ರಾಣಿಬೆನ್ನೂರ: ಹಿಂದಿನ ಕಾಲಕ್ಕೆ ತುಲನೆ ಮಾಡಿದರೆ ಪ್ರಸ್ತುತ ವಿದ್ಯಾರ್ಥಿಗಳಿಗೆ ಸಂಪನ್ಮೂಲಗಳ ಕೊರತೆ ಇಲ್ಲ. ಆದರೆ, ಅದನ್ನು ಸದ್ಬಳಕೆ ಮಾಡಿಕೊಂಡು ದೇಶದ ಮಾನವಸಂಪನ್ಮೂಲವಾಗಿ ಹೊರ ಹೊಮ್ಮಬೇಕಿದೆ ಎಂದು ನಗರಸಭೆ ಪೌರಾಯುಕ್ತ ಡಾ| ಎನ್. ಮಹಾಂತೇಶ ಹೇಳಿದರು.
ಶನಿವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್ ಹಾಗೂ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಸ್ತು, ಏಕಾಗ್ರತೆ ಮೈಗೂಡಿಸಿಕೊಂಡು ಛಲದಿಂದ ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳು ಎಂತಹ ದೊಡ್ಡ ಸ್ಥಾನಕ್ಕೂ ಹೋಗಬಹುದು. ಹೆತ್ತವರ ಕನಸು ನನಸು ಮಾಡಿ, ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.
ಧಾರವಾಡದ ಡಾ| ಗೋವಿಂದರಾಜ ತಲಕೋಡ ಮಾತನಾಡಿ, ಟಿಕ್‌ಟಾಕ್‌ಗಳಂತಹ ಮೊಬೈಲ್ ಆ್ಯಪ್‌ಗ್ಳಿಗೆ ಮೊರೆ ಹೋದ ಇಂದಿನ ಯುವಜನರು, ಹೆಚ್ಚು ಹೊತ್ತು ಅದರಲ್ಲೇ ಕಾಲ ಕಳೆಯುತ್ತಿದ್ದಾರೆ, ಇವುಗಳಿಂದ ಹೊರ ಬಂದು ಪುಸ್ತಕಗಳನ್ನು ಓದುವ ಗೀಳು ಹಚ್ಚಿಕೊಂಡಲ್ಲಿ ಜೀವನದಲ್ಲಿ ಸಾರ್ಥಕ ಬದುಕು ಕಟ್ಟಿಕೊಳ್ಳಬಹುದು ಎಂದರು.
ಕನ್ನಡ ಕೋಗಿಲೆ ಸೀಜನ್-2ರ ವಿಜೇತ ಖಾಸಿಂ ಅಲಿ ಮಾತನಾಡಿ, ಕಷ್ಟಗಳು-ನೋವುಗಳು ಪ್ರತಿಯೊಬ್ಬರಿಗೂ ಇವೆ. ನಮ್ಮ ಕಷ್ಟಗಳನ್ನೆಲ್ಲ ನಾವೇ ಮೆಟ್ಟಿ ನಿಂತಾಗ ಭವ್ಯ ಜೀವನದ ಆಶಾ ಕಿರಣಗಳು ನಮ್ಮನ್ನು ಮುತ್ತಿಕೊಳ್ಳಲಿವೆ. ಆವಾಗ ಹೊಸ ಜೀವನಕ್ಕೆ ದಾರಿ ದೊರೆಯುತ್ತದೆ ಎಂದರು.
ಕೊಡದ ಉಪನ್ಯಾಸಕ ಪ್ರಭುಲಿಂಗಪ್ಪ ಹಲಗೇರಿ ಅವರು, ತಮ್ಮ ಹಾಸ್ಯ ಚಟಾಕಿಗಳ ಮೂಲಕ ವಿದ್ಯಾರ್ಥಿಗಳಿಗೆ ನೀತಿಪಾಠ ಹೇಳಿಕೊಟ್ಟರು. ಪ್ರಾಂಶುಪಾಲ ಎಲ್.ವಿ. ಸಂಗಳದ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಜೆ.ಐ.ಉಕ್ಕುಂದ, ಪ್ರಾಧ್ಯಾಪಕ ಡಾ| ಬಿ.ರವಿ, ಡಾ| ಅರುಣಕುಮಾರ ಚಂದನ, ಗೀತಾ ಕೋಟೆಣ್ಣವರ, ಡಾ| ಕೆ.ರಾಘವೇಂದ್ರ, ಪ್ರೊ| ಆರ್.ಎಫ್.ಅಯ್ಯಗೌಡ್ರ, ಪ್ರೊ| ಶೋಭಾ ಸಾವಕಾರ ಸೇರಿದಂತೆ ಮತ್ತಿತರರು ಇದ್ದರು.
ಡಾ| ಅರುಣಕುಮಾರ ಚಂದನ್ ಸ್ವಾಗತಿಸಿದರು. ಡಾ| ವಿಜಯಲಕ್ಷಿ ್ಮೕ ಆರ್. ಪ್ರಾಸ್ತಾವಿಕ ಮಾತನಾಡಿದರು. ಶ್ರುತಿ ಬಿ.ಎನ್. ನಿರೂಪಿಸಿದರು. ಡಾ| ಸಿದ್ದಲಿಂಗಮ್ಮ ಬಿ.ಜಿ. ವಂದಿಸಿದರು.