ಚೆನ್ನೈ: ಈ ಬಾರಿಯ ಐಪಿಎಲ್ ತಂಡಗಳ ರೆಟೆನ್ಶನ್ ಲಿಸ್ಟ್ ನಲ್ಲಿ ಗಮನ ಸೆಳೆದ ಹೆಸರುಗಳಲ್ಲಿ ಒಂದು ಮಹೇಂದ್ರ ಸಿಂಗ್ ಧೋನಿ. 42 ವರ್ಷ ಪ್ರಾಯದ ಧೋನಿ ಅವರು ಈ ಮೂಲಕ ಮತ್ತೊಂದು ಸೀಸನ್ ಆಡುವುದು ಖಚಿತವಾಗಿದೆ. ಕಳೆದ ಸೀಸನ್ ನಲ್ಲಿ ಕಪ್ ಗೆದ್ದ ಬಳಿಕ ಧೋನಿ ಅವರು, “ನಿವೃತ್ತಿ ಹೊಂದಲು ಇದು ಸರಿಯಾದ ಸಮಯ. ಆದರೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಯ ಕಾರಣದಿಂದ ಒಂದು ವರ್ಷ ಮತ್ತೆ ಆಡುತ್ತೇನೆ” ಎಂದಿದ್ದರು. ಇದರ ಪ್ರಕಾರ 2024ರ ಸೀಸನ್ ಧೋನಿಯ ಕೊನೆಯ ಸೀಸನ್ ಆಗಿರಬಹುದು.
ಈ ಹಿಂದೆ ರವೀಂದ್ರ ಜಡೇಜಾ ಅವರನ್ನು ಸಿಎಸ್ ಕೆ ನಾಯಕರನ್ನಾಗಿ ನೇಮಿಸಲಾಗಿತ್ತು. ಆದರೆ ಜಡೇಜಾ ನಾಯಕತ್ವ ನಿಭಾಯಿಸಲು ವಿಫಲರಾದ ಬಳಿಕ ಧೋನಿಯೇ ಜವಾಬ್ದಾರಿ ಹೊತ್ತುಕೊಂಡಿದ್ದರು. ಆದರೆ ಈಗ ಮತ್ತೆ ಹೊಸ ನಾಯಕನ ಹುಡುಕಾಟದಲ್ಲಿದೆ ಚೆನ್ನೈ.
ಇದೇ ವೇಳೆ ಸಿಎಸ್ ಕೆ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ ಅವರನ್ನು ನಾಯಕನ ಸ್ಥಾನಕ್ಕಾಗಿ ಸಂಪರ್ಕಿಸಿತ್ತು, ಆದರೆ ಸಂಜು ಅದನ್ನು ತಿರಸ್ಕರಿಸಿದ್ದರು. ಭವಿಷ್ಯದಲ್ಲಿ ಇದು ಸಾಧ್ಯವಾಗಬಹುದು ಎಂದು ರವಿ ಅಶ್ವಿನ್ ಹೇಳಿದ್ದರೆಂದು ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಪೋಸ್ಟ್ ಮಾಡಿದ್ದರು.
ಸಂಜು ಸ್ಯಾಮ್ಸನ್ ಅವರ ನಾಯಕತ್ವದಲ್ಲಿ ಆಡುವ ರವಿಚಂದ್ರನ್ ಅಶ್ವಿನ್ ಅವರು ಈ ಮಾತನ್ನು ತಳ್ಳಿಹಾಕಿದ್ದು, “ಸುಳ್ಳು ಸುದ್ದಿ, ನನ್ನನ್ನು ಹೆಸರಿಸಿ ಸುಳ್ಳು ಹೇಳಬೇಡಿ’ ಎಂದು ಸ್ಪಷ್ಟನೆ ನೀಡಿದ್ದಾರೆ.