Advertisement

ಕಬ್ಬನ್‌ ಪಾರ್ಕಲ್ಲಿ ಕಲರ್‌ಫ‌ುಲ್‌ ಬಿದಿರು

11:53 AM Jun 11, 2018 | Team Udayavani |

ಬೆಂಗಳೂರು: ಪರಿಸರ ಪ್ರಿಯರ ನೆಚ್ಚಿನ ತಾಣ ಕಬ್ಬನ್‌ ಉದ್ಯಾನವನ ಇನ್ನುಮುಂದೆ ದೇಸಿ ಮತ್ತು ವಿದೇಶಿ ಬಿದಿರು ತಳಿಗಳ ಸಂಗಮ ತಾಣವಾಗಲಿದೆ. ಬಣ್ಣ-ಬಣ್ಣದ ಬಿದಿರು ಮೆಳೆಗಳು ಇಲ್ಲಿ ಮಿನುಗಲಿವೆ.

Advertisement

ತೋಟಗಾರಿಕೆ ಇಲಾಖೆ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದು ಕಬ್ಬನ್‌ಪಾರ್ಕ್‌ಗೆ ಇನ್ನಷ್ಟು ಮೆರುಗು ನೀಡಲು ಮುಂದಾಗಿದೆ. ಪಾರ್ಕ್‌ನಲ್ಲಿ ಈಗಾಗಲೇ ಹೂ ಬಿಟ್ಟು, ನೆಲಕಚ್ಚಿರುವ ಬಿದಿರಿನ ಸ್ಥಳದಲ್ಲೇ ಹೊಸ ಬಿದಿರಿನ ತಳಿಗಳ ನಾಟಿ ಮಾಡುವ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ.

ಬಿದಿರು ಕಬ್ಬನ್‌ಪಾರ್ಕ್‌ಗೆ ಅಂದ ತಂದುಕೊಟ್ಟಿದೆ. ಆದರೆ, ಅವುಗಳಲ್ಲಿ ಕೆಲವು ಇತ್ತೀಚೆಗೆ ನೆಲೆಕ್ಕುರುಳಿವೆ. ಹೀಗಾಗಿ ಬಿದಿರು ಬಿದ್ದಿರುವ ಜಾಗದಲ್ಲಿ ಮತ್ತೆ ಬಿದಿರು ನಾಟಿ ಮಾಡುವ ಕೆಲಸಕ್ಕೆ ತೋಟಗಾರಿಕಾ ಇಲಾಖೆ ಮುಂದಾಗಿದೆ. ಈ ಮೂಲಕ ಕಬ್ಬನ್‌ಪಾರ್ಕ್‌ಗೆ ದೇಶಿಯ ಮತ್ತು ವಿದೇಶಿ ಬಿದಿರಿನ ಸೌಂದರ್ಯ ನೀಡುವ ಉದ್ದೇಶ ಇಲಾಖೆಯದ್ದಾಗಿದೆ.

ಸದ್ಯದಲ್ಲೇ ಅರಣ್ಯಇಲಾಖೆ ನೆಲಕ್ಕುರುಳಿರುವ ಬಿದಿರುಗಳನ್ನು ತೆರವುಗೊಳಿಸುವ ಕಾರ್ಯಚಣೆಗೆ ಮುಂದಾಗಲಿದೆ. ಇದಾದ ಬಳಿಕ ಬಿದಿರು ತಳಿಗಳ ನಾಟಿ ಪ್ರಕ್ರಿಯೆ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಕಲಾಕೃತಿಯ ಟಚ್‌: ಇತ್ತೀಚೆಗೆ ಬಿದ್ದಿರುವ ಬಿದಿರುಗಳಿಗೆ ಕಲಾಕೃತಿಗಳ ಟಚ್‌ ನೀಡುವ ಇರಾದೆ ಕೂಡ ತೋಟಗಾರಿಕೆ ಇಲಾಖೆಗೆ ಇದೆ. ಈ ಕುರಿತಂತೆ ಶಿಪ್ಲಕಲಾ ಅಕಾಡೆಮಿಯನ್ನು ಸಂಪರ್ಕಿಸಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ಬಿದಿರನ್ನು ಭದ್ರಾವತಿಯ ಕಾಗದ ಕಾರ್ಖಾನೆಗೆ ನೀಡುವ ಚಿಂತನೆ ನಡೆಸಿದೆ. ಈ ಎರಡೂ ಕಾರ್ಯಗಳು ಯಶಸ್ವಿಯಾಗದಿದ್ದರೆ ಹರಾಜು ಹಾಕುವ ಇಂಗಿತವನ್ನು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Advertisement

ಕೇರಳಕ್ಕೆ ತಜ್ಞರ ತಂಡ: ಕಬ್ಬನ್‌ಪಾರ್ಕ್‌ನಲ್ಲಿ ಬಿದಿರು ನಾಟಿ ಮಾಡುವ ಪ್ರಕ್ರಿಯೆ ಸಂಬಂಧ ಪರಿಸರ ತಜ್ಞ ಯಲಪ್ಪ ರೆಡ್ಡಿ ನೇತೃತ್ವದ ತಜ್ಞರ ತಂಡ ಸದ್ಯದಲ್ಲಿಯೇ ಕೇರಳಕ್ಕೆ ಭೇಟಿ ನೀಡಲಿದೆ. ಕೇರಳದಲ್ಲಿ ಬಿದಿರಿಗೆ ಸಂಬಂಧ ಪಟ್ಟ ಹಲವು ಅರಣ್ಯ ಸಂಸ್ಥೆಗಳಿದ್ದು, ಇವುಗಳಿಗೆ ಪರಿಣಿತ ತಜ್ಞರ ತಂಡ ಭೇಟಿ ನೀಡಲಿದೆ. ಭಾರತೀಯ ತಳಿಗಳ ಜತೆಗೆ ಬರ್ಮಾ, ಮಲೇಷಿಯಾ ಸೇರಿದಂತೆ ಇನ್ನಿತರ ಬಿದಿರಿನ ತಳಿಗಳು ಇಲ್ಲಿ ದೊರೆಯಲಿದ್ದು, ಸೂಕ್ತವಾದ ಬಿದಿರಿನ ತಳಿಗಳನ್ನು ತಜ್ಞರ ತಂಡ ಆಯ್ಕೆ ಮಾಡಲಿದೆ.

ಬಣ್ಣ ಬಣ್ಣದ ಬಿದಿರು: ಕೇರಳದಿಂದ ಬಿದಿರು ವಿಭಿನ್ನ ಬಣ್ಣದಲ್ಲಿರುತ್ತದೆ. ಕಪ್ಪು, ಹಸಿರು ಮತ್ತು ಕಡು ಹಸಿರು ಬಣ್ಣದ ಬಿದಿರು ತಳಿಗಳು ಅಲ್ಲಿ ಲಭ್ಯವಿವೆ. ಬಿದಿರಿನ ಎಲೆಗಳು ಕೂಡ ಭಿನ್ನವಾಗಿರುತ್ತವೆ. ಈ ಎಲೆಗಳು ಕಬ್ಬನ್‌ಪಾರ್ಕ್‌ಗೆ ಹೊಸ ಕಳೆ ಕಟ್ಟಿಕೊಡಲಿವೆ. ಈ ಹೊಸ ಬಿದಿರು ತಳಿಗಳು 3 ವರ್ಷಕ್ಕೆ 15 ರಿಂದ 20 ಅಡಿ ಬೆಳೆಯಲಿವೆ. ಇವುಗಳಲ್ಲಿ 15 ವರ್ಷದಿಂದ 40 ವರ್ಷ ಬಾಳುವ ತಳಿಗಳು ಇರಲಿವೆ ಎನ್ನುತ್ತಾರೆ ಅಧಿಕಾರಿಗಳು.

ಕಬ್ಬನ್‌ ಪಾರ್ಕ್‌ನಲ್ಲಿ ಈಗಾಗಲೇ ಹೂ ಬಿಟ್ಟು ನೆಲಕ್ಕುರುಳಿರುವ ಬಿದಿರಿನ ಸ್ಥಳದಲ್ಲಿಯೇ ಹೊಸ ಬಿದಿರಿನ ನಾಟಿ ಪ್ರಕ್ರಿಯೆ ನಡೆಯಲಿದೆ. ಈ ಸಂಬಂಧ ಸದ್ಯದಲ್ಲಿಯೇ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ನೇತೃತ್ವದಲ್ಲಿ ಪರಿಣಿತರ ತಂಡ ಕೇರಳಕ್ಕೆ ಭೇಟಿ ನೀಡಲಿದ್ದು, ಅಲ್ಲಿಂದ ತರಲಾಗುವ ದೇಶಿ ಮತ್ತು ವಿದೇಶಿ ಬಿದಿರಿನ ತಳಿಗಳ ನಾಟಿ ಪ್ರಕ್ರಿಯೆ ನಡೆಯಲಿದೆ.
-ಮಹಾಂತೇಶ್‌ ಮುರುಗೋಡ್‌, ತೋಟಗಾರಿಕಾ ಇಲಾಖೆ ಉಪನಿರ್ದೇಶಕ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next