ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎಂದು ಕರೆಯುವ ಮೂಲಕ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನಾಯಕ ಸಿ.ಟಿ.ರವಿ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಯತ್ನಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸಿ.ಟಿ. ರವಿ ನಿವಾಸದ ಮುತ್ತಿಗೆಗಾಗಿ ಬರುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕರ್ತರು ತಡೆದಿದ್ದು, ಈ ವೇಳೆ ಸಂಘರ್ಷದ ವಾತಾವರಣ ಉಂಟಾಯಿತು. ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮೇಲೆ ಬಿಜೆಪಿ ನಾಯಕರೊಬ್ಬರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ವೀಡಿಯೋ ವೈರಲ್ ಆಗಿದೆ. ಪ್ರತಿಭಟನ ನಿರತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಕೊಪ್ಪ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ರವಿ ಅವರು ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎಂದು ಕರೆದಿದ್ದರು. ಈ ಹೇಳಿಕೆಯನ್ನು ಖಂಡಿಸಿ ಶನಿವಾರ ನಗರದ ತಾಲೂಕು ಕಚೇರಿಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ರವಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿದರು.
ರವಿ ಅವರ ಮನೆಗೆ ಮುತ್ತಿಗೆ ಹಾಕಲು ಬಸವನಹಳ್ಳಿ ರಸ್ತೆಯಲ್ಲಿ ಮೆರವಣಿಗೆ ಹೊರಟ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ತಳ್ಳಾಟ-ನೂಕಾಟ ಉಂಟಾಗಿ ಸ್ವಲ್ಪಕಾಲ ಗೊಂದಲದ ಸ್ಥಿತಿ ನಿರ್ಮಾಣವಾಯಿತು.
ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಸಚಿನ್ ಎಂಬವರು ಶಾಸಕ ರವಿ ಅವರ ಮನೆಗೆ ನುಗ್ಗಲು ಮುಂದಾಗಿದ್ದು, ಈ ವೇಳೆ ಬಿಜೆಪಿ
ಮುಖಂಡ, ನಗರಸಭೆ ಮಾಜಿ ಸದಸ್ಯ ಪುಷ್ಪರಾಜ್, ಸಚಿನ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಸಚಿನ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆದಿದ್ದಾರೆ.