Advertisement
ಬೆಳ್ತಂಗಡಿ: ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಮಂಡಳಿಯಲ್ಲಿ 5,650.71 ಕೋ. ರೂ.ಗಳಿದ್ದರೂ ಕಟ್ಟಡ ಕಾರ್ಮಿಕರಿಗೆ ಸವಲತ್ತುಗಳನ್ನು ನೀಡದೆ ರಾಜ್ಯ ಸರ್ಕಾರ ಕಾರ್ಮಿಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಸರಕಾರ ತನ್ನ ಹಠಮಾರಿ ಧೋರಣೆ ಕೈಬಿಡದಿದ್ದರೆ ಆ. 7ರಂದು ಜಿಲ್ಲಾ ಕಾರ್ಮಿಕ ಕಚೇರಿಗೆ ದಿಗ್ಬಂಧನ ಚಳವಳಿ ನಡೆಸಲಾಗುವುದೆಂದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು)ದ ದ.ಕ ಜಿಲ್ಲಾಧ್ಯಕ್ಷ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ತಿಳಿಸಿದರು. ಅವರು ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೆೇರಿ ಮುತ್ತಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಶಾಸಕ ಕೆ.ವಸಂತ ಬಂಗೇರ ಭೇಟಿ ನೀಡಿ , ಮನವಿ ಸ್ವೀಕರಿಸಿ ಮಾತನಾಡಿ ಕಾರ್ಮಿಕ ಎಲ್ಲ ಸಮಸ್ಯೆಗಳ ಬಗ್ಗೆ ಕಾರ್ಮಿಕ ಸಚಿವರೊಂದಿಗೆ ಮಾತುಕತೆ ನಡೆಸಿ ಇತ್ಯರ್ಥ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಪ್ರಭಾರ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಟನೆಯ ನೇತೃತ್ವವನ್ನು ತಾಲೂಕು ಕಾರ್ಯದರ್ಶಿ ವಸಂತ ನಡ, ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ನೆರಿಯ, ಪ್ರಮುಖರಾದ ಹೈದರಾಲಿ ಕೊಯ್ಯೂರು, ಚನಿಯಪ್ಪ ಧರ್ಮಸ್ಥಳ, ಕಾರಂದೂರು, ಶಾಂತಿರಾಜ್ ನಿಟ್ಟಡೆ, ಮಧುಸೂದನ್ ಕಳೆಂಜ, ಅನಿಲ್ ಎಂ, ವಿಜಯ ನಾವೂರು,
ರೋಹಿಣಿ ಪೆರಾಡಿ, ಮೀನಾಕ್ಷಿ ಪಡಂಗಡಿ, ಯಶೋದಾ ಎಸ್. ಪೂಜಾರಿ ಶೇಖರ್ ಮತ್ತಿತರರು ವಹಿಸಿದ್ದರು.