಬ ನಿಯಮ ಕೈ ಬಿಡುವುದು. ಸಂಗೀತ ನೃತ್ಯ ಅಕಾಡೆಮಿಯಿಂದ ನೃತ್ಯ ಅಕಾಡೆಮಿಯನ್ನು ಪ್ರತ್ಯೇಕಿಸುವುದು. ಗಡಿನಾಡಿಗೆ ಹೊಂದಿಕೊಂಡಿರುವ ಹೊರನಾಡಿನಲ್ಲಿ ಕನ್ನಡ ವ್ಯಾಸಂಗ ಮಾಡುವವರಿಗೆ ಪ್ರೋತ್ಸಾಹ ಹಾಗೂ ಕನ್ನಡ ಬಾಹುಳ್ಯವಿರುವ ಗಡಿನಾಡು ಪ್ರದೇಶಗಳಲ್ಲಿ ಕನ್ನಡ ಭವನಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು. ಸರ್ಕಾರಿ ಹಾಗೂ ಅರೆ ಸರಕಾರಿ ರಂಗ ಮಂದಿರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ತೆಗೆದುಕೊಂಡು ರಿಯಾಯ್ತಿ ದರದಲ್ಲಿ ಬಾಡಿಗೆ ನೀಡುವುದು. ಯುವಜನತೆಯನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕಾಲೇಜು ರಂಗೋತ್ಸವಗಳನ್ನು ಏರ್ಪಡಿಸುವುದು. ಅಲ್ಲದೇ ಸರ್ಕಾರ ಆಚರಿಸುವ ಉತ್ಸವಗಳಲ್ಲಿ ಸ್ಥಳೀಯ ಕಲಾವಿದರಿಗೆ ಶೇಕಡಾ 75 ರಷ್ಟು ಅವಕಾಶ ಕಲ್ಪಿಸುವುದು. ಪ್ರವಾಸಿ ಕೇಂದ್ರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಹಾಗೂ ರಾಜ್ಯದಲ್ಲಿ ಬುಡಕಟ್ಟು ವಿಶ್ವ ವಿದ್ಯಾಲಯ ಸ್ಥಾಪಿಸುವಂತೆ ಸಮಿತಿ ಶಿಫಾರಸ್ಸು ಮಾಡಿದೆ. ಸಾಂಸ್ಕೃತಿಕ ನೀತಿಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಕಾಲ ಮಿತಿ ಹಾಗೂ ಏಕರೂಪದಲ್ಲಿ ಪ್ರಶಸ್ತಿ ವಿತರಿಸಲಾಗುತ್ತಿದೆ. ಕೆಲವು ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಹಣಕಾಸು ಇಲಾಖೆ ಮತ್ತು ಡಿಪಿಎಆರ್ ಇಲಾಖೆಗಳ ಒಪ್ಪಿಗೆ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ಅನುಮತಿ ಪಡೆಯುವ ಪ್ರಯತ್ನ ನಡೆಸಲಾಗುತ್ತಿದೆ.
– ವಿಶುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ. ಸಾಂಸ್ಕೃತಿಕ ನೀತಿ ಜಾರಿಗೆ ಹಣಕಾಸು ಇಲಾಖೆಯ ಒಪ್ಪಿಗೆ ಪಡೆದುಕೊಂಡು ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಆದರೆ, ಅದನ್ನು ಜಾರಿಗೊಳಿಸುವ ಇಚ್ಚಾಶಕ್ತಿ ಸರ್ಕಾರಕ್ಕೆ ಇರಬೇಕು. ಇಚ್ಚಾಶಕ್ತಿ ಕೊರತೆಯಿಂದ ಕುಂಟು ನೆಪ ಹೇಳಲಾಗುತ್ತಿದೆ. ಈ ಬಗ್ಗೆ ನಾನು ಶೀಘ್ರವೇ ಮುಖ್ಯಮಂತ್ರಿಗೆ ಪತ್ರ ಬರೆದು. ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ.
– ಬರಗೂರು ರಾಮಚಂದ್ರಪ್ಪ, ಸಾಂಸ್ಕೃತಿಕ ನೀತಿ ರೂಪಿಸುವ ಸಮಿತಿ ಅಧ್ಯಕ್ಷ. – ಶಂಕರ ಪಾಗೋಜಿ