ಚಿಕ್ಕಮಗಳೂರು: ನನ್ನ ವಿರುದ್ಧ ಕರಾಳ ದಿನ ಆಚರಿಸುವರು ಕಳೆದ 6 ವರ್ಷ 3 ತಿಂಗಳು ಯಾವ ಸರ್ಕಾರ ಇತ್ತು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಚಿವ ಸಿ.ಟಿ. ರವಿ ಹೇಳಿದರು.
ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾಪುರ ಕರೆಗೆ ನೀರು ತಂದಿದ್ದಕ್ಕೆ ಕರಾಳ ದಿನವೋ, ಕಡೂರು- ಚಿಕ್ಕಮಗಳೂರು ರಸ್ತೆ ವೇಗಗತಿಯಲ್ಲಿ ನಿರ್ಮಾಣ ಮಾಡಿದ್ದಕ್ಕೋ? ಮೆಡಿಕಲ್ ಕಾಲೇಜ್ ಟೆಂಡರ್ ಆಗಿರುವುದಕ್ಕೋ? ಯಾವುದಕ್ಕೆ ಕರಾಳದಿನ ಎಂದು ಪ್ರಶ್ನಿಸಿದರು. ವಿಪಕ್ಷವನ್ನು, ಜನರನ್ನು ಕತ್ತಲಲಿಟ್ಟು ನಾನು ರಾಜಕಾರಣ ಮಾಡಿಲ್ಲ, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದು ಕೆಲ ಜನರಿಗೆ ಅರಗಿಸಿಕೊಳ್ಳಲು ಆಗಿಲ್ಲ, ಜನರ ಮೇಲೆ ನಾನು ವಿಶ್ವಾಸವಿಟ್ಟಿದ್ದೇನೆ. ಅವರು ನನ್ನ ಮೇಲೆ ವಿಶ್ವಾಸವಿಟ್ಟು ನಾಲ್ಕು ಬಾರಿ ಗೆಲ್ಲಿಸಿದ್ದಾರೆ ಎಂದರು.
ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡಲು ಸಾಧ್ಯವಾಗಿಲ್ಲ, ಜಾತಿವಾದಿ ಎಂದು ಹೇಳಲು ಸಾಧ್ಯವಾಗಿಲ್ಲ, ದರ್ಪ ತೋರಿಸುವ ಮಂತ್ರಿಯೂ ಅಲ್ಲ. ನಾನು ಅಧಿಕಾರದಲ್ಲಿ ಇದ್ದಾಗಲೂ ನಿಮ್ಮದೇ ದರ್ಪ ನಡೆದಿದೆ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗೂ ದರ್ಪ ದೌರ್ಜನ್ಯ, ಅಸಂಸ್ಕೃತ ಭಾಷೆ ಬಳಕೆವಿಪಕ್ಷದವರು ಮಾಡಿದ್ದಾರೆ ಎಂದರು. ನಾನು ಮಂತ್ರಿಯಾಗಿ 11 ತಿಂಗಳು ಆಗಿದೆ. 6 ವರ್ಷ 3 ತಿಂಗಳು ಬೇರೆ ಬೇರೆ ಉಸ್ತುವಾರಿ ಸಚಿವರು ಇದ್ದರು. ಇಂದು ಪ್ರತಿಭಟನೆ ಮಾಡುವರು ಅಂದು ಅಧಿಕಾರದಲ್ಲಿದ್ದರು. ಅವರ ಅವಧಿಯಲ್ಲಿ ಮೆಡಿಕಲ್ ಕಾಲೇಜು ಆಗಿಲ್ಲ, ಒಳಚರಂಡಿ ಅನುಷ್ಠಾನ ಆಗಲಿಲ್ಲ, ಕರಗಡ ನಾಲೆಯಲ್ಲಿ ನೀರು ಹರಿಯಲಿಲ್ಲ ಎಂದು ದೂರಿದರು.
ಮಂತ್ರಿಯಾಗಿ ಒಂದು ವರ್ಷದಲ್ಲಿ ಏನೇನು ಅಭಿವೃದ್ಧಿ ಕೆಲಸ ಆಗಿದೆ ಎಂಬುದರ ವರದಿ ಸಾರ್ವಜನಿಕರ ಮುಂದಿಡುತ್ತೇನೆ. ಯಾರು ಪ್ರತಿಭಟನೆ ಮಾಡುತ್ತಿದ್ದಾರೆ ಅವರಿಗೂ ಒಂದೊಂದು ಪ್ರತಿ ಕಳಿಸುತ್ತೇನೆ. ನಿಜವಾದ ಕಳಕಳಿಯ ಪ್ರಯತ್ನ ಅವರದ್ದಾಗಿದ್ದರೆ ಅವರಿಗೆ ಅದರಲ್ಲಿ ಉತ್ತರ ಸಿಗುತ್ತೆ ಎಂದರು.
ಚೆನ್ನಾಗಿ ಕೆಲಸ ಮಾಡಿದ ಮೇಲೂ ಆರೋಪ ಮಾಡಿದರೇ ಅದು ಪೂರ್ವಾಗ್ರಹ ಪೀಡಿತ ಅನಿಸುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಯುಜಿಡಿ ಯೋಜನೆ ಮತ್ತು ಅಮೃತ ಯೋಜನೆ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಈ ಬಾರೀ ಸಂಭವಿಸಿದ ಅತಿವೃಷ್ಟಿಯಿಂದ ಅಂದಾಜು 124 ಕೋಟಿ ರೂ. ನಷ್ಟ ಉಂಟಾಗಿದೆ. ಬೆಳೆಹಾನಿಯ ಸಮೀಕ್ಷೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ನಷ್ಟ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಕಳಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಇದ್ದರು.