Advertisement

ಮುಖ್ಯಮಂತ್ರಿಗೆ ಸಿ.ಟಿ.ರವಿ ಬಹಿರಂಗ ಪ್ರಶ್ನೆ

07:30 AM Jun 08, 2019 | Team Udayavani |

ಬೆಂಗಳೂರು: ಜಿಂದಾಲ್‌ ಕಂಪೆನಿಗೆ 3,667 ಎಕರೆ ಭೂಮಿಯನ್ನು ಶುದ್ಧ ಕರಾರು ಮಾಡಿಕೊಡುವುದರಿಂದ ರಾಜ್ಯಕ್ಕಾಗುವ ಲಾಭವೇನು ಹಾಗೂ ಅದೇ ತಾಲೂಕಿನಲ್ಲಿ ಭೂಸ್ವಾಧೀನಕ್ಕೆ ಎಕರೆಗೆ 30 ಲಕ್ಷ ರೂ.ನಿಂದ ಒಂದು ಕೋಟಿ ರೂ.ವರೆಗೆ ಪರಿಹಾರ ನೀಡಿರುವಾಗ ಜಿಂದಾಲ್‌ ಕಂಪೆನಿಗೆ ಎಕರೆಗೆ ಕೇವಲ 1.22 ಲಕ್ಷ ರೂ.ಗೆ ಮಾರಾಟ ಮಾಡಲು ಮುಂದಾಗಿರುವುದರ ಉದ್ದೇಶವೇನು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ್ದಾರೆ.

Advertisement

ಮುಖ್ಯಮಂತ್ರಿಗಳು, ಜೆಡಿಎಸ್‌/ ಕಾಂಗ್ರೆಸ್‌ ಪಕ್ಷಗಳ ಸಚಿವರಿಗೆ ಶುಕ್ರವಾರ ಬಹಿರಂಗ ಪತ್ರ ಬರೆದಿರುವ ಸಿ.ಟಿ.ರವಿ, ಜಿಂದಾಲ್‌ ಕಂಪೆನಿಗೆ ಭೂಮಿ ಪರಭಾರೆ ಮಾಡುವ ನಿರ್ಧಾರಕ್ಕೆ ಸಂಬಂಧಪಟ್ಟಂತೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದು, ವಿವರ ಹೀಗಿದೆ.

* ಜಿಂದಾಲ್‌ ಕಂಪೆನಿಗೆ ಭೂಮಿ ಮಾರಾಟ ಮಾಡುವುದರಿಂದ ರಾಜ್ಯಕ್ಕೆ ಯಾವ ರೀತಿಯ ಲಾಭವಾಗಲಿದೆ? ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಇದೇ ತಾಲೂಕಿನಲ್ಲಿ ಖಾಸಗಿ ಭೂಮಿ ಬಿಟ್ಟುಕೊಟ್ಟವರಿಗೆ ಎಕರೆಗೆ 30 ಲಕ್ಷ ರೂ.ನಿಂದ ಒಂದು ಕೋಟಿ ರೂ.ವರೆಗೆ ಪರಿಹಾರ ನೀಡಲಾಗಿದೆ. ಆದರೆ ಜಿಂದಾಲ್‌ ಸಂಸ್ಥೆಗೆ ಕೇವಲ 1.22 ಲಕ್ಷ ರೂ. ಶುದ್ಧ ಕ್ರಯ ಮಾಡಿಕೊಡುತ್ತಿರುವುದರ ಉದ್ದೇಶವೇನು?

* ರಾಜ್ಯದಲ್ಲಿ ಜಿಂದಾಲ್‌ ಸ್ಟೀಲ್‌ ಕಂಪೆನಿ ಆರಂಭವಾಗುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಗೂ ಜಿಂದಾಲ್‌ ಕಂಪೆನಿ ನಡುವೆ ನಡೆದಿರುವ ವ್ಯಾವಹಾರಿಕ ಒಪ್ಪಂದವೇನು. ಈವರೆಗೆ ಎಷ್ಟು ಭೂಮಿ, ಎಷ್ಟು ಅವಧಿಗೆ ಹಾಗೂ ಎಷ್ಟು ಮೊತ್ತಕ್ಕೆ ಜಿಂದಾಲ್‌ ಕಂಪೆನಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ? ಕಂಪೆನಿಗೆ ರಾಜ್ಯ ಸರ್ಕಾರ ಎಲ್ಲಿಂದ ಎಷ್ಟು ಪ್ರಮಾಣದ ನೀರು ಪೂರೈಸುತ್ತಿದೆ. ಕಂಪೆನಿ ಪ್ರಾರಂಭವಾದ ಬಳಿಕ ಜನ ಜೀವನ, ಆರೋಗ್ಯ, ಪರಿಸರದ ಮೇಲೆ ಉಂಟಾಗಿರುವ ಪರಿಣಾಮಗಳೇನು? ಇದಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಮೌಲ್ಯಮಾಪನ ನಡೆದಿದೆಯೇ? ಪರಿಸರ ಇಲಾಖೆ ವರದಿ ಇದೆಯೇ?

* ಈಗ ಸೃಷ್ಟಿಯಾಗಿರುವ ಉದ್ಯೋಗವೆಷ್ಟು? ಅದರಲ್ಲಿ ಕನ್ನಡಿಗರು, ಸ್ಥಳೀಯರ ಪಾಲು ಎಷ್ಟು? ಕಂಪೆನಿಯು ಎಂಎಂಎಲ್‌ಗೆ ಬಾಕಿ ಉಳಿಸಿಕೊಂಡಿರುವ ಹಣ ಎಷ್ಟು? ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಸಂಬಂಧ ಸಲ್ಲಿರುವ ವರದಿಯಲ್ಲಿ ಜಿಂದಾಲ್‌ ಕಂಪೆನಿ ಬಗ್ಗೆ ಇರುವ ಉಲ್ಲೇಖವೇನು? ಕಂಪೆನಿಗೆ ಜಮೀನು ಪರಭಾರೆ ಮಾಡಲು ರಾಜ್ಯ ಕಾನೂನು ಇಲಾಖೆ ನೀಡಿರುವ ಅಭಿಪ್ರಾಯವೇನು. ಕಾನೂನು ಇಲಾಖೆ ಅಭಿಪ್ರಾಯಕ್ಕೆ ವಿರುದ್ಧವಾಗಿ ಭೂಮಿ ಪರಭಾರೆ ಮಾಡಲು ಮುಂದಾಗಿರುವುದು ಯಾವ ಕಾರಣಕ್ಕೆ?

Advertisement

* ಕೆಲ ಐಎಎಸ್‌/ ಐಪಿಎಸ್‌ ಅಧಿಕಾರಿಗಳು ಸೇವಾ ನಿವೃತ್ತಿ ಬಳಿಕ ಜಿಂದಾಲ್‌ ಕಂಪೆನಿಯಲ್ಲಿ ದೊಡ್ಡ ಮೊತ್ತದ ವೇತನಕ್ಕೆ ಕೆಲಸ ಮಾಡಿರುವುದು, ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಈ ಹಿಂದೆ ಕಂಪೆನಿಯಲ್ಲಿ ಕೆಲಸ ಮಾಡಿದ ಹಾಗೂ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಐಎಎಸ್‌/ ಐಪಿಎಸ್‌ ಅಧಿಕಾರಿಗಳ ಮಾಹಿತಿ ಹಾಗೂ ಅವರು ಸೇವೆಯಲ್ಲಿದ್ದಾಗ ಕಂಪೆನಿಗೆ ಮಾಡಿರುವ ಸಹಾಯವನ್ನು ಬಹಿರಂಗಪಡಿಸಿ.

* ಜಿಂದಾಲ್‌ ಕಂಪೆನಿ ಹಾಗೂ ಇತರೆ ಕಂಪೆನಿಗಳಿಗೆ 2001ರಿಂದ 2009-10ರವರೆಗೆ ಎಂಎಂಎಲ್‌ ಮೂಲಕ ಅತಿ ಕಡಿಮೆ ಬೆಲೆಗೆ ಅದಿರು ಸರಬರಾಜು ಮಾಡಿರುವ ಬಗ್ಗೆ ಸಿಎಜಿ ನೀಡಿರುವ ವರದಿಯಲ್ಲೇನಿದೆ. ಬಾಕಿ ಪಾವತಿ ಸಂಬಂಧ ಎಂಎಂಎಲ್‌ ಹಾಗೂ ಜೆಎಸ್‌ಡಬ್ಲೂ ನಡುವಿನ ನ್ಯಾಯಾಲಯದಲ್ಲಿರುವ ವಿವಾದ ಬಗೆಹರಿದಿದೆಯೇ. ಒಮ್ಮೆ ಶುದ್ಧ ಕ್ರಯ ಮಾಡಿದ ಬಳಿಕ ಸರ್ಕಾರ ಯಾವ ರೀತಿಯಲ್ಲಿ ಕಂಪೆನಿಯ ಮೇಲೆ ನಿಯಂತ್ರಣ ಹಾಗೂ ನಿರ್ದೇಶನ ಮಾಡಲು ಸಾಧ್ಯವಿದೆಯೇ?

* ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 10 ಎಕರೆ ಮೇಲ್ಪಟ್ಟ ಪ್ರದೇಶವನ್ನು ಯಾವುದೇ ಕೈಗಾರಿಕೆಗೆ ನೀಡುವಾಗ ಶುದ್ಧ ಕ್ರಯ ಮಾಡದೆ ದೀರ್ಘಾವಧಿ ಗುತ್ತಿಗೆ ನೀಡುವ ಮೂಲಕ ಸರ್ಕಾರ ಜಮೀನಿನ ಮೇಲೆ ನಿಯಂತ್ರಣ ಹೊಂದಬೇಕು ಎಂಬ ಸಂಪುಟ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಭೂಮಿ ಪರಭಾರೆ ಮಾಡಲು ಹೊರಟಿರುವುದರ ಬಗ್ಗೆ ಕಾಂಗ್ರೆಸ್‌ನ ನಿಲುವೇನು?

Advertisement

Udayavani is now on Telegram. Click here to join our channel and stay updated with the latest news.

Next