ಕಲಬುರಗಿ: ಕಾಂಗ್ರೆಸ್ ಪಕ್ಷ ಖಾಲಿ ಡಬ್ಬಾವಾಗಿದ್ದು, ಉಪಚುನಾವಣೆ ನಂತರ ಸಾಬೀತಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಹೇಳಿದರು.
ಬಸವಕಲ್ಯಾಣ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ನಗರಕ್ಕಾಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಖಾಲಿ ಡಬ್ಬಾ ಆಗಿರುವುದರಿಂದ ಹೆಚ್ಚು ಶಬ್ದ ಮಾಡುತ್ತಿದೆ ಎಂದರು.
ನೀತಿ ರಾಜಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ. ಕೇರಳದಲ್ಲಿ ಮುಸ್ಲಿಂ ಲೀಗ್ ಜತೆ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದೆ. ಹೀಗಿದ್ದರೂ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ತಮ್ಮದೇ ನೀತಿ ರಾಜಕಾರಣ ಎನ್ನುತ್ತಾರೆ. ಭಾರತ ಮಾತಾಕೀ ಜೈ ಅಂದ್ರೇ ಕಾಂಗ್ರೆಸ್ ನಲ್ಲಿ ಮೈಯಲ್ಲಿ ಹುಳ ಬಿಟ್ಟಂಗ್ ಆಗುತ್ತೇ ಎಂದರು.
ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೀಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿ.ಟಿ.ರವಿ, ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕೆಂದಿಲ್ಲ. ಏನಿದ್ದರೂ ಕೋರ್ ಕಮಿಟಿ ಸಭೆಯಲ್ಲೇ ಚರ್ಚಿಸಲಾಗುವುದು ಎಂದು ಹೇಳಿದರು.
ರಾಜ್ಯದ ಮೂರೂ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸುವುದು ನಿಶ್ಚಿತ ಎಂದು ಸಿ.ಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಹಾಜರಿದ್ದರು.