Advertisement

ಮುಂದಿನ ವರ್ಷ ಚೆನ್ನೈ ತಂಡದಲ್ಲಿ ಭಾರಿ ಬದಲಾವಣೆ: ಯುವ ಆಟಗಾರರಿಗೆ ಮಣೆ ಹಾಕಲಿರುವ ಸಿಎಸ್ ಕೆ

09:54 AM May 15, 2019 | keerthan |

ಚೆನ್ನೈ: ಬಹುತೇಕ ಹಿರಿಯ ಆಟಗಾರರನ್ನೇ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಐಪಿಎಲ್ ಆವೃತ್ತಿಗೆ ಬದಲಾವಣೆ ಮಾಡುವ ಸೂಚನೆ ನೀಡಿದೆ. ತಂಡದ ಮುಖ್ಯ ತರಬೇತುದಾರರಾಗಿರುವ ಸ್ಟೀಫನ್ ಫ್ಲೆಮಿಂಗ್ ತಂಡಕ್ಕೆ ಯುವ ಆಟಗಾರರನ್ನು ಆಯ್ಕೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.

Advertisement

ಕಳೆದ ರವಿವಾರ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ್ದ ಫ್ಲೆಮಿಂಗ್ ನಮ್ಮ ತಂಡದಲ್ಲಿ ಹಿರಿಯ ಆಟಗಾರರೇ ಇರುವುದು. ಹಾಗಾಗಿಯೂ ನಾವು ಕಳೆದ ವರ್ಷ ಚಾಂಪಿಯನ್ ಆಗಿದ್ದೆವು, ಈ ವರ್ಷ ಫೈನಲ್ ತಲುಪಿದ್ದೇವೆ. ಇದು ಉತ್ತಮ ವಿಚಾರ. ಆದರೆ ಮುಂದಿನ ದಿನಗಳಲ್ಲಿ ತಂಡವನ್ನು ಮರು ನಿರ್ಮಾಣ ಮಾಡುವ ಅಗತ್ಯವಿದೆ ಎಂದರು.

ಈ ವರ್ಷದ ಐಪಿಎಲ್ ನಲ್ಲಿ ನಮ್ಮ ತಂಡದ ಬೌಲಿಂಗ್ ಉತ್ತಮ ಮಟ್ಟದಲ್ಲಿತ್ತು. ಆದರೆ ಬ್ಯಾಟಿಂಗ್ ನಲ್ಲಿ ಸಮಸ್ಯೆ ಕಂಡು ಬಂತು. ಮುಂದಿನ ಆವೃತ್ತಿಗೆ ಬೇರೆ ತಂಡಗಳಂತೆ ನಾವು ಕೂಡಾ ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅಗತ್ಯವಿದೆ ಎಂದರು.


ಈಗ ಐಪಿಎಲ್ ಮುಗಿದಿದ್ದು ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಕ್ರಿಕೆಟ್ ಕಡೆಗೆ ಗಮನ ಹರಿಸಲಿದ್ದಾರೆ. ಅವರು ವಿಶ್ವಕಪ್ ಮುಗಿಸಿ ಬಂದ ನಂತರ ಚೆನ್ನೈತಂಡದ ಭವಿಷ್ಯದ ಬಗ್ಗೆ ಚರ್ಚೆ ಮಾಡಲಿದ್ದೇವೆ. ಧೋನಿಯವರೇ ಹೊಸ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ ಎಂದು ಐಪಿಎಲ್ ನ ಯಶಸ್ವಿ ಕೋಚ್ ಗಳಲ್ಲಿ ಒಬ್ಬರಾದ ಫ್ಲೆಮಿಂಗ್ ನುಡಿದರು.

ಯಾರನ್ನು ಕೈ ಬಿಡಬಹುದು: ವಯಸ್ಸಿನ ಆಧಾರದಲ್ಲಿ ಕೆಲ ಕ್ರಿಕೆಟಿಗರನ್ನು ಚೆನ್ನೈತಂಡ ಕೈ ಬಿಡುವ ಸಾಧ್ಯತೆ ಇದೆ. ಯಾಕೆಂದರೆ ಇವರು ಫೀಲ್ಡಿಂಗ್ ನಲ್ಲಿ ಕಷ್ಟ ಪಡುತ್ತಾರೆ. ಇದೇ ಕಾರಣಕ್ಕೆ ಧೋನಿ ಭಾರತ ತಂಡದಲ್ಲಿ ಸೆಹವಾಗ್, ದ್ರಾವಿಡ್ ಮುಂತಾದವರನ್ನು ಕೈ ಬಿಟ್ಟಿದ್ದನ್ನು ಇಲ್ಲಿ ನೆನಪಿಸಬಹುದು. ಮುರಳಿ ವಿಜಯ್ ( 34 ವರ್ಷ), ಶೇನ್ ವ್ಯಾಟ್ಸನ್ ( 37 ವರ್ಷ), ಅಂಬಾಟಿ ರಾಯುಡು (33 ವರ್ಷ), ಕೇದಾರ್ ಜಾಧವ್ (33 ವರ್ಷ) ಇಮ್ರಾನ್ ತಾಹಿರ್ ( 39 ವರ್ಷ), ಹರ್ಭಜನ್ ಸಿಂಗ್ ( 38 ವರ್ಷ), ಡ್ವೇನ್ ಬ್ರಾವೋ (35 ವರ್ಷ). ಈ ಆಟಗಾರರು ಮುಂದಿನ ವರ್ಷಕ್ಕೆ ಚೆನ್ನೈ ಕೈಬಿಡಬಹುದಾದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿದ್ದಾರೆ. ನಾಯಕ ಧೋನಿಗೆ 37 ವರ್ಷವಾದರೂ ಅವರು ಮುಂದುವರಿಯುವುದು ಬಹುತೇಕ ಖಚಿತ.

Advertisement
Advertisement

Udayavani is now on Telegram. Click here to join our channel and stay updated with the latest news.

Next