ಕುಂದಾಪುರ: ಹಣಕ್ಕಾಗಿ ಸ್ವಂತ ಅಕ್ಕನನ್ನೇ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಅಣ್ಣಪ್ಪ ಭಂಡಾರಿ (45)ಯನ್ನು ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ ಖಂಡೇರಿ ಅವರು ಶನಿವಾರ ತಪ್ಪಿತಸ್ಥ ಎಂದು ಘೋಷಿಸಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಜೂ. 28ರಂದು ಪ್ರಕಟಿಸಲಿದ್ದಾರೆ.
ಕಳೆದ ವರ್ಷದ ಜು. 22ರಂದು ರಾತ್ರಿ ವಡೇರಹೊಬಳಿ ಗ್ರಾಮದ ಕುಂದೇಶ್ವರ ದೇವಸ್ಥಾನ ಹಿಂಭಾಗದ ನಿವಾಸಿ ವಿಜಯಾ ಭಂಡಾರಿ (50ಗೆ ಸೋದರ ಅಣ್ಣಪ್ಪ ಭಂಡಾರಿ ಗಂಭೀರ ಹಲ್ಲೆ ಮಾಡಿದ್ದ. ಜು.28ರಂದು ವಿಜಯಾ ಸಾವನ್ನಪ್ಪಿದ್ದರು.
ವಿಜಯಾ ಮನೆಯಲ್ಲಿದ್ದಾಗ ಅಣ್ಣಪ್ಪ ಭಂಡಾರಿ ಕುಡಿದು ಬಂದು ದುಡ್ಡಿನ ವಿಚಾರದಲ್ಲಿ ತಗಾದೆ ತೆಗೆದು ಕತ್ತಿಯಿಂದ ಹಲ್ಲೆ ನಡೆಸಿದ್ದ. ಪರಿಣಾಮ ಕುತ್ತಿಗೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯವಾಗಿದ್ದ ವಿಜಯಾ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದರು. ವಿಜಯಾ ನೀಡಿದ ಹೇಳಿಕೆ ಆಧಾರದಲ್ಲಿ ಕುಂದಾಪುರ ಪೊಲೀಸರು ಅಣ್ಣಪ್ಪನನ್ನು ಬಂಧಿಸಿದ್ದರು. ಅಣ್ಣಪ್ಪ ಭಂಡಾರಿ ಸಂಗಮ್ ಬಳಿ ûೌರದಂಗಡಿ ಹೊಂದಿದ್ದ.
ಸಿಐ ಮಂಜಪ್ಪ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಐಪಿಸಿ ಸೆಕ್ಷನ್ 448 (ಮನೆಗೆ ಅಕ್ರಮ ಪ್ರವೇಶ) ಅಡಿಯಲ್ಲಿ ಹಾಗೂ ಕೊಲೆ ಕೇಸು (ಐಪಿಸಿ ಸೆಕ್ಷನ್ 302) ಅಡಿಯಲ್ಲಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದಾರೆ. ಪ್ರಕರಣ ನಡೆದು ಕೇವಲ 11 ತಿಂಗಳೊಳಗೆ ಈ ತೀರ್ಪು ಬಂದಿದೆ.