Advertisement

ಮೊದಲು ದೇಶಾಭಿಮಾನ ಬೆಳೆಸಿಕೊಳ್ಳಿ: ಡಾ|ಹೆಗಡೆ

02:55 PM Jun 09, 2022 | Team Udayavani |

ಶಿರಸಿ: ಪ್ರತಿಯೊಬ್ಬರೂ ಭಾರತಕ್ಕೆ ಗೌರವ ತರುವ ಕೆಲಸ ಮಾಡಬೇಕು. ದೇಶ, ರಾಜ್ಯ, ಜಿಲ್ಲೆ, ತಾಲೂಕು ಊರು ಎಂಬ ಅಭಿಮಾನ ಬೆಳಸಿಕೊಳ್ಳಬೇಕಿದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ಜಿ.ಎಲ್‌. ಹೆಗಡೆ ಹೇಳಿದರು.

Advertisement

ನಗರದ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಸುಳ್ಯ ಪ್ರಜ್ಞಾ ಯಕ್ಷಗಾನ ಕಲಾ ಶಾಲೆ, ಮಾರಿಕಾಂಬಾ ಸರಕಾರಿ ಪ್ರೌಢಶಾಲೆ, ಗಣಿತ ಶಿಕ್ಷಕರ ಸಂಘ, ಆರ್ಯಭಟ ಗಣಿತ ಸಂಘ ಜಂಟಿಯಾಗಿ ಹಮ್ಮಿಕೊಂಡ ವಿನೂತನ ಯಕ್ಷಗಾನ ಸಂಖ್ಯಾ ತಾಳಮದ್ದಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿನಯವಂತರಾಗಿ, ಸಾದು ಭಾವದದಿಂದ ಜೀವನ ನಡೆಸಬೇಕು. ಯಾವ ಕ್ಷೇತ್ರಕ್ಕೆ ಆದರೂ ಪರಿಣಿತಿ ಬೇಕು. ಮಕ್ಕಳು ನಿರಂತರ ಅಭ್ಯಾಸ ಮಾಡಬೇಕು ಎಂದರು. ಮನುಷ್ಯನ ರೂಪಿಸಲು ಶಿಕ್ಷಣ ಇರುವುದು. ಜೀವನ ಶಿಕ್ಷಣ ಸಿಕ್ಕರೆ ಯಾವ ಕ್ಷೇತ್ರಕ್ಕೆ ಹೋದರೂ ಗೌರವ ಸಿಗುತ್ತದೆ. ಅದು ಸಂಪಾದಿಸುವ ಹಣಕ್ಕಿಂತ ದೊಡ್ಡದು ಎಂದರು.

ಪ್ರತಿ ಗುರುವಿನ ಋಣದಿಂದ ಮುಕ್ತರಾಗಲು ನಿರಂತರ ಅಧ್ಯಯನ ಮಾಡಬೇಕು ಎಂದೂ ಹೇಳಿದ ಅವರು, ಮಕ್ಕಳ ಕಲಿಕೆಗೆ ಸಂಬಂಧಿಸಿದ ಸಂಖ್ಯಾ ತಾಳಮದ್ದಲೆ ಒಳ್ಳೆಯ ಪ್ರಯೋಗ ಆಗಿದೆ ಎಂದರು. ಶಿರಸಿ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೇ ಒಂದು ಅಚ್ಚರಿ. ಅತ್ಯಂತ ಒಳ್ಳೆಯ ಮೇಷ್ಟ್ರು ಇದ್ದಾರೆ ಕೂಡ. ಇದು ಶಾಲೆಯ, ಮಕ್ಕಳ ಭಾಗ್ಯ. ಗುರುವಿನಿಂದ ಕೇಳಿ ತಿಳಿಯಬೇಕು ಎಂದರು.

ಡಿಡಿಪಿಐ ಬಸವರಾಜು ಮಾತನಾಡಿ, ಕಲಿಕೆಯ ಶಿಕ್ಷಣಕೆ ಇದು ಅನುಕೂಲ ಆಗಲಿದೆ. ತಾಳಮದ್ದಲೆ ಮೂಲಕ ಸಂಖ್ಯಾ ಶಾಸ್ತ್ರ ಬೋಧಿ ಸುವುದು ಹೊಸ ಮಾದರಿ ಎಂದರು.

Advertisement

ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ನಾಗರಾಜ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವಿಷಯ ಪರಿವೀಕ್ಷಕ ಎಂ.ಕೆ. ಮೊಗೇರ, ಗಣಿತ ಸಂಘದ ಅಧ್ಯಕ್ಷ ಈಶ್ವರ ಭಾಗವತ, ಕಾರ್ಯದರ್ಶಿ ಜಿ.ಯು. ಹೆಗಡೆ, ಶಿಕ್ಷಕರಾದ ಆರ್‌.ಕೆ. ಹೆಗಡೆ, ನಾರಾಯಣ ಭಾಗವತ, ಧರ್ಮಾನಂದ ಭಟ್ಟ ಇದ್ದರು.

ಏನಿದು ಸಂಖ್ಯಾ ಶಾಸ್ತ್ರ ತಾಳಮದ್ದಲೆ?: ಕಲಾ ಸಂತೋಜಿತ ಕಲಿಕೆಗೆ ಪೂರಕವಾಗಿ ಗಣಿತ ಕಲಿಕೆಯನ್ನು ಯಕ್ಷಗಾನ ಕಲೆಯ ಮೂಲಕವೂ ದೃಢೀಕರಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಡೆದ ಪ್ರಯತ್ನ ಗಣಿತ ಯಕ್ಷಗಾನ ತಾಳಮದ್ದಳೆ ವಿದ್ಯಾರ್ಥಿಗಳ, ಶಿಕ್ಷಕರ, ಇಲಾಖೆ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಒಂದು ವಿಷಯದ ಪ್ರಸ್ತುತಿ, ವಿಸ್ತರಣೆ, ವಿಮರ್ಶೆಗೆ ಯಕ್ಷಗಾನ ತಾಳಮದ್ದಳೆ ಪರಿಣಾಮಕಾರಿ ಮಾಧ್ಯಮ. ಅಂತಹ ರಂಗಪ್ರಕಾರವನ್ನು ಒಂಭತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಸುಲಭವಾಗಲು ಹಾಗೂ ಆನಂದದಾಯಕವಾಗಲು ಉದ್ದೇಶಿಸಿ ಬಳಸಿದ್ದು ವಿಶೇಷವಾಗಿದೆ. ಒಂಭತ್ತನೇ ತರಗತಿ ಸಂಖ್ಯಾ ಪದ್ಧತಿ ಎಂಬ ಅಧ್ಯಾಯದಲ್ಲಿ ಬರುವ ವಿವಿಧ ಕಲಿಕಾಂಶಗಳನ್ನು ಒಳಗೊಂಡಂತೆ ಸಂಖ್ಯಾ ಸಾಮರಸ್ಯ ಎಂಬ ಈ ಪ್ರಸಂಗ ರಚಿತವಾಗಿದೆ. ವಿವಿಧ ಸಂಖ್ಯೆಗಳು ಪಾತ್ರಗಳಾಗುವುದರ ಮೂಲಕ ಕಲಿಕಾಂಶಗಳ ಕಲಿಕೆಯ ಆಳ ಹಾಗೂ ಹರವನ್ನು ವಿಸ್ತರಿಸಲಾಗಿದೆ. ಇದಕ್ಕೆ ಸರಿಯಾದ ಪದ್ಯ ರಚನೆ ಹಾಗೂ ಗಣಿತ ಹಾಗೂ ಯಕ್ಷಗಾನದ ಚೌಕಟ್ಟಿಗೆ ಯಾವುದೇ ಭಂಗವಾಗದಂತೆ ತಾಳಮದ್ದಳೆ ಸಾಗುವುದು ವಿಶೇಷವಾಗಿದೆ.

ವಿದ್ಯಾರ್ಥಿ ಮತ್ತು ಶಿಕ್ಷಕರಿಂದ ಹಲವು ಬಾರಿ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆ ರೂಪದಲ್ಲಿ ಪ್ರದರ್ಶಿಸಲ್ಪಟ್ಟು ಶಿಕ್ಷಣ ತಜ್ಞರಿಂದ ಪ್ರಶಂಸೆಗೆ ಒಳಗಾಗಿರುವ ಈ ಪ್ರಯೋಗ ಸುಳ್ಯದ ಗಣಿತ ಶಿಕ್ಷಕ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರಕಾಶ ಮೂಡಿತ್ತಾಯ ಇವರು ನಡೆಸಿದ ಐಎಫ್‌ಎ ಬೆಂಗಳೂರು ಇವರ ಕಲಿ – ಕಲಿಸು ಯೋಜನೆ ಭಾಗವೂ ಹೌದು. ಇದೀಗ ವಿಶೇಷವಾಗಿ ವಿದ್ಯಾರ್ಥಿಗಳಿಂದಲೇ ಯಕ್ಷಗಾನ ಹಿಮ್ಮೇಳ ಹಾಗೂ ಪ್ರೌಢಶಾಲಾ ಗಣಿತ ಶಿಕ್ಷಕರಿಂದಲೇ ಅರ್ಥಗಾರಿಕೆ ಸಮನ್ವಯತೆಯೊಂದಿಗೆ ಗಣಿತ ಯಕ್ಷಗಾನ ತಾಳಮದ್ದಳೆ ಮೂಡಿಬಂದಿದೆ.

ಪ್ರಕಾಶ ಮೂಡಿತ್ತಾಯ ಸಂಘಟನೆಯ ಈ ತಾಳಮದ್ದಲೆಯಲ್ಲಿ ಭಾಗವತರಾಗಿ ರಚನಾ ಚಿದ್ಗಲ್‌, ಚಂಡೆ ಮದ್ದಲೆಯಲ್ಲಿ ಸುಬ್ರಹ್ಮಣ್ಯ ಲಕ್ಷೀಶ ಪುತ್ತೂರು, ಕುಮಾರ ಪುತ್ತೂರು, ಪ್ರಥಮ ಮೂಡಿತ್ತಾಯ ಮಣಿಪಾಲ ಸಹಕಾರ ನೀಡಿದರು.

ಅರ್ಥದಾರಿಗಳಾಗಿ ಧನ ಸಂಖ್ಯಾಧೀಶನಾಗಿ ಪರಮೇಶ್ವರ ಹೆಗ್ಡೆ, ಋಣ ಸಂಖ್ಯಾ ಪರಾಗಿ ಶರತ್‌ ಕುಮಾರ, ಶೂನ್ಯರಾಗಿ ಪ್ರಕಾಶ ಮೂಡಿತ್ತಾಯ ಪಿ, ವಾಸ್ತವಿಯಾಗಿ ವೀಣಾ ಶಾನ್‌ಭೋಗ್‌ ಬೆಳ್ತಂಗಡಿ ಪಾಲ್ಗೊಂಡರು.

ಯಕ್ಷಗಾನದಲ್ಲಿ ವಿನೂತನ ಪ್ರಯೋಗ ನಡೆಯುತ್ತಲೇ ಇದೆ. ಮಕ್ಕಳ ಗಣಿತದ ಕಲಿಕೆಗಾಗಿ ಗಣಿತದ ಭಾಷೆಯಲ್ಲಿ ಯಕ್ಷಗಾನದ ಅರ್ಥ ಹೇಳಿ ಸಂಖ್ಯಾ ಪಾರಮ್ಯ ಎಂಬ ಶೃತಪಡಿಸಿದ್ದು ವಿನೂತನ ಮಾದರಿ. ಗಣಿತವನ್ನೂ ಆಂಗ್ಲ ಭಾಷೆ ಬಾಳಸದೇ ಕನ್ನಡದಲ್ಲಿ ಪ್ರಸ್ತುತಗೊಳಿಸುವುದೂ ವಿಶೇಷ. –ಜಿ.ಎಲ್‌. ಹೆಗಡೆ, ಅಧ್ಯಕ್ಷರು, ಯಕ್ಷಗಾನ ಅಕಾಡೆಮಿ

Advertisement

Udayavani is now on Telegram. Click here to join our channel and stay updated with the latest news.

Next