Advertisement
ಮಳೆಗಾಲದಲ್ಲಿ ಎಲ್ಲ ತಾರಸಿ ಮನೆಗಳ ಚಾವಣಿಯೂ ನೀರು ಕುಡಿದುಕೊಂಡು ಖಾಲಿಯಾಗಿ ಉಳಿದರೆ, ಇವರ ಮನೆಯ ತಾರಸಿ ಹಾಗಲ್ಲವೇ ಅಲ್ಲ. ಮಳೆಗಾಲ ಆರಂಭದಿಂದ ಕಡೆಯತನಕ ಅದರಲ್ಲಿ ಹಸಿರೋ ಹಸಿರು! ಹಸಿರಿನ ಮಧ್ಯೆ ಇಣುಕುವ ಮುಳ್ಳು ಸೌತೆಕಾಯಿಗಳು, ಮೊಣಕೈಯಷ್ಟು ಉದ್ದವಿರುವ ಹಾಲು ಬೆಂಡೆಗಳು. ತಾರಸಿ ತುಂಬ ತರಕಾರಿ ಬೆಳೆದು ಸನಿಹದ ಮನೆಗಳವರಿಗೆ ತಾಜಾ ತರಕಾರಿಯ ರುಚಿ ತೋರಿಸುತ್ತಿರುವ ಈ ಯುವ ಕೃಷಿ ಸಾಧಕನ ವಿನ್ನಿ ರೊಡ್ರಿಗಸ್. ಬಂಟ್ವಾಳ ತಾಲೂಕಿನ ಸಜಿಪ ನಡು ಗ್ರಾಮದ ಗೋಳಿದಪಡಿನ ಪಾದೆಮಾರು ಎಂಬಲ್ಲಿದೆ ಅವರ ಮನೆ. ರಸ್ತೆಯಲ್ಲಿ ಸಾಗುವ ಬಸ್ಸುಗಳ ಪ್ರಯಾಣಿಕರಿಗೆ ಹಸಿರಿನಿಂದ ನಳನಳಿಸುವ ಅವರ ತಾರಸಿ ತೋಟ ಕಣ್ಣುಗಳಿಗೆ ಹಬ್ಬ ನೀಡುವಂತಿದೆ.
Related Articles
Advertisement
ವಿನ್ನಿಯವರು ಬೆಳೆಯುವ ಮುಳ್ಳುಸೌತೆ ಕಾಯಿ ವಿಶಿಷ್ಟವಾದದ್ದು. ಗಿಡದಲ್ಲಿ ಏಳು ಎಲೆಗಳಾಗುವಾಗ ಹೂ ಬಿಡಲಾರಂಭಿಸುವ ಕಾರಣ ಅದಕ್ಕೆ ಏಳೆಲೆ ಸೌತೆ ಎಂದೇ ಹೆಸರು. ಎರಡು ತಿಂಗಳೊಳಗೆ ಕಾಯಿಗಳು ಕೊಯ್ಯಲು ಸಿಗುತ್ತವೆ. ಎರಡು ದಿನಕ್ಕೊಮ್ಮೆ ಈ ಕಾಯಿಗಳನ್ನು ಕೊಯ್ಯಬೇಕು. ಗಾತ್ರದಲ್ಲಿ ಚಿಕ್ಕದಿರುವ ಕಾರಣ ಬಲಿತು ಹಣ್ಣಾಗುವುದು ಬೇಗ. ಕೋಸಂಬರಿ, ಚುರುಮುರಿ, ಸಲಾಡ್ ಮುಂತಾದವುಗಳಿಗೆ ಈ ಸೌತೆ ಅಗತ್ಯವಾಗಿ ಬೇಕು. ಪಲ್ಯ, ಸಾಂಬಾರು, ಮಜ್ಜಿಗೆಹುಳಿ ಮಾಡಲೂ ಸೂಕ್ತವಾಗಿದೆ. ಹೀಗಾಗಿ ಬೇಡಿಕೆ ಹೆಚ್ಚು. ಹಸಿಯಾಗಿಯೂ ತಿನ್ನಲು ಸ್ವಾದಿಷ್ಟವಾಗಿದೆ. ಪೇಟೆಗೆ ತೆಗೆದುಕೊಂಡು ಹೋದರೆ ಗ್ರಾಹಕರು ಮುಗಿಬಿದ್ದು ಕೊಳ್ಳುತ್ತಾರೆ. 6 ಕಾಯಿಗಳಿದ್ದರೆ ಒಂದು ಕಿ.ಲೋ ತೂಗುತ್ತದೆ. ಕಿ.ಲೋಗೆ ಮೂವತ್ತು ರೂ. ದರವೂ ಸಿಗುತ್ತದೆ.
ಇನ್ನು ಕರಾವಳಿಯ ಹಾಲುಬೆಂಡೆ, ಮಳೆಗಾಲದಲ್ಲಿ ಅಧಿಕವಾಗಿ ಬೆಳೆಯುವ ತರಕಾರಿಯಾದರೂ ಬಹು ಬೇಡಿಕೆಯನ್ನು ಪಡೆದಿದೆ. ಕಿ.ಲೋಗೆ ಎಂಭತ್ತು ರೂಪಾಯಿಗಿಂತ ಹೆಚ್ಚು ಬೆಲೆ ಸಿಗುತ್ತದೆ. ಕ್ರಿಶ್ಚಿಯನ್ ಹಬ್ಬದ ಸಾಲಿನಲ್ಲಿ ಅದರ ಬೇಡಿಕೆಗೆ ಮಿತಿಯೇ ಇಲ್ಲ. ಸಿಹಿಯುಕ್ತವಾದ ರುಚಿ, ಪರಿಮಳ, ಮೃದುವಾಗಿ ಬೇಯುವ ಗುಣಕ್ಕೆ ಹಾಲುಬೆಂಡೆಯ ಬಗೆಗೆ ಅಕರ್ಷಿತರಾಗದವರೇ ಇಲ್ಲ. ಸಾಂಬಾರು, ಮಜ್ಜಿಗೆಹುಳಿ, ಪಲ್ಯ, ಬಜ್ಜಿ ಅಥವಾ ಪೋಡಿ, ಬಾಳಕ ಏನೆಲ್ಲ ತಯಾರಿಸಲು ಅನುಕೂಲವಾಗಿದೆ.
ಗಿಡಗಳಿಗೆ 45 ದಿವಸವಾಗುವಾಗ ವಿನ್ನಿ ಕಾಯಿಗಳನ್ನು ಕೊಯ್ಯಲಾರಂಭಿಸುತ್ತಾರೆ. ಸೆಪ್ಟೆಂಬರ್ ಕೊನೆಯ ತನಕ ಎರಡು ದಿನಕ್ಕೊಮ್ಮೆ ಕಾಯಿಗಳು ಸಿಗುತ್ತವೆ. ಹನ್ನೆರಡು ಕಾಯಿಗಳಿದ್ದರೆ ಒಂದು ಕಿಲೋ ತೂಕವಾಗುತ್ತದೆ. ಬೆಂಡೆ ಗಿಡಗಳಿಗೆ ಮಾರಕವಾದ ಎಲೆ ಹಳದಿ ರೋಗ ಬಂದರೆ ಬೆಳೆಗಾರನ ಶ್ರಮ ವ್ಯರ್ಥವಾಗುತ್ತದೆ. ಅಂಥ ಬಾಧೆ ತಗುಲಿದ ಗಿಡಗಳನ್ನು ಬೇರುಸಹಿತ ಕಿತ್ತು, ಸುಟ್ಟು ಹಾಕಬೇಕು, ಉಳಿದ ಗಿಡಗಳಿಗೆ ರೋಗ ಹರಡದಂತೆ ಇಲಿ¾ಡಾ ಎಂಬ ಔಷಧಿಯನ್ನು ನೀರಿನಲ್ಲಿ ಬೆರೆಸಿ ಗಿಡದ ಎಲೆಗಳು ನೆನೆಯುವಷ್ಟು ಸಿಂಪಡಿಸಿದರೆ ರೋಗ ನಿಯಂತ್ರಣವಾಗುತ್ತದೆಂದು ವಿನ್ನಿ ಹೇಳುತ್ತಾರೆ. ಬೆಳೆದ ತರಕಾರಿಗಳು ಮನೆ ಖರ್ಚಿಗೆ, ಅಕ್ಕಪಕ್ಕದವರಿಗೆ ಕೊಟ್ಟು ಮಿಕ್ಕಿದ್ದು ಪೇಟೆಗೆ ಹೋಗಿ ಝಣಝಣ ಹಣ ಎಣಿಸುತ್ತದೆ. ಅತೀ ಕಡಿಮೆ ಶ್ರಮದ ಈ ತಾರಸಿ ಕೃಷಿ ಎಲ್ಲರಿಗೂ ಮಾಡಲು ಸುಲಭವಾಗಿದೆ.
– ಪ. ರಾಮಕೃಷ್ಣ ಶಾಸ್ತ್ರಿ