ಬೈಂದೂರು: ಹೊಯ್ಸಳ ಕಲ್ಚರಲ್ ಟ್ರಸ್ಟ್ ನಾಡಾ ಇದರ ವತಿಯಿಂದ ಡಿ. 22- 24ರ ವರೆಗೆ ಬೃಹತ್ ಕ್ರೀಡಾ ಜಾತ್ರೆ, ಗಾನ ನೃತ್ಯ ಜಾತ್ರೆ,ಯಕ್ಷಜಾತ್ರೆ ಸಾಂಸ್ಕೃತಿಕ ಉತ್ಸವದ ನಾಡ ಹಬ್ಬ -2018 ಕಾರ್ಯಕ್ರಮ ಇಲ್ಲಿನ ಗ್ರೆಗರಿ ಪ್ರೌಢಶಾಲೆ ಮೈದಾನ ಪಡುಕೋಣೆಯಲ್ಲಿ ನಡೆಯಲಿದೆ. ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಇಂತಹ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಾಡಿನ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.
ಡಿ. 22ರಂದು ಬೆಳಗ್ಗೆ 9ಕ್ಕೆ ಮ್ಯಾರಥಾನ್ ಓಟ, ಸಂಜೆ 4ಕ್ಕೆ ನಾಡದೇವತೆಯ ಅದ್ದೂರಿ ಪುರಮೆರವಣಿಗೆ ನಡೆಯಲಿದೆ. ಸಂಜೆ 7ಕ್ಕೆ ಮೆರಿಟ್ ಹಾಸ್ಪಿಟಲಿಟಿ ಸರ್ವಿಸಸ್ ಪ್ರೈ.ಲಿ ಆಡಳಿತ ನಿರ್ದೇಶಕ ಡಾ| ಅಶೋಕ ಎಸ್. ಶೆಟ್ಟಿ ಬ್ರಹತ್ ನಾಡಹಬ್ಬವನ್ನು ಉದ್ಘಾಟಿಸಲಿದ್ದಾರೆ. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುಂದಾಪುರ ಉಪವಿಭಾಗಾಧಿಕಾರಿ ಟಿ. ಭೂಬಾಲನ್, ಬೈಂದೂರು ತಹಶೀಲ್ದಾರ ಕಿರಣ ಗೌರಯ್ಯ ಆಗಮಿಸಲಿದ್ದಾರೆ. ರಾತ್ರಿ 9ಕ್ಕೆ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಡಿ.23ರಂದು ಬೆಳಗ್ಗೆ ಕೆಸರು ಗದ್ದೆ ಓಟ, ಕೆಸರುಗದ್ದೆ ವಾಲಿ ಬಾಲ್ ಪಂದ್ಯಾಟ, ಕೆಸರುಗದ್ದೆ ಹಗ್ಗ ಜಗ್ಗಾಟ, ಮಧ್ಯಾಹ್ನ 2ಕ್ಕೆ ಆದರ್ಶ ದಂಪತಿ ಸ್ಪರ್ಧೆ, ಸಂಜೆ 4ರಿಂದ ಚಿಣ್ಣರ ಚಿಲಿಪಿಲಿ, ಸಂಜೆ 5ಕ್ಕೆ ಜಾನಪದ ಸ್ಪರ್ಧೆಗಳು ನಡೆಯಲಿವೆ. ಸಂಜೆ 6ರಿಂದ ತೆಂಕು ತಿಟ್ಟಿನ ಸುಪ್ರಸಿದ್ದ ಭಾಗವತರಾದ ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ ಮತ್ತು ಬಳಗದವರಿಂದ ಪೌರಾಣಿಕ ಯಕ್ಷ ವೈಭವ ನಡೆಯಲಿದೆ.
ರಾತ್ರಿ 8ಕ್ಕೆ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ. ಸಂತೋಷ ಹೆಗ್ಡೆ, ವಿಧಾನಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಕೆ. ಅಣ್ಣಾಮಲೈ, ವಿಧಾನಪರಿಷತ್ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಘನ ಉಪಸ್ಥಿತಿ ವಹಿಸಲಿದ್ದಾರೆ. ರಾತ್ರಿ 9ರಿಂದ ಬಾಲ ನಟಿಯರಾದ ಅದ್ವಿಕಾ ಶೆಟ್ಟಿ, ಶ್ಲಾಘಾ ಸಾಲಿಗ್ರಾಮ, ಶ್ರಾವ್ಯಾ ಮರವಂತೆ, ಆರಾಧ್ಯ ಆರ್. ಶೆಟ್ಟಿ, ಆನ್ವಿ ಶೆಟ್ಟಿ, ಧನ್ವಿ ಮರವಂತೆ ಇವರಿಂದ ಗಾನ ನೃತ್ಯ ವೈಭವ ಹಾಗೂ ಖಾಸಗಿ ವಾಹಿನಿಯ ಹಾಡು ಬಾ ಕನ್ನಡ ಕೋಗಿಲೆ ಖ್ಯಾತಿಯ ಅಖೀಲಾ ಮತ್ತು ರಾಜ್‌ಗೋಪಾಲ್ ತಂಡದವರಿಂದ ಮ್ಯೂಸಿಕಲ್ ನೈಟ್, ಮಂಗಳೂರು ಡಾನ್ಸ್ ಗ್ರೂಪ್ ತಂಡದಿಂದ ಡಾನ್ಸ್ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.
ಡಿ. 24ರಂದು ಸಂಜೆ 7ಕ್ಕೆ ಮಜಾಭಾರತ ಖ್ಯಾತಿಯ ಮಸ್ಕಿರಿ ಕುಡ್ಲ ಇವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ಬಡಗು ತಿಟ್ಟಿನ ಹೆಸರಾಂತ ಭಾಗವತರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಸಾರಥ್ಯದಲ್ಲಿ ಪೆರ್ಡೂರು ಮೇಳದ ಕಲಾವಿದರಿಂದ ಯಕ್ಷಜಾತ್ರೆ (ಬಯಲಾಟ) ಪ್ರದರ್ಶನಗೊಳ್ಳಲಿದೆ. ಸಭಾ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಲಾಗುವುದು ಎಂದು ಹೊಯ್ಸಳ ಸಂಸ್ಥೆಯ ಅಧ್ಯಕ್ಷ ಅರವಿಂದ ಪೂಜಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.