ಚಿಕ್ಕಮಗಳೂರು: ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನ, ಛತ್ತೀಸ್‌ಗಢ, ಹಿಮಾಚಲ ಪ್ರದೇಶದಲ್ಲಿ ಗೃಹಿಣಿಯರಿಗೆ ಆರ್ಥಿಕ ನೆರವು, ಉಚಿತ ವಿದ್ಯುತ್ ಯೋಜನೆ ಜಾರಿ ಮಾಡಿ ತೋರಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸವಾಲು ಹಾಕಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೃಹಿಣಿ ಯರಿಗೆ ಆರ್ಥಿಕ ನೆರವ, ಉಚಿತ ವಿದ್ಯುತ್ ನೀಡುವುದು ಕಾಂಗ್ರೆಸ್ ಅಜೆಂಡಾವಾಗಿದ್ದರೆ ಆ ಪಕ್ಷ ಅಧಿ ಕಾರದಲ್ಲಿರುವ ರಾಜ್ಯಗಳಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸುಳ್ಳು ಕೊಡುಗೆಗೆಗಳ ಆಮಿಷ ತೋರಿಸಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಕಾಂಗ್ರೆಸ್‌ನ ಕೆಲವರು ಜೆಸಿಬಿ ಇಟ್ಟು ಕೊಂಡು ಲೂಟಿ ಹೊಡೆಯಲು ಕಾಯು ತ್ತಿದ್ದಾರೆ. ಬಿಜೆಪಿ ಜನಪರ ವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಹೇಳಿದುದರಲ್ಲಿ ಯಾವುದನ್ನೂ ಮಾಡಿಲ್ಲ. ಮೋದಿ ಹೇಳದೆ ಮಾಡಿ ತೋರಿಸಿದ್ದಾರೆ. ಇದನ್ನು ಗಮನಿಸಿರುವ ಜನರಿಗೆ ಕಾಂಗ್ರೆಸ್ ಸುಳ್ಳಿನ ಸರದಾರ ಎನ್ನುವುದು ಅರ್ಥವಾಗಿದೆ ಎಂದರು.
ಡಾ| ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಅತಿ ಹೆಚ್ಚು ಅಪಮಾನಿಸಿದೆ. ಚುನಾವಣೆಯಲ್ಲಿ ಸೋಲಿಸಿತು. ಅವರ ಸಮಾಧಿಗೆ ಜಾಗ ನೀಡಲು ನಿರಾಕರಿಸಿತು. ಸಂವಿಧಾನಕ್ಕೆ ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿದೆ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ದುರ್ಬಲಗೊಳ್ಳುವಂತೆ ಮಾಡಿತ್ತು ಎಂದು ಆರೋಪಿಸಿದರು.