ಬೆಂಗಳೂರು: ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಯುವರಾಜ ಅಲಿಯಾಸ್ ಸ್ವಾಮಿ, ಅವರ ನಿವಾಸಕ್ಕೆ ರಾಜ್ಯ ಬಿಜೆಪಿ ನಾಯಕರು ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ್ದ ಫೊಟೋಗಳು ಬಹಿರಂಗಗೊಂಡಿದ್ದು, ಈ ಮೂಲಕ ಕೆಲವು ಚಿತ್ರ ತಾರೆಯರನ್ನು ಸುತ್ತಿಕೊಂಡಿದ್ದ ಸ್ವಾಮಿಯ ಸ್ನೇಹದ ಉರುಳು ರಾಜಕಾರಣಿಗಳತ್ತ ತಿರುಗಿದೆ.
ಉಪ ಮುಖ್ಯ ಮಂತ್ರಿ ಲಕ್ಷ್ಮಣ ಸವದಿ, ವಸತಿ ಸಚಿವ ವಿ. ಸೋಮಣ್ಣ, ಮಾಜಿ ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಸ್ವಾಮಿ ತೆಗೆಸಿಕೊಂಡಿದ್ದ ಫೋಟೋಗಳು ಬಹಿರಂಗಗೊಂಡಿವೆ. ಇದರ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಇದರ ನಡುವೆಯೇ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಸಚಿವ ಸೋಮಣ್ಣ, ತಮಗೆ ಯುವರಾಜ ಪರಿಚಯವಿದ್ದ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಆತ ವಂಚಕನೆಂದು ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
“ದೆಹಲಿಯಿಂದ ವಿಮಾನದಲ್ಲಿ ಬರುತ್ತಿದ್ದಾಗ ಯುವರಾಜ ತಾನು ಬಿಜೆಪಿ ಕಾರ್ಯಕರ್ತ, ಪ್ರಚಾರಕ ಎಂದು ಪರಿಚಯಿಸಿಕೊಂಡಿದ್ದ. ವಿಮಾನಗಳಲ್ಲಿಯೇ ಓಡಾಡಿ ದೆಹಲಿಯಲ್ಲಿ ಹೆಚ್ಚಾಗಿ ಇರುತ್ತಿದ್ದ. ಹೀಗಾಗಿ, ಆತನನ್ನು “ಡೆಲ್ಲಿ ಸ್ವಾಮಿ’ ಎಂದೇ ಕರೆಯುತ್ತಿದ್ದೆ. ಇದಾದ ಬಳಿಕ ನಾಗರಭಾವಿಗೆ ಒಮ್ಮೆ ಹೋದಾಗ ಅಲ್ಲಿಗೆ ಆಗಮಿಸಿದ್ದ ಸ್ವಾಮಿ, ತಮ್ಮ ಮನೆಗೆ ಬರಲೇಬೇಕು ಎಂದು ಬಲವಂತ ಮಾಡಿದ್ದರಿಂದ ಹೋಗಿದ್ದ. ಅವನ ವೈಭವೋಪೇತ ಮನೆ ನೋಡಿ ನನಗೆ ಅನುಮಾನ ಬಂದಿತ್ತು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಇದನ್ನೂ ಓದಿ:ಬಿಎಸ್ ವೈ ಗೆ ದಿಲ್ಲಿ ವರಿಷ್ಠರ ಬುಲಾವ್: ಸಚಿವ ಸ್ಥಾನಾಕಾಂಕ್ಷಿಗಳಿಗೆ ಸಂಕ್ರಾಂತಿ ಸಿಹಿ?
ಅಷ್ಟೇ ಅಲ್ಲದೆ ಸಾರಿಗೆ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಎರಡು ಬಾರಿ ಭೇಟಿ ಮಾಡಿದ್ದ. ಈ ವೇಳೆ, ಇದೆಲ್ಲ ನನ್ನ ಕಡೆ ನಡೆಯುವುದಿಲ್ಲ. ನಾನು ಮಾಡುವುದಿಲ್ಲ. ಮುಖ್ಯಮಂತ್ರಿಗಳೇ ನೋಡಿಕೊಳ್ಳುತ್ತಾರೆ. ಇಂತಹ ವಿಚಾರಗಳನ್ನು ತೆಗೆದುಕೊಂಡು ಬರಬೇಡಿ ಎಂದು ತಾಕೀತು ಮಾಡಿದ್ದೆ ಎಂದು ತಿಳಿಸಿದ್ದಾರೆ.
ಸಚಿವ ಸೋಮಣ್ಣ ಮಾತನಾಡಿ, ಸ್ವಾಮಿ ಬಲವಂತದಿಂದ ಮನೆಗೆ ಕರೆದಿದ್ದಕ್ಕೆ ಹೋಗಿದ್ದೆ.ಆದರೆ, ನನ್ನ ಬಳಿ ಯಾವುದೇ ಸಹಾಯ ಆತ ಪಡೆದಿಲ್ಲ. ನಾನು ಪಡೆದಿಲ್ಲ’ ಎಂದು ಹೇಳಿದ್ದಾರೆ. ಒಮ್ಮೆ ದೂರವಾಣಿ ಕರೆ ಮಾಡಿ ಗೃಹ ಸಚಿವ ಅಮಿತ್ ಶಾ ಅವರು ಚೆನೈನಲ್ಲಿದ್ದಾರೆ. ನೀವು ಬಂದರೆ ತಕ್ಷಣ ಭೇಟಿ ಮಾಡಿಸುತ್ತೇನೆ ಎಂದಿದ್ದ. ಇದನ್ನು ನಾನು ನಿರಾಕರಿಸಿದ್ದೆ ಎಂದು ತಿಳಿಸಿದ್ದಾರೆ.
ನಿವೃತ ಎಸ್ಪಿ ಪಾಪಯ್ಯ ವಿಚಾರಣೆ
ಯುವರಾಜನ ವಂಚನೆಗೆ ಸಹಕರಿಸುತ್ತಿದ್ದರು ಎಂದು ಹೇಳಲಾದ ನಿವೃತ್ತ ಎಸ್ಪಿ ಪಾಪಯ್ಯ ಅವರನ್ನು ತನಿಖಾ ತಂಡ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ನಿವೃತ್ತ ನ್ಯಾಯಮೂರ್ತಿ ಅವರಿಗೆ ರಾಜ್ಯಪಾಲರನ್ನಾಗಿ ಮಾಡುವ ಆಮಿಷ ನೀಡಿ ಎಂಟು ಕೋಟಿ ರೂ.ಗಳಿಗೂ ಅಧಿಕ ಹಣ ಪಡೆದು ವಂಚಿಸಿರುವ ಪ್ರಕರಣದಲ್ಲಿ ಪಾಪಯ್ಯ ಅವರನ್ನು ವಿಚಾರಣೆ ನಡೆಸಲಾಗಿದೆ. ಯುವರಾಜ ಹಣ ಪಡೆದಿದ್ದ ಎಂದು ಅವರು ಹೇಳಿದ್ದಾರೆ. ವಿಲ್ಸ್‌ನ್ ಗಾರ್ಡ್ ಠಾಣೆಯಲಿಚ್ಲ ಯುವರಾಜನ ವಿರುದ್ಧ ನಿವೃತ್ತ ನ್ಯಾಯಮೂರ್ತಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳ ದೂರನ್ನು ಅವರ ಹೇಳಿಕೆ ಎಂದೇ ಪರಿಗಣಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಇದನ್ನೂ ಓದಿ: ಹಕ್ಕಿ ಜ್ವರ ಮನುಷ್ಯನಿಗೆ ಹೇಗೆ ಹರಡುತ್ತದೆ?
ಸಚಿವ ಸಾನ ಕೊಡಿಸುವುದಾಗಿಯೂ ಆಮಿಷ
ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ವಂಚಕ ಯುವರಾಜ ಅಲಿಯಾಸ್ ಸ್ವಾಮಿ, ಕೆಲವು ಶಾಸಕರನ್ನು ಭೇಟಿ ಮಾಡಿ ತಮ್ಮನ್ನು ಸಚಿವರನ್ನಾಗಿ ಮಾಡುತ್ತೇನೆ. ಪಕ್ಷದ ನಾಯಕರ ಜತೆ ಮಾತನಾಡುತ್ತೇನೆ ಎಂದೂ ನಂಬಿಸಿದ್ದ. ಈ ವಿಚಾರವಾಗಿ ಯುವರಾಜ ಯಾರನ್ನು ಭೇಟಿ ಮಾಡಿದ್ದ. ಜತೆಗೆ ಅವರಿಂದ ಹಣ ಪಡೆದಿದ್ದನೇ ಎಂಬುದರ ಬಗ್ಗೆ ತನಿಖಾ ತಂಡ ಮಾಹಿತಿ ಕಲೆಹಾಕುತ್ತಿದೆ ಎಂದು ಹೇಳಲಾಗುತ್ತದೆ.
ವೇಣುಗೋಪಾಲ್ ಜತೆ ಸಂಪರ್ಕ
ಬಿಜೆಪಿ ನಾಯಕರಷ್ಟೇ ಅಲ್ಲ, ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಕೆ.ಸಿ.ವೇಣುಗೋಪಾಲ್ ಅವರೊಂದಿಗೂ ಯುವರಾಜ್ ಸ್ವಾಮಿ ಫೋಟೋ ತೆಗೆಸಿಕೊಂಡಿದ್ದು ಇದೂ ವೈರಲ್ ಆಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ನಾಯಕರ ಜತೆಗಿನ ವಂಚಕ ಸ್ವಾಮಿ ನಂಟಿನ ಬಗ್ಗೆ ತನಿಖೆಯಾಗಬೇಕು ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.