Advertisement

IPL: ಚೆನ್ನೈ vs ಆರ್‌ಸಿಬಿ ಮೊದಲ ಕದನ

11:01 PM Mar 21, 2024 | Team Udayavani |

ಚೆನ್ನೈ: ಕ್ರಿಕೆಟ್‌ ಅಭಿಮಾನಿಗಳ ಬಹುನಿರೀಕ್ಷಿತ ಐಪಿಎಲ್‌ ಕ್ರಿಕೆಟ್‌ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಚೆನ್ನೈನ ಚೆಪಾಕ್‌ ಮೈದಾನದಲ್ಲಿ ಶುಕ್ರವಾರ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವಿನ ಸೆಣಸಾಟದೊಂದಿಗೆ 17ನೇ ಆವೃತ್ತಿಯ ಐಪಿಎಲ್‌ಗೆ ಚಾಲನೆ ಲಭಿಸಲಿದೆ.

Advertisement

ಐಪಿಎಲ್‌ ಆರಂಭಕ್ಕೆ ಮೊದಲೇ ಕೂಲ್‌ ಕ್ಯಾಪ್ಟನ್‌ ಖ್ಯಾತಿಯ ಮಹೇಂದ್ರ ಸಿಂಗ್‌ ಧೋನಿ, ಐದು ಬಾರಿಯ ಚಾಂಪಿಯನ್‌ ಚೆನ್ನೈ ತಂಡದ ನಾಯಕತ್ವವನ್ನು ಯುವ ಕ್ರಿಕೆಟಿಗ ಋತುರಾಜ್‌ ಗಾಯಕ್ವಾಡ್‌ಗೆ ಹಸ್ತಾಂತರಿಸಿ ದ್ದಾರೆ. ಆರ್‌ಸಿಬಿ ವಿರುದ್ಧದ ಉದ್ಘಾಟನಾ ಪಂದ್ಯಕ್ಕೂ ಮುನ್ನವೇ ತಂಡದಲ್ಲಿನ ಈ ಬದಲಾವಣೆ, ಸಿಎಸ್‌ಕೆ ಅಭಿಮಾನಿಗಳನ್ನು ಆಘಾತಕ್ಕೆ ನೂಕಿದೆ. ಆದರೆ ಈ ಬಗ್ಗೆ ಧೋನಿ ಎರಡು ವಾರಗಳ ಹಿಂದೆಯೇ ಸುಳಿವು ನೀಡಿದ್ದರು. ಐಪಿಎಲ್‌ ಹೊಸ ಆವೃತ್ತಿಯಲ್ಲಿ ಹೊಸ ಪಾತ್ರ ವಹಿಸಲಿದ್ದೇನೆ ಎಂದು ಧೋನಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ಅದೀಗ ನಿಜವಾಗಿದೆ.

ಆರ್‌ಸಿಬಿಗೆ ಚೊಚ್ಚಲ ಪ್ರಶಸ್ತಿ ಕನಸು: ಐದು ಬಾರಿ ಪ್ರಶಸ್ತಿ ಗೆದ್ದು, ಐಪಿಎಲ್‌ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಚಾಂಪಿಯನ್‌ ಪಟ್ಟಕ್ಕೇರಿದ ತಂಡವಾಗಿ ಮುಂಬೈ ಇಂಡಿಯನ್ಸ್‌ ಜತೆಗೆ ಸ್ಥಾನ ಹಂಚಿಕೊಂಡಿರುವ ಸಿಎಸ್‌ಕೆ, 6ನೇ ಪ್ರಶಸ್ತಿಯ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿದೆ. ಇದೇ ವೇಳೆ ಮಹಿಳಾ ಪ್ರೀಮಿಯರ್‌ ಲೀಗ್‌ ಕೂಟದ ಪ್ರಶಸ್ತಿಯನ್ನು ಆರ್‌ಸಿಬಿ ವನಿತಾ ತಂಡವು ಜಯಿಸಿದೆ. ಹಾಗಾಗಿ ಇದೇ ಸ್ಫೂರ್ತಿಯಲ್ಲಿ, ಪುರುಷರ ತಂಡವೂ ಚೊಚ್ಚಲ ಬಾರಿ ಕಪ್‌ ಗೆಲ್ಲುವ ವಿಶ್ವಾಸದೊಂದಿಗೆ ಟೂರ್ನಿ ಆರಂಭಿಸುತ್ತಿದ್ದಾರೆ. ಆದರೆ ಈ ಕನಸು ಸಾಕಾರಗೊಳ್ಳಲು ಆರ್‌ಸಿಬಿ, ಮೊದಲ ಪಂದ್ಯದಿಂದಲೇ ಗೆಲುವಿನ ಓಟ ಆರಂಭಿಸಬೇಕಾಗಿದೆ. ಆದರಿದು ಸುಲಭದ ಮಾತೇನಲ್ಲ.

ಹೆಬ್ಬೆರಳ ಗಾಯದಿಂದ ಡೆವೋನ್‌ ಕಾನ್ವೇ ಆರಂಭದ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇದರಿಂದ ತಂಡಕ್ಕೆ ಸ್ವಲ್ಪಮಟ್ಟಿನ ಹೊಡೆತ ಬೀಳುವ ಸಾಧ್ಯತೆಯಿದೆ. ಆದರೆ ಉತ್ತಮ ಫಾರ್ಮ್ನಲ್ಲಿರುವ ರಚಿನ್‌ ರವೀಂದ್ರ, ಮಧ್ಯಮ ಕ್ರಮಾಂಕದಲ್ಲಿ ನ್ಯೂಜಿಲ್ಯಾಂಡಿನ ಡೆರಿಲ್‌ ಮಿಚೆಲ್‌ ತಂಡದ ಬ್ಯಾಟಿಂಗ್‌ಗೆ ಬಲ ತುಂಬಲಿದ್ದಾರೆ. ಇದರ ಜತೆ ಅಜಿಂಕ್ಯ ರಹಾನೆ, ಆರಂಭಿಕ ಋತುರಾಜ್‌ ಗಾಯಕ್ವಾಡ್‌ ಅವರ ಉಪಸ್ಥಿತಿಯಿಂದ ತಂಡದ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಗಾಯಕ್ವಾಡ್‌ ಇತ್ತೀಚೆಗೆ ನಡೆದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಕೂಟದಲ್ಲಿ ಮಹಾರಾಷ್ಟ್ರ ಪರ ಗರಿಷ್ಠ ರನ್‌ ಪೇರಿಸಿದ ಸಾಧಕರಾಗಿದ್ದರು.

ಕಾನ್ವೇ ಜತೆ ಶ್ರೀಲಂಕಾದ ಮತೀಶ ಪತಿರಣ ಕೂಡ ಆರಂಭದ ಕೆಲವು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಅವರು ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ ವೇಳೆ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.

Advertisement

ಆರ್‌ಸಿಬಿಗೆ ಕೊಹ್ಲಿ, ಪ್ಲೆಸಿಸ್‌ ಬಲ: ಎರಡು ತಿಂಗಳ ವಿಶ್ರಾಂತಿ ಬಳಿಕ ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳಿರುವ ವಿರಾಟ್‌ ಕೊಹ್ಲಿ, ಆಸ್ಟ್ರೇಲಿಯದ ದಿಗ್ಗಜ ಗ್ಲೆನ್‌ ಮ್ಯಾಕ್ಸ್‌ವೆಲ್‌, ನಾಯಕ ಫಾ ಡು ಪ್ಲೆಸಿಸ್‌ ಅವರು ಆರ್‌ಸಿಬಿ ತಂಡದ ಬ್ಯಾಟಿಂಗ್‌ ಬಲದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅವರಿಬ್ಬರು ಇನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ. ಆದರೆ ಕ್ಯಾಮೆರಾನ್‌ ಗ್ರೀನ್‌ ಕೂಡ ತಂಡದಲ್ಲಿರುವ ಕಾರಣ, ಆರಂಭಿಕ ಹೊಡೆತದಿಂದ ತಪ್ಪಿಸಿಕೊಳ್ಳಲು ಕೊಹ್ಲಿ, ಅಥವಾ ಪ್ಲೆಸಿಸ್‌ ಬ್ಯಾಟಿಂಗ್‌ ಕ್ರಮಾಂಕ ಬದಲಾಯಿಸುವ ಸಾಧ್ಯತೆಯಿದೆ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸಿಲಿದ್ದಾರೆ. ಆರ್‌ಸಿಬಿಯ ಬೌಲಿಂಗ್‌  ಪಡೆ ಬಲಿಷ್ಠವಾಗಿದೆ. ಮೊಹಮ್ಮದ್‌ ಸಿರಾಜ್‌, ಲಾಕಿ ಫ‌ರ್ಗ್ಯುಸನ್‌, ಅಲ್ಜಾರಿ ಜೋಸೆಫ್, ಕರ್ಣ ಶರ್ಮ, ಆಕಾಶ್‌ ದೀಪ್‌ ಉತ್ತಮ ಫಾರ್ಮ್ನಲ್ಲಿದ್ದಾರೆ.

ಚೆನ್ನೈಕಿಂಗ್ಸ್‌ :

ಬಲ: ಬಲಿಷ್ಠ ಬ್ಯಾಟಿಂಗ್‌ ಬಳಗ, ಕೆಳ ಕ್ರಮಾಂಕದಲ್ಲೂ ಬ್ಯಾಟಿಂಗ್‌ ಮಾಡಬಲ್ಲ ಅನುಭವಿಗಳಿದ್ದಾರೆ.

ದೌರ್ಬಲ್ಯ: ಆರಂಭಿಕ ಬ್ಯಾಟರ್‌ಗಳು ವೈಫ‌ಲ್ಯ ಅನುಭವಿಸುವ ಭೀತಿ. ಅನುಭವಿಗಳ ಫಾರ್ಮ್ ಬಗ್ಗೆ ಖಾತರಿಯಿಲ್ಲ.

ಆರ್‌ಸಿಬಿ :

ಬಲ: ಆಕ್ರಮಣಕಾರಿ ಬ್ಯಾಟರ್‌ಗಳೇ ತಂಡದ ಬಲ.

ದೌರ್ಬಲ್ಯ: ತಂಡ ಫಾ ಡು ಪ್ಲೆಸಿಸ್‌, ವಿರಾಟ್‌ ಕೊಹ್ಲಿ ಮತ್ತು ಗ್ಲೆನ್‌ ಮ್ಯಾಕ್ಸ್‌ ವೆಲ್‌ಗೆ ಹೆಚ್ಚು ಅವಲಂಬಿತವಾಗಿದೆ.

ಅಂಕಣ ಗುಟ್ಟು :

ಇಲ್ಲಿನ ಚಿಪಾಕ್‌ ಪಿಚ್‌ ನಿಧಾನವಾದ ಸ್ಪಿನ್‌ ಸ್ನೇಹಿ ಆಗಿದೆ. ಬ್ಯಾಟಿಂಗಿಗೆ ತುಸು ಸವಾಲಿನ ಪಿಚ್‌. ಸ್ಪಿನ್‌ ಬೌಲರ್‌ಗಳಿಗೆ ಇಲ್ಲಿನ ಪಿಚ್‌ ಹೆಚ್ಚಿನ ಅನುಕೂಲಕರ ಪರಿಸ್ಥಿತಿಯನ್ನು ಒದಗಿಸಲಿದೆ. ಐಪಿಎಲ್‌ ಇತಿಹಾಸದುದ್ದಕ್ಕೂ ಇಲ್ಲಿ ಕೇವಲ ನಾಲ್ಕು ಬಾರಿ ತಂಡವೊಂದು 210 ಪ್ಲಸ್‌ ರನ್‌ ಪೇರಿಸಿದೆ.

ಮಳೆ ಸಾಧ್ಯತೆಯಿಲ್ಲ :

ಶುಕ್ರವಾರ ಚೆನ್ನೈಯ ಹವಾಮಾನವು ಆಟಕ್ಕೆ ಪೂರಕವಾಗಿದೆ. ಆಕಾಶ ಶುಭ್ರವಾಗಿದ್ದು ದಿನವಿಡೀ ಬಿಸಿಲಿನ ವಾತಾವರಣ ಇರಲಿದೆ.

ಸಂಭಾವ್ಯ ತಂಡಗಳು:

ಆರ್‌ಸಿಬಿ: ಫಾ ಡು ಪ್ಲೆಸಿಸ್‌ (ನಾಯಕ), ವಿರಾಟ್‌ ಕೊಹ್ಲಿ, ರಜತ್‌ ಪಾಟೀದಾರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ಯಾಮೆರಾನ್‌ ಗ್ರೀನ್‌, ದಿನೇಶ್‌ ಕಾರ್ತಿಕ್‌, ಮಹಿಪಾಲ್‌ ಲೊಮ್ರಾರ್‌, ಆಕಾಶ್‌ದೀಪ್‌, ಮೊಹಮ್ಮದ್‌ ಸಿರಾಜ್‌, ಕರ್ಣ ಶರ್ಮ, ರೀಸ್‌ ಟಾಪ್ಲೆ.

ಗಮನಿಸಬೇಕಾದ ಆಟಗಾರ: ಪಾಟೀದಾರ್‌

ಚೆನ್ನೈ: ಋತುರಾಜ್‌ ಗಾಯಕ್ವಾಡ್‌ (ನಾಯಕ), ರಚಿನ್‌ ರವೀಂದ್ರ, ಮೋಯಿನ್‌ ಅಲಿ, ಡೆರಿಲ್‌ ಮಿಚೆಲ್‌, ಶಿವಂ ದುಬೆ, ರವೀಂದ್ರ ಜಡೇಜ, ಮಹೇಂದ್ರ ಸಿಂಗ್‌ ಧೋನಿ, ಶಾದೂìಲ್‌ ಠಾಕೂರ್‌, ದೀಪಕ್‌ ಚಹರ್‌, ತುಷಾರ್‌ ದೇಶಪಾಂಡೆ, ಮಹೀಶ್‌ ತೀಕ್ಷಣ.

ಗಮನಿಸಬೇಕಾದ ಆಟಗಾರ: ದೀಪಕ್‌ ಚಹರ್‌

ನೇರ ಪ್ರಸಾರ:

ಪಂದ್ಯ ಆರಂಭ: ರಾತ್ರಿ 8:00 ಕ್ಕೆ

ಸ್ಥಳ: ಎಂ.ಎ.ಚಿದಂಬಂ ಮೈದಾನ, ಚೆನ್ನೈ

Advertisement

Udayavani is now on Telegram. Click here to join our channel and stay updated with the latest news.

Next