Advertisement

83ನೇ ಸಾಹಿತ್ಯ ಸಮ್ಮೇಳನಕ್ಕೆ ಸಾಂಸ್ಕೃತಿಕ ನಗರಿ ಸಜ್ಜು

11:29 AM Nov 10, 2017 | Team Udayavani |

ಮೈಸೂರು: ನ.24ರಿಂದ 3 ದಿನಗಳ ಕಾಲ ಮೈಸೂರಿನಲ್ಲಿ ನಡೆಯಲಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆಗಳು ನಡೆದಿವೆ. ನ.11ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಮುಖ್ಯವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆ, ಪ್ರತಿನಿಧಿಗಳ ನೋಂದಣಿ ಕಚೇರಿ ಉದ್ಘಾಟನೆ ಹಾಗೂ ಕನ್ನಡ ತೇರಿಗೆ ಚಾಲನೆ ದೊರೆಯಲಿದೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ, ಜಿಲ್ಲಾಧಿಕಾರಿ ಡಿ.ರಂದೀಪ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಉಪ ಸಮಿತಿಗಳ ಅಂದಾಜು ಪಟ್ಟಿ ಸಲ್ಲಿಕೆ, ಲೆಕ್ಕಪರಿಶೋಧನಾ ಸಮಿತಿ ವರದಿ, ಸಮಿತಿಗಳಿಗೆ ಅನುದಾನ ನಿಗದಿ, ಸಮಿತಿಗಳವರ ಅಭಿಪ್ರಾಯ ಸಂಗ್ರಹಿಸಲಾಯಿತು.

ಸಾಂಸ್ಕೃತಿಕ ಸಮಿತಿ 40 ಲಕ್ಷ ರೂ. ಅನುದಾನ ಕೇಳಿದ್ದು, 15 ಲಕ್ಷ ಪ್ರಾಯೋಜಕತ್ವ ಕೇಳಬಹುದು. ಮಹಾರಾಜ ಕಾಲೇಜು ಮೈದಾನದ ಮುಖ್ಯ ವೇದಿಕೆ, ಸಮಾನಾಂತರ ವೇದಿಕೆಗಳಾದ ಮಹಾರಾಜ ಕಾಲೇಜು ಶತಮಾನೋತ್ಸವ ಭವನ ಮತ್ತು ಕಲಾಮಂದಿರ ಹಾಗೂ ನಗರದ ಪ್ರಮುಖ ಸ್ಥಳಗಳಾದ ಚಿಕ್ಕ ಗಡಿಯಾರ ವೃತ್ತ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣ,

ಪುರಭವನ ಮತ್ತು ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ನ.24,25, 26ರ ಸಂಜೆ 6 ರಿಂದ 10ಗಂಟೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಈ ಸಂಬಂಧ ಮೈಸೂರಿನವರೇ ಆದ ಚಲನಚಿತ್ರ ಹಿನ್ನೆಲೆಗಾಯಕ ವಿಜಯಪ್ರಕಾಶ್‌ರನ್ನು ಸಂಪರ್ಕಿಸಿದಾಗ 13 ಲಕ್ಷ ರೂ. ಕೇಳಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ ತಿಳಿಸಿದರು.

ಶಾಸಕ ಜಿ.ಟಿ.ದೇವೇಗೌಡ, ಸ್ಥಳೀಯ ಕಲಾವಿದರನ್ನು ಕರೆದು ಅವಕಾಶಕೊಡುವ ಮೂಲಕ ಸರಳ ಮತ್ತು ಸುಂದರವಾಗಿ ಲೋಪವಾಗದಂತೆ ಕಾರ್ಯಕ್ರಮ ಆಯೋಜಿಸಿ ಎಂದು ಸಲಹೆ ನೀಡಿದರು. ಶಾಸಕ ವಾಸು, ರಘು ದೀಕ್ಷಿತ್‌, ವಸುಂಧರಾ ದೊರೆಸ್ವಾಮಿ ಸೇರಿದಂತೆ ಅಂತಾರಾಷ್ಟ್ರೀಯ ಅನೇಕ ಕಲಾವಿದರು ಮೈಸೂರಿನಲ್ಲಿದ್ದು, ಅವರಿಗೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾತನಾಡಿಸಿ ಕಾರ್ಯಕ್ರಮ ಕೊಡುವಂತೆ ಆಹ್ವಾನಿಸಬೇಕೆಂದರು. 

Advertisement

ಅಲಂಕಾರ ಸಮಿತಿಗೆ ನ.23ರಿಂದ 4ದಿನ ಮೈಸೂರು ನಗರವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲು 14 ಲಕ್ಷ ರೂ. ಅನುದಾನಕ್ಕೆ ಒಪ್ಪಿಗೆ ನೀಡಲಾಯಿತು. ವೇದಿಕೆ ನಿರ್ವಹಣೆ ಸಮಿತಿಗೆ 15 ಲಕ್ಷ ರೂ. ಅನುದಾನ ನೀಡಲು ಒಪ್ಪಿಗೆ ದೊರೆಯಿತು. ಸಮ್ಮೇಳನ ಉದ್ಘಾಟನೆ, ಸಮಾರೋಪ ಸೇರಿದಂತೆ ವಿವಿಧ ಗಣ್ಯರು, ಸಾಹಿತಿಗಳಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಏಲಕ್ಕಿ ಹಾರ ಹಾಖೀ, ಪುಸ್ತಕಗಳು ಹಾಗೂ ಸ್ಮರಣಿಕೆ ನೀಡಲು ತೀರ್ಮಾನಿಸಲಾಯಿತು.

ನೋಂದಣಿ ಸಮಿತಿ ಸುಮಾರು 10 ಸಾವಿರ ಪ್ರತಿನಿಧಿಗಳ ನೋಂದಣಿ ನಿರೀಕ್ಷೆ ಹೊಂದಿದ್ದು, ಪ್ರತಿನಿಧಿಗಳಿಗೆ ಪ್ಯಾಡ್‌, ಪೆನ್‌, ಬ್ರೋಷರ್‌, ಬ್ಯಾಡ್ಜ್  ಒಳಗೊಂಡ ಕಿಟ್‌ ನೀಡಲು 35 ಲಕ್ಷ ರೂ. ಅನುದಾನ ಕೇಳಿದರು. ಸ್ವತ್ಛತಾ ಕಾರ್ಯಕ್ಕಾಗಿ ಪಾಲಿಕೆ ವತಿಯಿಂದ 25 ಲಕ್ಷ ರೂ. ಅನುದಾನ ಕೇಳಲಾಯಿತು. ಆರೋಗ್ಯ ಸಮಿತಿಗೆ 3 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿದ್ದು,

ಸಮ್ಮೇಳನದ ಸ್ಥಳದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆಯುವುದು, ಆ್ಯಂಬುಲೆನ್ಸ್‌ ನಿಯೋಜನೆ, ಔಷಧಗಳ ಸಂಗ್ರಹ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆ: 83ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಪೊ›.ಚಂದ್ರಶೇಖರ ಪಾಟೀಲರನ್ನು ಅಲಂಕೃತ ಸಾರೋಟಿನಲ್ಲಿ ಮೆರವಣಿಗೆ ಮಾಡುವ ಜತೆಗೆ ಭುವನೇಶ್ವರಿ ಭಾವಚಿತ್ರವನ್ನು ಆನೆ ಮೇಲೆ ಮೆರವಣಿಗೆ ಮಾಡಲು ತೀರ್ಮಾನಿಸಲಾಯಿತು.

ಇದಕ್ಕಾಗಿ ಮೆರವಣಿಗೆ ಸಮಿತಿ 40 ಲಕ್ಷ ರೂ. ಅನುದಾನ ಕೇಳಿತು. ಕಲಶ ಹೊತ್ತು ಸಾಗುವ ಸುಮಾರು 200 ಮಹಿಳೆಯರಿಗೆ ಸಮಿತಿ ವತಿಯಿಂದಲೇ ಕೆಂಪು-ಹಳದಿ ಬಣ್ಣದ ಸೀರೆ ನೀಡಲು, 100ಕ್ಕೂ ಹೆಚ್ಚು ಆಟೋ ರಿಕ್ಷಾಗಳು, 20 ಅಲಂಕೃತ ಎತ್ತಿನಗಾಡಿ ಕರೆ ತರಲು ತೀರ್ಮಾನಿಸಲಾಯಿತು. ಜಿಪಂ ಅಧ್ಯಕ್ಷೆ ನಯಿಮಾಸುಲ್ತಾನ, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್‌, ಪಾಲಿಕೆ ಆಯುಕ್ತ ಜಗದೀಶ್‌, ಮೈಸೂರು ಉಪ ವಿಭಾಗಾಧಿಕಾರಿ ಶಿವೇಗೌಡ, ಮುಡಾ ಆಯುಕ್ತ ಕಾಂತರಾಜು, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಇದ್ದರು.

ಮೈಸೂರು ಶೈಲಿಯ ಊಟ ಕಷ್ಟ
ಸಮ್ಮೇಳನದಲ್ಲಿ ಹತ್ತಾರು ಸಾವಿರ ಜನರಿಗೆ 3 ದಿನಗಳ ಕಾಲ ಇಡ್ಲಿ-ವಡೆ, ರಾಗಿ ಮುದ್ದೆ-ಉಪ್ಸಾರು ಒದಗಿಸುವುದು ಕಷ್ಟದ ಕೆಲಸ. ಅದರಲ್ಲೂ ಪ್ರತಿನಿಧಿಗಳಿಗೆ ಬಫೆ ಕೊಡುವಾಗ ಸಮಸ್ಯೆ ಉಂಟಾಗುತ್ತದೆ. 3 ದಿನಗಳಲ್ಲಿ ಒಂದೊಂದು ಸಮಯದಲ್ಲಿ ಖಡಕ್‌ ರೊಟ್ಟಿ- ಎಣ್‌ಗಾಯಿ, ನಂಜನಗೂಡು ರಸಬಾಳೆ, ಕಜಾಯ ಕೊಡಬಹುದು.
-ಡಿ.ಧ್ರುವಕುಮಾರ್‌, ಆಹಾರ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next