Advertisement

2,757 ಹೆಕ್ಟೇರ್‌ನಲ್ಲಿ ಹಿಂಗಾರು ಭತ್ತದ ಕೃಷಿ ನಾಟಿ ಪೂರ್ಣ

09:08 PM Dec 28, 2020 | mahesh |

ಅಜೆಕಾರು: ಹಿಂಗಾರು ಭತ್ತದ ಬೆಳೆ ನಾಟಿ ಕಾರ್ಯವು ಜಿಲ್ಲೆಯಲ್ಲಿ ಬಹುತೇಕ ಪೂರ್ಣಗೊಂಡಿದೆ. ಆದರೆ ಕಾರ್ಕಳ ಸೇರಿದಂತೆ ಕೆಲವು ಭಾಗಗಳಲ್ಲಿ ನಾಟಿಯ ಕೆಲವೇ ದಿನದಲ್ಲಿ ನೇಜಿಗೆ ಜಿಗಿಹುಳು ಬಾಧೆ ಉಂಟಾಗಿದೆ.

Advertisement

2757 ಹೆಕ್ಟೇರ್‌ನಲ್ಲಿ ನಾಟಿ
ಜಿಲ್ಲೆಯಲ್ಲಿ ಸುಮಾರು 4000 ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಭತ್ತ ನಾಟಿ ಮಾಡುವ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಇದರಲ್ಲಿ 2757 ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಕಾರ್ಯವಾಗಿದೆ.

ಕಾರ್ಕಳ ತಾಲೂಕಿನಲ್ಲಿ 1800 ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಮಾಡುವ ಗುರಿ ಹೊಂದಲಾಗಿದ್ದು ಇದರಲ್ಲಿ 1747 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಪೂರ್ಣಗೊಂಡಿದೆ. ಕುಂದಾಪುರ ತಾಲೂಕಿನಲ್ಲಿ 1400 ಹೆಕ್ಟೇರ್‌ನಲ್ಲಿ ಗುರಿ ಹೊಂದಲಾಗಿದ್ದು ಇದರಲ್ಲಿ 410 ಹೆಕ್ಟೇರ್‌ ನಾಟಿಯಾಗಿದೆ. ಉಡುಪಿ ತಾಲೂಕಿನಲ್ಲಿ 800 ಹೆಕ್ಟೇರ್‌ ಪ್ರದೇಶದಲ್ಲಿ ಗುರಿ ಹೊಂದಲಾಗಿದ್ದು ಇದರಲ್ಲಿ 600 ಹೆಕ್ಟೇರ್‌ ಸಾಧನೆ ಮಾಡಲಾಗಿದೆ. ಕಳೆದ ವರ್ಷ 3632 ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಭತ್ತ ನಾಟಿ ಮಾಡಲಾಗಿತ್ತು.

ಹುಳು ಬಾಧೆ
ಕಾರ್ಕಳ ರೈತ ಸಂಪರ್ಕ ಕೇಂದ್ರ ಹಾಗೂ ಅಜೆಕಾರು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ನಾಟಿಯಾದ ಪ್ರದೇಶದಲ್ಲಿ ಜಿಗಿಹುಳು ಬಾಧೆ ಕಾಣಿಸಿಕೊಂಡಿದೆ. ಕಳೆದ ವರ್ಷ ಕಾರ್ಕಳ ತಾಲೂಕಿನ ಭತ್ತ ಬೆಳೆಯುವ ಪ್ರದೇಶಗಳ ಪೈಕಿ ಶೇ.30ರಷ್ಟು ಜಿಗಿಹುಳು ಬಾಧೆಗೆ ಒಳಪಟ್ಟಿತ್ತು.

ಒಮ್ಮೆ ಹುಳಬಾಧೆ ಪ್ರಾರಂಭಗೊಂಡರೆ ಸಂಪೂರ್ಣ ಗದ್ದೆಗೆ ಆವರಿಸಿ ಪೈರು ಒಣಗಿಹೋದಂತೆ ಕಾಣುತ್ತದೆ. ಹುಳಗಳು ಭತ್ತದ ಗದ್ದೆಯ ನೀರಿನ ಮೇಲ್ಭಾಗ ಹಾಗೂ ಭತ್ತದ ಪೈರಿನ ಬುಡಭಾಗದಲ್ಲಿ ಕುಳಿತು ಎಲೆಗಳಿಂದ ರಸ ಹೀರುವುದರಿಂದ ಭತ್ತದ ಪೈರಿನ ಬೆಳವಣಿಗೆ ಕುಂಠಿತಗೊಂಡು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಭತ್ತದ ಪೈರು ಹಿಳ್ಳೆ ಹೊಡೆಯದೆ ಹಾನಿಗೊಳ್ಳುತ್ತದೆ. ಹಿಂದೆಯೂ ಭತ್ತದ ಬೆಳೆಗೆ ಹುಳುಬಾಧೆ ಇತ್ತಾದರೂ ಕಳೆದ 2-3 ವರ್ಷಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದ್ದು ರೈತರು ಹುಳುಬಾಧೆಯಿಂದ ಕಂಗೆಡುವಂತಾಗಿದೆ.

Advertisement

ಮುನ್ನೆಚ್ಚರಿಕೆ
ಹುಳುಬಾಧೆ ತಡೆಯಲು ಗದ್ದೆಯ ನೀರನ್ನು ಬಸಿದು ಹೋಗುವಂತೆ ಮಾಡಿ ತೇವಾಂಶ ಕಡಿಮೆಯಾಗಿರುವಂತೆ ಮಾಡಬೇಕು. ಹುಳುಬಾಧೆಗೆ ಒಳಪಟ್ಟ ಭತ್ತದ ಪೈರಿಗೆ ಯೂರಿಯಾ ಬಳಸುವುದರಿಂದ ರೋಗಬಾಧೆ ಉಲ್ಬಣಗೊಳ್ಳುತ್ತದೆ. ಆದ್ದರಿಂದ ಅದನ್ನು ಬಳಸದಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಹುಳುಬಾಧೆ ಹತೋಟಿ
ಅಸಿಫೇಟ್‌ ಕೀಟನಾಶಕದಿಂದ ಹುಳ ಬಾಧೆ ಕಡಿಮೆ ಮಾಡಬಹುದು. ಇದರ ಬಳಕೆ ಹೀಗಿದೆ; 1.5 ಗ್ರಾಂ ಅಸಿಫೇಟ್‌ ಕೀಟನಾಶಕವನ್ನು 1 ಲೀಟರ್‌ ನೀರಿಗೆ ಮಿಶ್ರ ಮಾಡಿ ಬೆಳಗ್ಗೆ 9 ಗಂಟೆ ಮೊದಲು ಅಥವಾ ಸಂಜೆ 4 ಗಂಟೆ ಅನಂತರ ಸಿಂಪಡಿಸಬೇಕು. ಈ ರಾಸಾಯನಿಕವನ್ನು ರೈತರು ಸಹಾಯಧನದ ಮೂಲಕ ರೈತ ಸಂಪರ್ಕ ಕೇಂದ್ರದಲ್ಲಿ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬಾರಿ ಹುಳು ಬಾಧೆ ಕಡಿಮೆ
ಹಿಂಗಾರು ಭತ್ತ ನಾಟಿ ಜಿಲ್ಲೆಯಲ್ಲಿ ಬಹುತೇಕ ಪೂರ್ಣಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಜಿಲ್ಲೆಯಲ್ಲಿ ಜಿಗಿ ಹುಳು ಬಾಧೆ ಕಡಿಮೆ. ಹುಳು ಬಾಧೆ ತಡೆಯುವ ನಿಟ್ಟಿನಲ್ಲಿ ಅಸಿಫೇಟ್‌ ಕೀಟನಾಶಕವನ್ನು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇಡಲಾಗಿದೆ.
– ಎಚ್‌.ಕೆಂಪೇ ಗೌಡ , ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ

ಹೆಚ್ಚಿನ ಹಾನಿಯಾಗಿಲ್ಲ
ಹುಳು ಬಾಧೆಯಿಂದ ಭತ್ತದ ಕೃಷಿ ಹಾನಿಗೊಳ್ಳುತ್ತದೆ. ಈ ಬಾರಿ ಕೃಷಿ ಇಲಾಖೆಯಲ್ಲಿ ಹುಳು ಬಾಧೆಯ ಕೀಟ ನಾಶಕ ನಾಟಿ ಸಂದರ್ಭದಲ್ಲಿಯೇ ದೊರೆತಿರುವುದರಿಂದ ಹೆಚ್ಚಿನ ಹಾನಿ ತಡೆಯಲು ಸಾಧ್ಯವಾಗಿದೆ. -ನರಸಿಂಹ ನಾಯಕ್‌ ಮರ್ಣೆ, ಭತ್ತ ಬೆಳೆಯುವ ರೈತ

ಜಗದೀಶ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next