Advertisement

ಅನ್ನದಾತನ ಕೈಹಿಡಿದ ಮಿಡಿ ಸೌತೆಕಾಯಿ ಬೆಳೆ

01:53 PM May 30, 2022 | Team Udayavani |

ಕೊಟ್ಟೂರು: ಮಿಡಿ ಸೌತೆ ಅಥವಾ ಉಪ್ಪಿನಕಾಯಿ ಸೌತೆಕಾಯಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ. ಗರ್ಕಿನ್‌? (ಕುಕುಂಬರ್‌) ಎಂದೇ ಪ್ರಸಿದ್ಧಿಯಾಗಿ ರುವ ಮಿಡಿ ಸೌತೆಯನ್ನು ಒಪ್ಪಂದದಡಿ ಬೆಳೆಸಿ ವಿದೇ ಶಕ್ಕೆ ರಫ್ತು ಮಾಡಲಾಗುತ್ತದೆ. ಇದನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಹೆಚ್ಚಿನ ಲಾಭ ಗಳಿಸುವ ವಿಧಾನವನ್ನು ಕುಣಿಗಲ್‌ ವೇಗೋಲ ಇಂಡೋ ಸ್ಪ್ಯಾನಿಷ್‌ ಕಂಪನಿಯವರು ತಾಲೂಕು ಸುತ್ತಮುತ್ತ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಬೆಳೆಯಲು ದಾರಿ ಮಾಡಿಕೊಟ್ಟಿದ್ದಾರೆ. ರೈತರು ಹೆಚ್ಚಿನ ರೀತಿಯಲ್ಲಿ ಈ ಭಾಗದಲ್ಲಿ ಬೆಳೆದು ಮಂದಹಾಸ ಮೂಡಿಸಿದ್ದಾರೆ.

Advertisement

ಸಾವಯವ ಕೃಷಿ ಪದ್ಧತಿಯಲ್ಲಿ ಭಾರತೀಯ ವಾತಾವರಣಕ್ಕೆ ಅನುಗುಣವಾಗಿ ಯಶಸ್ವಿಯಾಗಿ ಬೆಳೆಸಲು ಕ್ಯಾಲಿಪ್ಸೊ ಇನ್ನು ಹೆಚ್ಚಿನ ತಳಿಗಳು ಸೂಕ್ತವಾಗಿವೆ. ಇವು ರೋಗ ನಿರೋಧಕ ಶಕ್ತಿ ಹೊಂದಿವೆ. ಮಿಡಿ ಸೌತೆಯಿಂದ ಮಾಡುವ ಉಪ್ಪಿನಕಾಯಿ ವಿಶೇಷ ರುಚಿ ಹೊಂದಿರುತ್ತದೆ. ಹೀಗಾಗಿಯೇ ಮಿಡಿ ಸೌತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಬಂದಿದ್ದರಿಂದ ರೈತರು ಬೆಳೆಯಲು ಮುಂದಾಗಿದ್ದಾರೆ.

ಮಿಡಿ ಉಪ್ಪಿನಕಾಯಿ ಸೌತೆಯನ್ನು ಹಲವು ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ಆದರೆ ಹೆಚ್ಚು ಸಾವಯವ ಪದಾರ್ಥಗಳಿಂದ ಕೂಡಿದ 5.8 ರಿಂದ 7ರ ರಸಸಾರ ಹೊಂದಿರುವ, ನೀರು ಚೆನ್ನಾಗಿ ಬಸಿದು ಹೋಗುವ ಗೋಡು ಅಥವಾ ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತವಾಗಿದೆ. ನೀರು ಸರಾಗವಾಗಿ ಬಸಿದು ಹೋಗದ ಎರೆ ಮಣ್ಣು ಇರುವೆಡೆ ಈ ಬೆಳೆ ತೆಗೆಯಲು ಸೂಕ್ತವಲ್ಲ. ನೀರು ಬಸಿದು ಹೋಗದೆ ಇರುವ ಸಂದರ್ಭದಲ್ಲಿ ಬೇರಿನ ಸುತ್ತಲೂ ಆಮ್ಲಜನಕದ ಕೊರತೆಯಿಂದಾಗಿ ಬೆಳೆಯು ಚೆನ್ನಾಗಿ ಬೆಳೆಯದೆ ಇರುವ ಸಾಧ್ಯತೆ ಇರುತ್ತದೆ. ಪ್ರತಿಯೊಂದು ಈ ಮಿಡಿ ಸೌತೆಕಾಯಿ ಬಳ್ಳಿಯು ಸೂಕ್ಷ್ಮ ವಾಗಿ ಕಾಪಾಡಿಕೊಂಡು ಬಂದರೆ ಮಾತ್ರ ಮಿಡಿ ಸೌತೆಕಾಯಿ ಬೆಳೆಯಲು ಸಾಧ್ಯ. ಈ ಬೆಳೆಗೆ ಅತಿಯಾಗಿ ನೀರು ಸರಬರಾಜು ತಿಪ್ಪೆಗೊಬ್ಬರ ನೀಡಬೇಕು. ಕೆಲ ಕಂಪನಿಗಳು ಹಳ್ಳಿಗಾಡು ಜನರ ಹೊಲಗಳಿಗೆ ಭೇಟಿ ನೀಡಿ ಬೆಳೆಗೆ ಎಷ್ಟು ಅನುಗುಣವಾಗಿ ಬೆಳೆ ಹಾನಿಯಾಗದಂತೆ ರೈತರಿಗೆ ತಿಳಿಸಿ ಇನ್ನು ಹೆಚ್ಚಿನ ರೀತಿಯಲ್ಲಿ ಫಲವತ್ತಾಗಿ ಬೆಳೆಯಲು ಅನುವು ಮಾಡಿಕೊಡುತ್ತಾರೆ.

ಇದು ಉಷ್ಣ ವಲಯದ ತರಕಾರಿ ಬೆಳೆ. 27ರಿಂದ 28 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ. ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ ಗಿಂತ ಹೆಚ್ಚಾದರೆ ಅಥವಾ 12 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿದ್ದಲ್ಲಿ ಕಾಯಿ ಕಚ್ಚುವುದು ಇಲ್ಲವಾ ದರೆ ಅತಿಯಾಗಿ ಉಷ್ಣಾಂಶ ತೇವಾಂಶದಿಂದ ಬೆಳೆಯು ತ್ತಿರುವ ಬೆಳೆ ಕುಂಠಿತವಾಗುತ್ತದೆ ಇಲ್ಲವಾದರೆ ಈ ಬಳ್ಳಿಯು ಒಣಗುತ್ತದೆ.

ಸಾವಯವ ಕೃಷಿಯಲ್ಲಿ ಬಿತ್ತನೆ ಮಾಡಲು ಮುಂಗಾರಿಗೆ ಮೊದಲಿನ ಕಾಲ ಸೂಕ್ತ. ಒಳ್ಳೆಯ ಬೆಳೆ ಮತ್ತು ಇಳುವರಿ ಪಡೆಯಲು ಒಂದು ವರ್ಷದಲ್ಲಿ ಎರಡು ಬೆಳೆಗಳು ಮಾತ್ರ. ಅದು ಮೇ ತಿಂಗಳು ಹಾಗೂ ಜೂನ್‌ ತಿಂಗಳು ಮತ್ತು ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳು ಹೇಳಿ ಮಾಡಿಸಿದ ಸಮಯ. ರೈತರು ಸಹ ಈ ವರ್ಷದಲ್ಲಿ ಎರಡು ಬೆಳೆಗಳ ಮಾತ್ರ ಬೆಳೆಯುತ್ತಾರೆ. ಈ ಸೌತೆಕಾಯಿ ಪ್ರತಿ ರೈತರ ಜಮೀನಿನಲ್ಲಿ ಪ್ರತಿ ಟನ್‌ಗಟ್ಟಲೆ ಬೆಳೆದು ಕಂಪನಿಗಳಿಗೆ ನೀಡುತ್ತಾರೆ.

Advertisement

ಬಿತ್ತನೆ ವಿಧಾನ

ಬೀಜಗಳನ್ನು 1ರಿಂದ 2 ಸೆಂ. ಆಳಕ್ಕೆ ಮಣ್ಣಿನಲ್ಲಿ ಬಿತ್ತಬೇಕು. ಇದರಿಂದ ಅಗತ್ಯವಿರುವಷ್ಟು ಮಣ್ಣಿನ ಪದರು ಹಾಗೂ ತೇವಾಂಶ ದೊರೆತು ಬೀಜ ಬೇಗನೇ ಮೊಳೆತು ಗಿಡಗಳು ವೇಗವಾಗಿ ಬೆಳೆಯಲು ಅನುಕೂಲವಾಗುತ್ತದೆ. ಸಾವಯವ ಕೃಷಿಯಲ್ಲಿ ಬೆಳೆಯುವಾಗ ಹೆಚ್ಚಿಗೆ ಅಂತರ ಅಂದರೆ ಸಾಲಿನಿಂದ ಸಾಲಿಗೆ 4 ಅಡಿ ಹಾಗೂ ಗಿಡದಿಂದ ಗಿಡಕ್ಕೆ 1 ಅಡಿ ಕೊಡುವುದರಿಂದ ಗಾಳಿಯಾಡಲು ಅನುಕೂಲವಾಗಿ, ಎಲೆಗಳಿಗೆ ಹರಡುವ ರೋಗಗಳ ಬಾಧೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಬಿತ್ತನೆ ಮಾಡಿದ 40 ದಿನಗಳವರೆಗೂ ಮುಖ್ಯ ತಾಕನ್ನು ಕಳೆ ರಹಿತವಾಗಿಡಬೇಕು. ಸಾಮಾನ್ಯವಾಗಿ ಕೈಯಿಂದ ಕಳೆ ಕೀಳುವುದರಿಂದ ಮಣ್ಣು ಸಡಿಲಗೊಳಿಸಲು ಅನುವಾಗುತ್ತದೆ. ಬಿತ್ತನೆ ಮಾಡಿದ 15 ದಿನಗಳ ನಂತರ ಮೊದಲನೇ ಬಾರಿಗೆ ಹಾಗೂ 30 ದಿನಗಳ ನಂತರ ಎರಡನೇ ಸಲ ಕಳೆ ಕೀಳಬಹುದು. ಇದಾದ ನಂತರ ಬೆಳೆ ಸಾಲುಗಳ ನಡುವೆ ಅಂತರ ಬೇಸಾಯ ಮಾಡಬೇಕು. ಪರಿಣಾಮಕಾರಿಯಾಗಿ ಕಳೆ ನಿಯಂತ್ರಣ ಮಾಡಲು ಹಾಗೂ ಹನಿ ನೀರಾವರಿ ಪದ್ಧತಿಯಲ್ಲಿ ನೀರುಣಿಸುವ ಪ್ರಮಾಣವನ್ನು ಕಡಿಮೆಗೊಳಿಸಲು ಕಪ್ಪು ಬಣ್ಣದ ತೆಳು ಪ್ಲಾಸ್ಟಿಕ್‌ ಹೊದಿಕೆ ಉಪಯೋಗಿಸಬಹುದು. ಉತ್ತಮ ಗುಣಮಟ್ಟದ ಕಾಯಿಗಳನ್ನು ಪಡೆಯಲು ಆಧಾರ ಒದಗಿಸಿ ದಾರಗಳಿಗೆ ಬಳ್ಳಿಗಳನ್ನು ಹಬ್ಬಿಸಬೇಕು. ಡ್ರಿಪ್‌ ಮುಖಾಂತರ ನೀರನ್ನು ಹಾಯಿಸಬೇಕು ಇದಕ್ಕೆ ಗೊಬ್ಬರ ಇನ್ನೂ ಅನೇಕ ಔಷಧಿಗಳನ್ನು ನೀರಿನಲ್ಲಿ ಕಲಸಿ ಡ್ರಿಪ್‌ ಮುಖಾಂತರ ಹಾಯಿಸುತ್ತಾರೆ ರೈತರು.

ರೋಗ ನಿಯಂತ್ರಣ

ಬಿತ್ತನೆ ಮಾಡುವ 15 ದಿನಗಳ ಮೊದಲು ಮುಖ್ಯ ತಾಲೂಕಿನ ಸುತ್ತಲೂ 2ರಿಂದ 3 ಸಾಲು ಮೆಕ್ಕೆಜೋಳ ಅಥವಾ ಗೋವಿನ ಜೋಳವನ್ನು ದಟ್ಟವಾಗಿ ಬಿತ್ತಬೇಕು. ಇದರಿಂದ ಬೇರೆ ತಾಲೂಕುಗಳಿಂದ ಒಳ ಬರುವ ಕೀಟಗಳ ಹಾವಳಿ ಕಡಿಮೆಗೊಳಿಸಬಹುದು. ಬಿತ್ತನೆ ಮಾಡಿದ 2 ವಾರಗಳ ನಂತರ ಮೊದಲು ಚಿಗುರಿದ ಎರಡು ಎಲೆಗಳನ್ನು ಚಿವುಟಿ ಹಾಕುವುದರಿಂದ ರಂಗೋಲಿ ಹುಳದ ಹಾವಳಿ ನಿಯಂತ್ರಿಸಬಹುದು. 4ರಿಂದ 5 ವಾರಗಳ ನಂತರ ಬೇವಿನ ಹಿಂಡಿಯನ್ನು ಹೆಕ್ಟೇರಿಗೆ 250 ಕೆಜಿಯಂತೆ ಮಣ್ಣಿಗೆ ಸೇರಿಸಬೇಕು. ಬೆಳೆ ಹಾನಿ ಮಾಡುವ ಕೆಂಪು ಕುಂಬಳ ದುಂಬಿ, ಹಣ್ಣು ನೊಣ, ಕಾಯಿಕೊರಕ ಹುಳುಗಳ ನಿಯಂತ್ರಣಕ್ಕಾಗಿ ಶೇ 4ರ ಬೇವಿನ ಬೀಜದ ಪುಡಿಯ ಸಾರ ಅಥವಾ ಶೇ 0.7ರ ಪ್ರಮಾಣದ ಬೇವಿನ ಸೊಪ್ಪಿನ ಕಷಾಯವನ್ನು ಬಿತ್ತನೆ ಮಾಡಿದ 10, 17 ಮತ್ತು 23 ದಿನಗಳ ನಂತರ ಸಿಂಪಡಣೆ ಮಾಡಬೇಕು. ಹಣ್ಣು ನೊಣದ ನಿಯಂತ್ರಣಕ್ಕಾಗಿ ಲಿಂಗಾಕರ್ಷಕ (ಕ್ಯೂಲೂರ್‌) ಬಲೆ ಉಪಯೋಗಿಸುವುದು ಹೆಚ್ಚು ಪರಿಣಾಮಕಾರಿ.

ಮಿಡಿ ಸೌತೆಕಾಯಿ ಬೆಳೆಯಲು ಮೊದಲಿಗೆ ನಮಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಇಲ್ಲಿನ ಕಂಪನಿಯೊಂದು ನಮ್ಮ ಗ್ರಾಮಗಳಿಗೆ ಭೇಟಿ ನೀಡಿ ಮಿಡಿ ಸೌತೆ ಕಾಯಿಯನ್ನು ಬೆಳೆಯಲು ಮಾಹಿತಿ ನೀಡಿ ಒಬ್ಬ ರೈತ ಬೆಳೆದ ಬೆಳೆ ವಿದೇಶಕ್ಕೆ ರಫ್ತು ಆಗುವ ಮಿಡಿ ಸೌತೆಕಾಯಿಯನ್ನು ನಾವುಗಳು ಬೆಳೆದು ನಮಗೆ ಹೆಚ್ಚಿನ ರೀತಿಯಲ್ಲಿ ಲಾಭ ಪಡೆಯಲು ಸಾಧ್ಯವಾಗಿದೆ. ಅಂಜಿನಪ್ಪ ತಿಮ್ಮಲಾಪುರ ಗ್ರಾಮದ ರೈತ

-ರವಿಕುಮಾರ್‌ ಎಂ

Advertisement

Udayavani is now on Telegram. Click here to join our channel and stay updated with the latest news.

Next