Advertisement

ಸಚಿವ ಜಮೀರ್‌ ರಾಜೀನಾಮೆಗೆ ಸಿ.ಟಿ.ರವಿ ಆಗ್ರಹ

01:06 AM Jun 15, 2019 | Lakshmi GovindaRaj |

ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಕೂಡಲೇ ರಾಜೀನಾಮೆ ನೀಡಬೇಕು ಅಥವಾ ಮುಖ್ಯಮಂತ್ರಿಯವರು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದ್ದಾರೆ.

Advertisement

ಚೌಕೀದಾರ್‌ ಚೋರ್‌ ಎಂದು ಮೊದಲಿಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಐಎಂಎ ಪ್ರಕರಣದ ಬಗ್ಗೆ ಜನತೆಗೆ ಸ್ಪಷ್ಟೀಕರಣ ಕೊಡಬೇಕು ಮತ್ತು ಕ್ಷಮೆ ಯಾಚಿಸಬೇಕು. ಸಚಿವ ಜಮೀರ್‌ ಖಾನ್‌ ರವರನ್ನು ಸಂಪುಟದಿಂದ ಕೈಬಿಡಲು ಕಾಂಗ್ರೆಸ್‌ ಆದೇಶಿಸಬೇಕು. ಜೆಡಿಎಸ್‌ ಮುಖಂಡ ಎಂ.ಎ.ಫ‌ರೂಕ್‌ಅವರ ಪಾತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಚಿವ ಜಮೀರ್‌ ಖಾನ್‌ ಹಾಗೂ ಐಎಂಎ ಮುಖ್ಯಸ್ಥ ಮಾನ್ಸೂರ್‌ಖಾನ್‌ ಅವರ ನಡುವಿನ ವ್ಯವಹಾರ ಸಾಬೀತಾಗಿದೆ. ಐಎಂಎ ಮತ್ತು ಇನ್ನಿತರ ಖಾಸಗಿ ಸಂಸ್ಥೆಗಳು ಕಾನೂನು ಬಾಹಿರವಾಗಿ ಠೇವಣಿ ಸಂಗ್ರಹ ಮಾಡುತ್ತಿದ್ದ ವಿಚಾರ ರಾಜ್ಯ ಸರ್ಕಾರಕ್ಕೆ ಮಾಹಿತಿಯಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಆರ್‌ಬಿಐ ಒಂದು ವರ್ಷದ ಹಿಂದೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಐಎಂಎ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳು ಕಾನೂನು ಬಾಹಿರವಾಗಿ ಠೇವಣಿ ಸಂಗ್ರಹ ಮಾಡುತ್ತಿರುವ ಕುರಿತು ಸರ್ಕಾರದ ಗಮನಕ್ಕೆ ತಂದಿತ್ತು. ಸರ್ಕಾರ ಕಾಟಾಚಾರಕ್ಕೆ ಇವುಗಳ ಬಗ್ಗೆ ತನಿಖೆ ನಡೆಸಿ, ಕ್ಲೀನ್‌ ಚಿಟ್‌ ನೀಡಿ ಪ್ರಕರಣ ಮುಚ್ಚಿ ಹಾಕಿತ್ತು ಎಂದು ದೂರಿದರು.

ಎಲ್ಲ ವಿದ್ಯಾಮಾನಗಳ ಬಗ್ಗೆ ಸರ್ಕಾರಕ್ಕೆ ತಿಳಿದಿದ್ದರೂ ಸಚಿವ ಜಮೀರ್‌ ಖಾನ್‌ ರಿಚ್‌ಮಂಡ್‌ ರಸ್ತೆಯಲ್ಲಿ ತಮಗೆ ಸೇರಿದ್ದ 20 ಕೋಟಿ ಆಸ್ತಿಯನ್ನು ಐಎಂಎ ಮಾಲೀಕ ಮನ್ಸೂರ್‌ ಖಾನ್‌ಗೆ 9.5 ಕೋಟಿಗೆ ಮಾರಾಟ ಮಾಡಿದ್ದಾರೆ. ಐಎಂಎ ವಿರುದ್ಧ ವಂಚನೆಯ ದೂರುಗಳು ದಾಖಲಾಗಿದ್ದರೂ ಜವಾಬ್ದಾರಿಯುತ ಸಚಿವರಾಗಿ ಸರ್ಕಾರ ನಿಗದಿ ಪಡಿಸಿದ ಅಧೀಕೃತ ದರಕ್ಕಿಂತ ಶೇ.50ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

Advertisement

ಹತ್ತಾರು ವರ್ಷಗಳಿಂದ ಕ್ಷೇತ್ರದ ಶಾಸಕರಾಗಿದ್ದ ರೋಷನ್‌ಬೇಗ್‌ ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಯನ್ನು ಈ ವಂಚಕನಿಗೆ ಕಾನೂನು ಬಾಹಿರವಾಗಿ ದಾನ ಮಾಡಿದ್ದಾರೆ. ಮನ್ಸೂರ್‌ಖಾನ್‌ ಅಕ್ರಮವಾಗಿ ಈ ಶಾಲೆಗೆ ಶಿಕ್ಷಕರನ್ನು ನೇರವಾಗಿ ನೇಮಕಾತಿ ಮಾಡಿದ್ದರು. ಈ ಎಲ್ಲ ವ್ಯವಹಾರಗಳ ಬಗ್ಗೆ ಆರ್‌ಬಿಐ, ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ ತರುವಾಯ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಾ.ಜಿ.ಪರಮೇಶ್ವರ್‌ ಈತನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದರು.

6 ವರ್ಷದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರದ ಅವಧಿಯಲ್ಲಿ ಹತ್ತಾರು ವಂಚಕ ಸಂಸ್ಥೆಗಳು 11ಸಾವಿರ ಕೋಟಿಗೂ ಹೆಚ್ಚು ಜನರ ಹಣವನ್ನು ಲೂಟಿ ಮಾಡಿದ್ದಾರೆ. ಆದರೆ ಸರ್ಕಾರ ಇದರ ವಿರುದ್ಧ ಯಾವುದೇ ಗಂಭೀರ ಕ್ರಮ ಜರುಗಿಸಿಲ್ಲ. ಐಎಂಎ ಪ್ರಕರಣದಲ್ಲಿಯೂ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಮನ್ಸೂರ್‌ಖಾನ್‌ ಕುಟುಂಬ ಸಮೇತ 6 ಸಾವಿರ ಕೋಟಿ ಹೂಡಿಕೆದಾರರ ಹಣವನ್ನು ನುಂಗಿ ಪರಾರಿಯಾಗಿದ್ದಾನೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next