Advertisement

ತವರಿನಂಗಳದಲ್ಲಿ ಲಕ್ನೋ ವಿರುದ್ಧ ಆಡಿದ ಚೆನ್ನೈಗೆ ಲಕ್‌

01:05 AM Apr 04, 2023 | Team Udayavani |

ಚೆನ್ನೈ: ಬಹಳ ಕಾಲದ ಬಳಿಕ ತವರಿನಂಗಳದಲ್ಲಿ ಮೊದಲ ಪಂದ್ಯ ಆಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ಗೆಲುವಿನ ಸಂಭ್ರಮ ಆಚರಿಸಿದೆ. ಸೋಮವಾರದ ಐಪಿಎಲ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು 12 ರನ್ನುಗಳಿಂದ ಕೆಡವಿ ಗೆಲುವಿನ ಖಾತೆ ತೆರೆದಿದೆ.

Advertisement

ಚೆನ್ನೈ7 ವಿಕೆಟಿಗೆ 217 ರನ್‌ ರಾಶಿ ಹಾಕಿದರೆ, ಲಕ್ನೋ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 205 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲು ಒಪ್ಪಿಕೊಂಡಿತು.

ಬೃಹತ್‌ ಮೊತ್ತದ ಚೇಸಿಂಗ್‌ ವೇಳೆ ವಿಂಡೀಸ್‌ ಕ್ರಿಕೆಟಿಗ ಕೈಲ್‌ ಮೇಯರ್ ಸಿಡಿದು ನಿಂತರು. ಡೆಲ್ಲಿ ವಿರುದ್ಧ 73 ರನ್‌ ಬಾರಿಸಿದ್ದ ಮೇಯರ್ ಇಲ್ಲಿ 22 ಎಸೆತಗಳಿಂದ 53 ರನ್‌ ಹೊಡೆದರು. 8 ಬೌಂಡರಿ, 2 ಸಿಕ್ಸರ್‌ ಬಾರಿಸಿ ಚೆನ್ನೈ ಬೌಲರ್‌ಗಳಿಗೆ ಬೆವರಿಳಿಸಿದರು. ನಾಯಕ ಕೆ.ಎಲ್‌. ರಾಹುಲ್‌ ಜತೆಗೂಡಿ ಮೊದಲ ವಿಕೆಟಿಗೆ 5.3 ಓವರ್‌ಗಳಿಂದ 79 ರನ್‌ ಪೇರಿಸಿ ಭದ್ರ ಬುನಾದಿ ನಿರ್ಮಿಸಿದರು.

ಮೇಯರ್ ಪೆವಿಲಿಯನ್‌ ಸೇರಿಕೊಂಡ ಬೆನ್ನಲ್ಲೇ ಲಕ್ನೋ ಕುಸಿತ ಕಾಣತೊಡಗಿತು. ನಾಯಕ ಕೆ.ಎಲ್‌. ರಾಹುಲ್‌, ದೀಪಕ್‌ ಹೂಡಾ, ಕೃಣಾಲ್‌ ಪಾಂಡ್ಯ ಬೆನ್ನು ಬೆನ್ನಿಗೆ ಪೆವಿಲಿಯನ್‌ ಸೇರಿಕೊಂಡರು. 5ನೇ ವಿಕೆಟಿಗೆ ಜತೆಗೂಡಿದ ಮಾರ್ಕಸ್‌ ಸ್ಟೋಯಿನಿಸ್‌ ಮತ್ತು ನಿಕೋಲಸ್‌ ಪೂರಣ್‌ ಹೋರಾಟ ಸಾಲಲಿಲ್ಲ. ಸ್ಟೋಯಿನಿಸ್‌ ಅವರು ಅಲಿ ಅವರ ಎಸೆತದಲ್ಲಿ ಬೌಲ್ಡ್‌ ಆಗುವ ಮೊದಲು 18 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್‌ನೊಂದಿಗೆ 21 ರನ್‌ ಗಳಿಸಿದ್ದರು. ನಿಕೋಲಸ್‌ ಅಬ್ಬರವನ್ನು ದೇಶಪಾಂಡೆ ನಿಯಂತ್ರಿಸುವ ಮೊದಲು ಅವರು ಕೇವಲ 18 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಎತ್ತಿ ಸ್ಕೋರ್‌ ಕಾರ್ಡ್‌ಗೆ ಜೀವ ತುಂಬಿದ್ದರು. ಕೊನೆಯ ಓವರ್‌ನಲ್ಲಿ 15 ರನ್‌ಗಳು ಬಂದವು. ಆದರೆ ಅದಕ್ಕಿಂತ ಮೊದಲಿನ 19ನೇ ಓವರ್‌ನಲ್ಲಿ 9 ಮತ್ತು 18ನೇ ಓವರ್‌ನಲ್ಲಿ ಕೇವಲ 7 ರನ್‌ಗಳು ಮಾತ್ರ ಲಕ್ನೋ ಖಾತೆ ಸೇರಿತ್ತು.

ಬೌಲಿಂಗ್‌ನಲ್ಲಿ ಮೊಯಿನ್‌ ಅಲಿ ನಾಲ್ಕು ವಿಕೆಟ್‌ ಪಡೆದರೆ ದೇಶಪಾಂಡೆ ಎರಡು ವಿಕೆಟ್‌ ಉರುಳಿಸಿ ಮಿಂಚಿದರು.

Advertisement

ಗಾಯಕ್ವಾಡ್‌ ಮತ್ತೆ ಆರ್ಭಟ
ಆರಂಭಕಾರ ರುತುರಾಜ್‌ ಗಾಯಕ್ವಾಡ್‌ ಅವರ ಬ್ಯಾಟ್‌ನಿಂದ ಸಿಡಿದ ಸತತ 2ನೇ ಅರ್ಧ ಶತಕ, ಡೇವನ್‌ ಕಾನ್ವೇ ಅವರ ಅಮೋಘ ಬ್ಯಾಟಿಂಗ್‌, ಮೊದಲ ವಿಕೆಟಿಗೆ ದಾಖಲಾದ ಶತಕದ ಜತೆಯಾಟವೆಲ್ಲ ಚೆನ್ನೈ ಸರದಿಯ ಆಕರ್ಷಣೆ ಆಗಿತ್ತು. ಗಾಯಕ್ವಾಡ್‌-ಕಾನ್ವೇ 10ನೇ ಓವರ್‌ ತನಕ ಸಿಡಿಯುತ್ತಲೇ ಸಾಗಿದರು. ಹತ್ತರ ಸರಾಸರಿಯಲ್ಲಿ ರನ್‌ ಹರಿದುಬರತೊಡಗಿತು. ಚಿಪಾಕ್‌ನಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಯಾಯಿತು. ಈ ಜೋಡಿಯನ್ನು ಬೇರ್ಪಡಿಸಲು ಲಕ್ನೋ ಬೌಲರ್ ಹರಸಾಹಸಪಟ್ಟರು. ಅಷ್ಟರಲ್ಲಾಗಲೇ 110 ರನ್‌ ಒಟ್ಟುಗೂಡಿತ್ತು.
ಗುಜರಾತ್‌ ಎದುರಿನ ಆರಂಭಿಕ ಪಂದ್ಯದಲ್ಲಿ 92 ರನ್‌ ಸಿಡಿಸಿದ ರುತುರಾಜ್‌ ಗಾಯಕ್ವಾಡ್‌ ಲಕ್ನೋ ವಿರುದ್ಧ ಇದರ ಮುಂದುವರಿದ ಭಾಗವನ್ನು ಪ್ರದರ್ಶಿಸಿದರು. 31 ಎಸೆತಗಳಿಂದ 57 ರನ್‌ ಚಚ್ಚಿದರು. 4 ಸಿಕ್ಸರ್‌, 3 ಬೌಂಡರಿ ಬಾರಿಸಿ ತವರಿನ ಅಭಿಮಾನಿಗಳಿಗೆ ಧಾರಾಳ ರಂಜನೆ ಒದಗಿಸಿದರು.

ಕಿವೀಸ್‌ ಆರಂಭಕಾರ ಡೇವನ್‌ ಕಾನ್ವೇ ಕೊಡುಗೆ 47 ರನ್‌. ಇದು 29 ಎಸೆತಗಳಿಂದ ಬಂತು. ಸಿಡಿಸಿದ್ದು 5 ಫೋರ್‌ ಹಾಗೂ 2 ಸಿಕ್ಸರ್‌. ಇವರಿಬ್ಬರ ವಿಕೆಟ್‌ಗಳನ್ನು 8 ರನ್‌ ಅಂತರದಲ್ಲಿ ಉರುಳಿಸಿದ ಲಕ್ನೋ ತುಸು ನಿರಾಳವಾಯಿತು. 7ನೇ ಬೌಲರ್‌ ರೂಪದಲ್ಲಿ, ಕಟ್ಟಕಡೆಯವರಾಗಿ ಬೌಲಿಂಗ್‌ಗೆ ಇಳಿದ ಸ್ಪಿನ್ನರ್‌ ಬಿಷ್ಣೋಯಿ ಆರಂಭಿಕ ಜೋಡಿಯನ್ನು ಬೇರ್ಪಡಿಸಿದರು.
ವನ್‌ಡೌನ್‌ನಲ್ಲಿ ಬಂದ ಶಿವಂ ದುಬೆ ಕೂಡ ಸಿಡಿದು ನಿಂತರು. ಚಿಕ್ಕದಾದ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್‌, ಒಂದು ಬೌಂಡರಿ ನೆರವಿನಿಂದ 27 ರನ್‌ ಕೊಡುಗೆ ಸಲ್ಲಿಸಿದರು. ಮೊಯಿನ್‌ ಅಲಿ ಗಳಿಕೆ 19 ರನ್‌ (13 ಎಸೆತ, 3 ಬೌಂಡರಿ).

ಆದರೆ ಬೆನ್‌ ಸ್ಟೋಕ್ಸ್‌ (8), ರವೀಂದ್ರ ಜಡೇಜ (3) ಕ್ಲಿಕ್‌ ಆಗಲಿಲ್ಲ. ಧೋನಿ 3 ಎಸೆತ ಎದುರಿಸಿ 2 ಸಿಕ್ಸರ್‌ ಸಿಡಿಸಿದರು. ಈ ಮೂವರ ವಿಕೆಟ್‌ ಡೆತ್‌ ಓವರ್‌ಗಳಲ್ಲಿ ಉರುಳಿತು. ಇಲ್ಲಿ ಅಂಬಾಟಿ ರಾಯುಡು ಸ್ಫೋಟಕ ಆಟವಾಡಿದ್ದರಿಂದ ಚೆನ್ನೈ ಮೊತ್ತ ಇನ್ನೂರರ ಗಡಿ ದಾಟಿ ಬೆಳೆಯಿತು. ರಾಯುಡು ಗಳಿಕೆ 14 ಎಸೆತಗಳಿಂದ ಅಜೇಯ 27 ರನ್‌. ಇದು 2 ಬೌಂಡರಿ, 2 ಸಿಕ್ಸರ್‌ಗಳನ್ನು ಒಳಗೊಂಡಿತ್ತು.

ಲಕ್ನೋ ಪರ ಮಾರ್ಕ್‌ ವುಡ್‌ ಮತ್ತು ರವಿ ಬಿಷ್ಣೋಯಿ ತಲಾ 3 ವಿಕೆಟ್‌ ಕೆಡವಿದರು.

ಸ್ಕೋರ್‌ ಪಟ್ಟಿ
ಚೆನ್ನೈ ಸೂಪರ್‌ ಕಿಂಗ್ಸ್‌
ರುತುರಾಜ್‌ ಗಾಯಕ್ವಾಡ್‌ ಸಿ ವುಡ್‌ ಬಿ ಬಿಷ್ಣೋಯಿ 57
ಡೇವನ್‌ ಕಾನ್ವೇ ಸಿ ಪಾಂಡ್ಯ ಬಿ ವುಡ್‌ 47
ಶಿವಂ ದುಬೆ ಸಿ ವುಡ್‌ ಬಿ ಬಿಷ್ಣೋಯಿ 27
ಮೊಯಿನ್‌ ಅಲಿ ಸ್ಟಂಪ್ಡ್ ಪೂರಣ್‌ ಬಿ ಬಿಷ್ಣೋಯಿ 19
ಬೆನ್‌ ಸ್ಟೋಕ್ಸ್‌ ಸಿ ಯಶ್‌ ಬಿ ಆವೇಶ್‌ 8
ಅಂಬಾಟಿ ರಾಯುಡು ಔಟಾಗದೆ 27
ರವೀಂದ್ರ ಜಡೇಜ ಸಿ ಬಿಷ್ಣೋಯಿ ಬಿ ವುಡ್‌ 3
ಎಂ.ಎಸ್‌. ಧೋನಿ ಸಿ ಬಿಷ್ಣೋಯಿ ಬಿ ವುಡ್‌ 12
ಮಿಚೆಲ್‌ ಸ್ಯಾಂಟ್ನರ್‌ ಔಟಾಗದೆ 1
ಇತರ 16
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 217
ವಿಕೆಟ್‌ ಪತನ: 1-110, 2-118, 3-150, 4-166, 5-178, 6-203, 7-215.
ಬೌಲಿಂಗ್‌: ಕೈಲ್‌ ಮೇಯರ್ 2-0-16-0
ಆವೇಶ್‌ ಖಾನ್‌ 3-0-30-1
ಕೃಣಾಲ್‌ ಪಾಂಡ್ಯ 2-0-21-0
ಕೆ. ಗೌತಮ್‌ 1-0-20-0
ಮಾರ್ಕ್‌ ವುಡ್‌ 4-0-49-3
ಯಶ್‌ ಠಾಕೂರ್‌ 4-0-36-0
ರವಿ ಬಿಷ್ಣೋಯಿ 4-0-28-3
ಲಕ್ನೋ ಸೂಪರ್‌ ಜೈಂಟ್ಸ್‌
ಕೆ.ಎಲ್‌. ರಾಹುಲ್‌ ಸಿ ಗಾಯಕ್ವಾಡ್‌ ಬಿ ಅಲಿ 20
ಕೈಲ್‌ ಮೇಯರ್ ಸಿ ಕಾನ್ವೇ ಬಿ ಅಲಿ 53
ದೀಪಕ್‌ ಹೂಡಾ ಸಿ ಸ್ಟೋಕ್ಸ್‌ ಬಿ ಸ್ಯಾಂಟ್ನರ್‌ 2
ಕೃಣಾಲ್‌ ಪಾಂಡ್ಯ ಸಿ ಜಡೇಜ ಬಿ ಅಲಿ 9
ಮಾರ್ಕಸ್‌ ಸ್ಟೋಯಿನಿಸ್‌ ಬಿ ಅಲಿ 21
ನಿಕೋಲಸ್‌ ಪೂರಣ್‌ ಸಿ ಸ್ಟೋಕ್ಸ್‌ ಬಿ ದೇಶಪಾಂಡೆ 32
ಆಯುಷ್‌ ಬದೋನಿ ಸಿ ಧೋನಿ ಬಿ ದೇಶಪಾಂಡೆ 23
ಕೃಷ್ಣಪ್ಪ ಗೌತಮ್‌ ಔಟಾಗದೆ 17
ಮಾರ್ಕ್‌ ವುಡ್‌ ಔಟಾಗದೆ 10
ಇತರ 18
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟ್‌ಗೆ) 205
ವಿಕೆಟ್‌ ಪತನ: 1-79, 2-82, 3-82, 4-105, 5-130, 6-156, 7-195
ಬೌಲಿಂಗ್‌:
ದೀಪಕ್‌ ಚಹರ್‌ 4-0-55-0
ಬೆನ್‌ ಸ್ಟೋಕ್ಸ್‌ 1-0-18-0
ತುಷಾರ್‌ ದೇಶಪಾಂಡೆ 4-0-45-2
ಮೊಯಿನ್‌ ಅಲಿ 4-0-26-4
ಮಿಚೆಲ್‌ ಸ್ಯಾಂಟ್ನರ್‌ 4-0-21-1
ರಾಜ್‌ವರ್ಧನ್‌ 2-0-24-0
ರವೀಂದ್ರ ಜಡೇಜ 1-0-14-0

Advertisement

Udayavani is now on Telegram. Click here to join our channel and stay updated with the latest news.

Next